ADVERTISEMENT

ಸೂ‍ಪರ್ ಗಾಡ್ ಸಣ್ಣಯ್ಯ ಪುಸ್ತಕ ಪರಿಚಯ: ನಗರ, ಗ್ರಾಮ್ಯ ಬದುಕಿನ ಬಿಂಬಗಳು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 23:54 IST
Last Updated 8 ನವೆಂಬರ್ 2025, 23:54 IST
ಸೂಪರ್ ಗಾಡ್ ಸಣ್ಣಯ್ಯ
ಸೂಪರ್ ಗಾಡ್ ಸಣ್ಣಯ್ಯ   

ಇದು15 ಕಥೆಗಳನ್ನೊಳಗೊಂಡ ಕಥಾ ಸಂಕಲನ. ಚಲನಚಿತ್ರ ಗೀತೆ ರಚನೆಕಾರ ಹೃದಯ ಶಿವ ಅವರ ಮೊದಲ ಕಥಾ ಸಂಕಲನವಿದು. ಕನಕಪುರ ಭಾಗದ ಗ್ರಾಮ್ಯ ಬದುಕಿನ ಚಿತ್ರಣ ಕಟ್ಟಿಕೊಡುವ ಇಲ್ಲಿನ ಕಥೆಗಳು ಸರಳ ಭಾಷೆಯಿಂದ ಓದಿಸಿಕೊಳ್ಳುತ್ತವೆ. ಕೆಲ ಕಥೆಗಳು ಪುಟ್ಟದಾಗಿದ್ದರೂ ಕಥಾವಸ್ತುವಿನ ಕಾರಣಕ್ಕಾಗಿಯೇ ಓದುಗರ ಮನ ಸೆಳೆಯುತ್ತವೆ. 

ಯಾವುದೇ ಹಳ್ಳಿಯಲ್ಲೂ ಇರಬಹುದಾದ ಪರಿಸರ, ಅಲ್ಲಿನ ವಿಭಿನ್ನ ವ್ಯಕ್ತಿಗಳ ಕುತೂಹಲಭರಿತ ಕಥನಗಳು ಈ ಕಥಾಸಂಕಲನದ ವಿಶೇಷ. ಬಾಲ್ಯದಲ್ಲಿನ ತಮ್ಮ ಹಳ್ಳಿಯ ಅನುಭವ ಕಥನಗಳನ್ನೇ ಹೃದಯ ಶಿವ ಕಥೆಗಳ ಜೀವದ್ರವ್ಯವಾಗಿಸಿದ್ದಾರೆ. ಗ್ರಾಮೀಣ ಪರಿಸರದ ಜತೆಗೇ ನಗರ ಬದುಕಿನ ಅನುಭವಗಳೂ ಇಲ್ಲಿ ಕಥಾವಸ್ತುವಿನ ಸ್ವರೂಪ ತಳೆದಿರುವುದು ಗಮನಾರ್ಹ. ಹಾಗಾಗಿ, ಇಲ್ಲಿನ ಕಥೆಗಳು ನಗರ ಮತ್ತು ಗ್ರಾಮ್ಯ ಬದುಕಿನ ಪ್ರತಿಬಿಂಬದಂತಿವೆ. 

‘ಬುಂಡೆದಾಸನೆಂಬ ಹುಚ್ಚಯ್ಯ’ ಹಾಗೂ ‘ಸೂಪರ್ ಗಾಡ್ ಸಣ್ಣಯ್ಯ’ ಕಥೆಗಳು ಏಕವ್ಯಕ್ತಿ ಪಾತ್ರಧಾರಿ ಕಥೆಗಳಂತೆ ಮೇಲ್ನೋಟಕ್ಕೆ ಗೋಚರಿಸಿದರೂ, ಹುಚ್ಚಯ್ಯ, ಸಣ್ಣಯ್ಯ ಯಾವುದೇ ಹಳ್ಳಿಯಲ್ಲಿ ಇರಬಹುದಾದ ವ್ಯಕ್ತಿಗಳಂತೆ ಕಾಣಿಸುತ್ತಾರೆ. ಪೆದ್ದನೆಂಬಂತೆ ಕಾಣುವ ಹುಚ್ಚಯ್ಯ ಅನಾಥ ಪ್ರಜ್ಞೆಯಿಂದ ನರಳುತ್ತಿದ್ದರೂ, ಸ್ವಾಭಿಮಾನದ ಬದುಕಿನಲ್ಲೇ ಜೀವನ ಪ್ರೀತಿ ಕಂಡುಕೊಳ್ಳುತ್ತಲೇ ಊರಿನ ಮಕ್ಕಳು ವೃದ್ಧರಾದಿಯಾಗಿ ಎಲ್ಲರ ಮನದಲ್ಲಿ ಸದ್ದಿಲ್ಲದೇ ನೆಲೆನಿಂತ ಬಗೆಯನ್ನು ಹೃದಯ ಶಿವ ಸ್ವಗತದ ಧಾಟಿಯಲ್ಲೇ ಕಟ್ಟಿಕೊಟ್ಟಿದ್ದಾರೆ. ಧಾರ್ಮಿಕತೆಯ ಮುಖವಾಡ ಹೊತ್ತ ಅರ್ಚಕ ಸಣ್ಣಯ್ಯ, ದೇವರ ಹೆಸರಿನಲ್ಲಿ ಗ್ರಾಮಸ್ಥರನ್ನು ತನ್ನ ವಶಕ್ಕೊಳಪಡಿಸಿಕೊಳ್ಳುವಲ್ಲಿ ಇನ್ನೇನು ಸಫಲವಾಗಿಟ್ಟಬಿಟ್ಟ ಅನ್ನುವಷ್ಟರಲ್ಲಿ ಅವನೇ ಕಾನೂನಿನ ಕುಣಿಕೆಗೆ ಸಿಕ್ಕಿಬೀಳುವುದು ಕಥೆಗೆ ವಿಭಿನ್ನ ತಿರುವು ನೀಡುತ್ತದೆ. 

ADVERTISEMENT

‘ಸುಶೀಲಾ’, ‘ವೈಷ್ಣವಿ ಎಂಬ ಸುಂದರಿ’, ‘ಪ್ರಾಯಶ್ಚಿತ್ತ’ ಇತ್ಯಾದಿ ಕಥೆಗಳಲ್ಲಿ ಹೆಣ್ಣಿನ ಬದುಕನ್ನು ತೆರೆದಿಡುತ್ತಲೇ ಆಕೆಯಿನ್ನೂ ಶೋಷಣೆಯಿಂದ ಮುಕ್ತವಾಗಿಲ್ಲವೆಂಬುದನ್ನು ಸೂಕ್ಷ್ಮವಾಗಿ ಮನಗಾಣಿಸಲಾಗಿದೆ. ಸಕಾರಾತ್ಮಕ ಅಂತ್ಯದ ನಿರೀಕ್ಷೆಯ ಕೆಲ ಕಥೆಗಳು ಅಂತಿಮವಾಗಿ ನಕಾರಾತ್ಮಕವಾಗಿ ಕೊನೆಯಾಗಿ ಅಚ್ಚರಿಗೀಡು ಮಾಡುತ್ತವೆ. ಇಲ್ಲಿನ ಕೆಲ ಕಥೆಗಳಲ್ಲಿ ಕಂಡುಬರುವ ಸ್ವಗತ ಮತ್ತು ಸಿನಿಮೀಯ ಧಾಟಿಯ ನಿರೂಪಣೆ ಕಥೆಯ ಓಘಕ್ಕೆ ತುಸು ಅಡ್ಡಿಯೆನಿಸಿದರೂ, ಕಥಾಹಂದರಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿ
ರುವಲ್ಲಿ ಕಥೆಗಾರನ ಜಾಣ್ಮೆ ಎದ್ದು ಕಾಣುತ್ತದೆ.

ಕೃತಿ: ಸೂಪರ್ ಗಾಡ್ ಸಣ್ಣಯ್ಯ
(ಕಥಾ ಸಂಕಲನ)

ಲೇ: ಹೃದಯ ಶಿವ

ಪ್ರ: ಹರಿವು ಬುಕ್ಸ್, ಬೆಂಗಳೂರು

ಮೊ: 8088822171.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.