ಜಗತ್ತಿಗೆ ಶಾಂತಿಯ ಸಂದೇಶ ನೀಡಿರುವ ಮಹಾಸಂತ ಬುದ್ಧನ ಕುರಿತ ಸಾಹಿತ್ಯ ಪ್ರಪಂಚದ ಅನೇಕ ಭಾಷೆಗಳಲ್ಲಿ ವಿಪುಲವಾಗಿ ಸಿಗುತ್ತದೆ. ಕನ್ನಡದಲ್ಲೂ ಗದ್ಯ, ಕಾವ್ಯ, ಕಥೆ, ನಾಟಕ, ಮಹಾಕಾವ್ಯ ಪ್ರಕಾರದಲ್ಲಿ ಹೇರಳವಾಗಿ ದೊರೆತರೂ ಬುದ್ಧನ ಜೀವನ ಕುರಿತಾಗಿ ಕಾದಂಬರಿಗಳು ಅಷ್ಟಾಗಿ ಪ್ರಕಟಗೊಂಡಿಲ್ಲ. ಈ ಕೊರತೆಯನ್ನು ನೀಗಿಸುವ ಕಾದಂಬರಿಯೇ ಕಂನಾಡಿಗಾ ನಾರಾಯಣ ಅವರ ‘ಬುದ್ಧಯಾನ’.
ಈ ಕೃತಿಯು ಬುದ್ಧನನ್ನು ನೆಲದ ವಿವೇಕದಿಂದ ಚಿತ್ರಿಸುತ್ತದೆ. ಆತನನ್ನು ಅವತಾರ ಪುರುಷನೆಂಬ ಪೌರಾಣಿಕ ಚೌಕಟ್ಟಿನಿಂದ ಹೊರತಂದು, ಸಾಮಾನ್ಯ ಮನುಷ್ಯನೊಬ್ಬನ ಜ್ಞಾನದಾಹದ ಸಂಕೇತದಂತೆ ಚಿತ್ರಿಸುವ ಉಮೇದನ್ನು ಕಾದಂಬರಿಕಾರರು ಎಲ್ಲ ಹಂತಗಳಲ್ಲಿಯೂ ಪ್ರಕಟಿಸಿದ್ದಾರೆ.
ಸಿದ್ಧಾರ್ಥನನ್ನು ಹೆತ್ತು ತನ್ನ ಕರ್ತವ್ಯ ಮುಗಿಯಿತೆಂಬಂತೆ ಮಿಂಚಿನಂತೆ ನಿರ್ಗಮಿಸುವ ಮಾಯಾದೇವಿ ಮತ್ತು ಹೆತ್ತ ಮಗನಿಗಿಂತಲೂ ಹೆಚ್ಚಾಗಿ ಪೊರೆವ ಗೌತಮಿ ಹಾಗೂ ಗೌತಮನ ಪತ್ನಿ ಯಶೋಧರೆ, ಮುಂದೆ ಬರುವ ಕಿಸಾಗೋತಮಿ, ಆಮ್ರಪಾಲಿ ಮುಂತಾದ ಸ್ತ್ರೀಪಾತ್ರಗಳ ಪೋಷಣೆ ದೀರ್ಘಕಾಲ ಮನಸ್ಸನ್ನು ಆವರಿಸಿಕೊಳ್ಳುವಷ್ಟು ಸಶಕ್ತವಾಗಿ ಮೂಡಿಬಂದಿದೆ. ಶುದ್ಧೋದನ, ಆನಂದ ಮುಂತಾದ ಪುರುಷ ಪಾತ್ರ ಚಿತ್ರಣಕ್ಕಿಂತಲೂ ಹೆಚ್ಚು ತೀವ್ರವಾಗಿ ಲೇಖಕರು ಹೆಣ್ಣುಜೀವದ ಒಳತೋಟಿಯನ್ನು ಹಿಡಿಯಬಲ್ಲರೆಂಬುದಕ್ಕೆ ಮಾಯಾದೇವಿ, ಪ್ರಜಾಪತಿದೇವಿ, ಯಶೋಧರೆ, ಪಥಾಚರಿ, ಆಮ್ರಪಾಲಿ, ಕಿಸಾಗೋತಮಿಯರ ಅಂತರಂಗ ತೆರೆದುಕೊಳ್ಳುವ ಅಧ್ಯಾಯಗಳನ್ನು ಉದಾಹರಣೆಯಾಗಿ ಗಮನಿಸಬಹುದು.
ಕಥೆಯ ಕೇಂದ್ರವಾದ ಸಿದ್ಧಾರ್ಥನನ್ನು ಅಸಾಮಾನ್ಯತೆಯ ಚೌಕಟ್ಟಿನಿಂದ ಬಿಡಿಸಿ, ಸಾಮಾನ್ಯತೆಯೊಂದಿಗೇ ಜ್ಞಾನದತ್ತ ಸಾಗುವ ಪಯಣಿಗನಂತೆ ಕಾದಂಬರಿ ಚಿತ್ರಿಸುತ್ತದೆ. ದಾಯಾದಿ ಮಾತ್ಸರ್ಯವನ್ನು ಸಿದ್ಧಾರ್ಥ ಎದುರಿಸುವ ಬಗೆ, ನದಿ ನೀರಿನ ಗಲಭೆಯು ಕದನಕ್ಕೆ ಹೊರಳುವ ಸಂದರ್ಭದಲ್ಲಿ ಯುದ್ಧವಿರೋಧಿ ನಿಲುವಿನಿಂದ ಅದನ್ನು ನಿವಾರಿಸುವ ಬಗೆ, ಮಡದಿ– ಮಗನ ಮೋಹವು ಆವರಿಸಿಕೊಂಡು ತನ್ನ ಧ್ಯೇಯೋದ್ದೇಶಕ್ಕೆ ಅಡ್ಡಿಯಾಗದಂತೆ ವಹಿಸುವ ಎಚ್ಚರ, ಅರಮನೆಯನ್ನು ಬಿಟ್ಟು ಹೊರಡುವಾಗಲೂ ಕಟು ವಾಸ್ತವದ ಆಲೋಚನೆಗಳಿಂದ ದೂರಾಗದಿರುವುದು, ವರ್ಷಗಟ್ಟಲೆ ಮಾಡುವ ದೇಹದಂಡನೆ ಮತ್ತು ಮನೋನಿಗ್ರಹಗಳ ತಪಸ್ಸು ಹೀಗೆ ಎಲ್ಲೆಡೆಯೂ ಸಿದ್ಧಾರ್ಥ ಮನುಷ್ಯ ಪ್ರಯತ್ನದ ಪ್ರತಿರೂಪದಂತೆಯೇ ಕಾಣುತ್ತಾನೆ. ಪುರಾಣದ ಚೌಕಟ್ಟನ್ನು ಕಳಚಿಕೊಂಡು ಸಾಮಾನ್ಯತೆಯ ಚೌಕಟ್ಟಿನೊಳಗೆ ಚಿತ್ರಿತನಾಗುವ ಸಿದ್ಧಾರ್ಥ ಓದುಗರಿಗೆ ಹೆಚ್ಚು ಆಪ್ತನಾಗುತ್ತಾ ಹೋಗುತ್ತಾನೆ.
ಬುದ್ಧಯಾನ
ಲೇ: ಕಂನಾಡಿಗಾ ನಾರಾಯಣ
ಪ್ರ: ನವಕರ್ನಾಟಕ
ಸಂ: 08022161900
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.