ದುರಾಸೆಯ ವಿವಿಧ ಘಟ್ಟಗಳನ್ನು ಬಿಡಿಸಿಡುತ್ತದೆ ಈ ಕಾದಂಬರಿ. ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಸಮುದಾಯದ ಜೀವನಶೈಲಿ ಆಹಾರ ಶೈಲಿ, ಉಳಿದ ಪಂಗಡಗಳೊಂದಿಗೆ ಹೊಂದಾಣಿಕೆಯ ಬದುಕು ಚಿತ್ರಿಸಲಾಗಿದೆ. ದುರಾಸೆ ಹೆಚ್ಚಿದಂತೆ ಕತ್ಲೆ ಕಾನು ಬಯಲಾಗುತ್ತದೆ. ಜೊತೆಗೆ ಮನುಷ್ಯತ್ವದ ಪದರೂ ಕಳಚಿಕೊಂಡು ತಾಯಿ ಮಗನ ಬಾಂಧವ್ಯದಲ್ಲಿಯೂ ಬಿರುಕು ಬರುತ್ತದೆ.
ಪ್ರೀತಿಯ ಕಣ್ಕಟ್ಟಿನೊಂದಿಗೆ ಮನೆ ಬಿಟ್ಟು ಹೋಗುವ ಜಾನಕಿ ಊರಿಗೆ ಮರಳುವಾಗ ಅದೆಷ್ಟು ದುರಂತಗಳನ್ನು ಕಾಣುತ್ತಾಳೆ, ಮಾನವೀಯತೆಯ ಮೂರ್ತಿವೆತ್ತ ತಿಪ್ಪನ ಪಾತ್ರ, ಕಾದಂಬರಿಯ ಜೀವಾಳವೇ ಆಗಿರುವ ಬಂಗಾರತ್ತೆಯ ವ್ಯಕ್ತಿತ್ವ, ಇಡೀ ಕಥನದಲ್ಲಿ ತಾನೂ ಒಂದು ಪಾತ್ರವೆಂಬಂತೆ ಇರುವ ಕಾನು, ಮನುಷ್ಯರೊಳಗಿನ ಮೃಗತ್ವವನ್ನೂ ಬಿಚ್ಚಿಡುತ್ತ ಹೋಗುತ್ತದೆ. ಪ್ರಕೃತಿಯ ಒಡನಾಟದಲ್ಲಿ ನೆಮ್ಮದಿಯಾಗಿದ್ದ ಬದುಕೊಂದು ಸಂಪತ್ತು ಸಂಗ್ರಹಕ್ಕೆ ಮುಂದಾದೊಡನೆ ಕಾಡು ಕಳೆದುಕೊಳ್ಳುತ್ತಾರೆ. ಊರಿನ ನೆಮ್ಮದಿಯೂ ಕಾಡಿನೊಂದಿಗೆ ಲೂಟಿಯಾಗುತ್ತದೆ. ಉತ್ತರ ಕನ್ನಡದ ಕಾನಿನನಲ್ಲಿ ಕಳೆದುಹೋಗುವ ನಾವು, ಪುಸ್ತಕ ಓದಿ ಮುಗಿಸುವುದರಲ್ಲಿ ಆ ಪಾತ್ರಗಳೆಲ್ಲ ಕಣ್ಮುಂದೆ ಹಾದು ಮನದೊಳಗಿಳಿಯುತ್ತವೆ. ಜಾತಿ ಮೀರಿದ ದೊಡ್ಡತನ, ಔದಾರ್ಯ, ಜಾತಿಯೊಳಗಿನ ವಾಂಛೆಗಳು ಸೂಕ್ಷ್ಮವಾಗಿ ಹಾದುಹೋಗುತ್ತ, ಗ್ರಾಮ ಭಾರತದ ಬದುಕು ಬದಲಾಗುವ ಚಿತ್ರಣ ಪ್ರಬಲವಾಗಿದೆ.
ಉಪ್ಪಾಗೆ ಹರಳು ಎಂಬುದು ಸಸ್ಯಜನ್ಯ ತುಪ್ಪ. ಈ ತುಪ್ಪದ ತಯಾರಿಯಲ್ಲಿ ಬದುಕಿನ ಕಡೆಗೋಲನ್ನೇ ಲೇಖಕಿ ಬರೆದಿದ್ದಾರೆ. ಹವ್ಯಕ ಭಾಷೆ, ಅಡುಗೆ ಖಾದ್ಯ ಜೀಂಗುಡುವ ಮಳೆ ಓದುಗನನ್ನು ಕಾಡುತ್ತವೆ. ಕಾನು ಕಾಣಿಸುತ್ತಲೇ ನಮ್ಮನ್ನೂ ಕಾಣಿಸುವ ಕೆಲಸ ಪುಸ್ತಕ ಮಾಡುತ್ತದೆ.
ಉಪ್ಪಾಗೆ ಹರಳು
ಲೇ: ಭಾರತಿ ಹೆಗಡೆ
ಪ್ರ: ಬಹುರೂಪಿ
ಸಂ: 70191 82729
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.