ADVERTISEMENT

ಪುಸ್ತಕ ವಿಮರ್ಶೆ | ಸಹಸ್ರ ಶಿಲ್ಪಕಲೆಗಳ ಸುತ್ತ ...

ಪ್ರಜಾವಾಣಿ ವಿಶೇಷ
Published 24 ಡಿಸೆಂಬರ್ 2022, 19:30 IST
Last Updated 24 ಡಿಸೆಂಬರ್ 2022, 19:30 IST
ಚಾಲುಕ್ಯರ ಶಿಲ್ಪಕಲೆ
ಚಾಲುಕ್ಯರ ಶಿಲ್ಪಕಲೆ   

ಕಲೆಗಳ ಬೀಡು ಕರುನಾಡು. ಬೇಲೂರು, ಹಳೆಬೀಡು, ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದುವುಗಳು ಕರ್ನಾಟಕವನ್ನು ಕಲೆಯ ತವರು ಎನ್ನುವ ಮಾತಿಗೆ ಸಾಕ್ಷ್ಯವಾಗಿ ನಮ್ಮ ಮುಂದಿವೆ. ಅಲ್ಲಿನ ಕಲೆಗಳ ವಿಸ್ತಾರ, ಅವು ಕಣ್ಮುಂದೆ ಚಿತ್ರಿಸುವ ಸಾಂಸ್ಕೃತಿಕ ಕಥನ, ಸಂಸ್ಕೃತಿಯ ಅನಾವರಣ ಹಾಗೂ ಸಾಮ್ರಾಜ್ಯಗಳ ಕಥೆ, ಅವುಗಳ ಹಿಂದಿನ ಭವ್ಯ ಇತಿಹಾಸ ಒಂದೆರಡೇ! ಇವುಗ
ಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಕೌಶಲ ಸಿಗುವುದು ಅಪರೂಪವೇ ಸರಿ. ಹೀಗಾಗಿಯೇ ಇಂಥ ಪ್ರದೇಶಗಳನ್ನು ಒಂದೆರಡು ದಿನಗಳಲ್ಲಿ ಸುತ್ತಿ ಅರಿತು, ಕಣ್ತುಂಬಿಕೊಳ್ಳುವುದು ಕಷ್ಟಸಾಧ್ಯ. ಅಥವಾ ಅದು ಸೂಕ್ತವೂ ಅಲ್ಲ!

ಇಂತಹ ಸಾಗರದಲ್ಲಿ ಸದಾ ಈಜಾಡುವವರು ರೇಖಾಚಿತ್ರ ಕಲಾವಿದ ಪುಂಡಲೀಕ ಕಲ್ಲಿಗನೂರ್‌. ಕನ್ನಡದ ಹಲವು ದಿನಪತ್ರಿಕೆಗಳಲ್ಲಿನ ರೇಖೆಗಳ ಹಿಂದಿದ್ದ ಈ ಕೈ‌, ಇದೀಗ ಮಾರ್ಗದರ್ಶಿಯಂತೆ ಪ್ರವಾಸಿಗರಿಗೆ, ಅಧ್ಯಯನಾಸಕ್ತರ ಕೈಹಿಡಿದಿದೆ. ಈಗಾಗಲೇ ಬೇಲೂರು, ಹಳೆಬೀಡು ಶಿಲ್ಪಕಲಾ ಸಾಗರದಲ್ಲಿ ಮಿಂದು, ಗದಗ ಜಿಲ್ಲಾ ಪ್ರವಾಸಿ ತಾಣಗಳ ತಂಪನ್ನು ಕಣ್ತುಂಬಿಕೊಂಡು, ಗಜೇಂದ್ರಗಡ–ರೋಣ ತಾಲ್ಲೂಕುಗಳ ಶಿಲ್ಪಕಲಾ ದೇಗುಲಗಳ ವೈಶಿಷ್ಟ್ಯವನ್ನು ಪುಂಡಲೀಕ ಅವರು ಕನ್ನಡಿಗರ ಮುಂದಿರಿಸಿದ್ದಾರೆ. ಇದೀಗಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಮಹಾಕೂಟದಲ್ಲಿ ಹೆಜ್ಜೆ ಹಾಕಿ, ಕಲಾಕಾರನಾಗಿ ತಾನೂ ಕಲೆಯನ್ನು ಸವಿದು, ಛಾಯಾಚಿತ್ರಗಳು ಹಾಗೂ ಭರಪೂರ ಮಾಹಿತಿಯೊಂದಿಗೆ ಅಲ್ಲಿನ ಕಲೆಗಳನ್ನು ಓದುಗರಿಗೂ ಉಣಬಡಿಸಿದ್ದಾರೆ.

ಪುಂಡಲೀಕ ಅವರ ಐದು ವರ್ಷಗಳ ಸುತ್ತಾಣ, ಶ್ರಮ ಈ ಚಿತ್ರಸಂಪುಟ. ಕೃತಿಯ ಗಾತ್ರವೇ ಈ ಮಾತಿಗೆ ಸಾಕ್ಷ್ಯ. ಇಲ್ಲಿನ ಅಪೂರ್ವ ದೇವಾಲಯಗಳ, ಗುಹೆಗಳ ವಾಸ್ತುಶಿಲ್ಪಗಳ ನೆರಳಲ್ಲಿ ನಡೆದಾಡಿ ದಾಖಲಿಸುವ ಪ್ರಯತ್ನ ಇಲ್ಲಾಗಿದೆ. ‘ಇಷ್ಟು ದೊಡ್ಡ ಸಾಗರಸದೃಶ ಕಲಾಕೀರ್ತಿಯ ಒಂದು ಮಗ್ಗುಲಿನ ಪರಿಚಯ ಮಾಡಿಕೊಡುವ ಅಳಿಲು ಪ್ರಯತ್ನವಿದು. ಈ ಕೃತಿ ಪ್ರಾರಂಭವೂ ಅಲ್ಲ, ಅಂತ್ಯವೂ ಅಲ್ಲ’ ಎನ್ನುವುದು ಅವರ ಮಾತು. ಇಲ್ಲಿನ ಸಾವಿರಾರು ಛಾಯಾಚಿತ್ರಗಳ ಹಿಂದಿನ ರುವಾರಿಗಳಾದ ವಿಪಿನ್‌ ಬಾಳಿಗಾ, ಎಸ್‌. ರಾಘವೇಂದ್ರ ಹಾಗೂ ಮಂಜುನಾಥ ರಾಠೋಡ ಅವರು ಪಟ್ಟ ಕಷ್ಟ, ತಾನು ಅವರಿಗೆ ನೀಡಿದ ಸಂಕಷ್ಟವನ್ನೂ ಪುಂಡಲೀಕ ಅವರು ತಪ್ಪದೆ ನೆನಪಿಸಿಕೊಂಡಿದ್ದಾರೆ. ಛಾಯಾಚಿತ್ರಗಳ ಜೊತೆಗೆ ರೇಖೆಗಳೂ ಇಲ್ಲಿನ ಶಿಲ್ಪಕಲೆಗಳಿಗೆ ಜೀವತುಂಬಿವೆ. ವಿನ್ಯಾಸ, ಛಾಯಾಚಿತ್ರಗಳ ಗುಣಮಟ್ಟ, ಸರಳವಾದ ವಿವರಣೆ ಕೃತಿಯ ಜೀವಾಳ.

ADVERTISEMENT

***

ಕೃತಿ: ಚಾಲುಕ್ಯರ ಶಿಲ್ಪಕಲೆ (ಬಾದಾಮಿ ಐಹೊಳೆ ಪಟ್ಟದಕಲ್ಲು ಮತ್ತು ಮಹಾಕೂಟ)
ಸಂಪಾದನೆ: ಪುಂಡಲೀಕ ಕಲ್ಲಿಗನೂರು
ಪ್ರ: ಕನ್ನಡ ಪ್ರಕಾಶನ, ಗಜೇಂದ್ರಗಡ
ಸಂ: 9343760234
ಪುಟ: 520
ದರ: 2,400

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.