
ಏಳು ಮನೆ ಸಾಲು,
ಕವಿ, ಪತ್ರಕರ್ತ, ರಂಗಕರ್ಮಿ ಉಗಮ ಶ್ರೀನಿವಾಸ್ ಅವರ ‘ಏಳು ಮನೆ ಸಾಲು’ ಹೃದ್ಯ ವ್ಯಕ್ತಿಚಿತ್ರಗಳ ಸಂಕಲನ. ಇಲ್ಲಿನ ಎಲ್ಲ ಬರಹಗಳೂ ಪುಟ್ಟದಾಗಿದ್ದರೂ, ಬರಹದ ಕೇಂದ್ರದಲ್ಲಿರುವ ವ್ಯಕ್ತಿತ್ವಗಳು ಘನವಾದವೇ ಆಗಿವೆ. ಸೀಮಿತ ಚೌಕಟ್ಟಿನಲ್ಲಿಯೂ ತಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಂಡ ವಿಶಿಷ್ಟ ವ್ಯಕ್ತಿಗಳ ಪರಿಚಯಗಳು ಇಲ್ಲಿವೆ. ಭಿನ್ನ ಬದುಕುಗಳನ್ನು ಪರಿಚಯಿಸುವ ಇಲ್ಲಿನ ಬರಹಗಳ ಮೂಲಕ ಲೇಖಕರ ಸಾಮಾಜಿಕ ಬದುಕಿನ ಒಂದು ಆಯಾಮವನ್ನೂ ಪರಿಚಯಿಸಿಕೊಳ್ಳಬಹುದಾಗಿದೆ.
ವೈಯಕ್ತಿಕ ಬದುಕಿನೊಂದಿಗೆ ಸಾಹಿತ್ಯ, ರಾಜಕೀಯ, ರಂಗಭೂಮಿ, ಊರು–ಕೇರಿ ಎಲ್ಲವೂ ಈ ಕೃತಿಯಲ್ಲಿ ಇಡುಕಿರಿದಿವೆ. ವೀಚಿ, ಲಂಕೇಶ್, ಸಿಜಿಕೆ ಅವರೊಂದಿಗೆ ‘ಆಸ್ಪತ್ರೆಯ ಕವಿ ಷಡಕ್ಷರಿ’ಯೂ ಇಲ್ಲಿನ ಸ್ಮೃತಿಚಿತ್ರಗಳಲ್ಲಿದ್ದಾರೆ. ಇಂದಿರಾಗಾಂಧಿ ಅವರೊಂದಿಗೆ ಲೇಖಕರ ಅಜ್ಜಿಯೂ ಸಹೃದಯರಿಗೆ ಮುಖಾಮುಖಿಯಾಗುತ್ತಾರೆ.
ಉಗಮ ಅವರದು ಕವಿಸೂಕ್ಷ್ಮಗಳ ಹಾಗೂ ಪತ್ರಕರ್ತನ ಕಣ್ಣೋಟದ ಅಡಕ ಬರವಣಿಗೆ. ಯಾವುದನ್ನೂ ಅವರು ಲಂಬಿಸುವುದಿಲ್ಲ. ಹೆಚ್ಚು ವಿವರಗಳನ್ನೂ ನೀಡುವುದಿಲ್ಲ. ಆದರೆ, ಈ ಸಂಕಲನದ ಕಿರುಚಿತ್ರಗಳು ಹೇಳುವುದಕ್ಕಿಂತಲೂ ಮಿಗಿಲಾದ ಏನನ್ನೋ ಓದುಗರ ಗಮನಕ್ಕೆ ತರಲು ಹವಣಿಸುತ್ತಿರುವಂತಿವೆ. ಅದು ದೂಳು ಕುಳಿತ ಮೌಲ್ಯವಿರಬಹುದು, ಬಾಲ್ಯದ ಸವಿನೆನಪಿನ ನವಿಲುಗರಿ ಇರಬಹುದು, ಸ್ನೇಹಭಾವದ ಆರ್ದ್ರತೆ ಆಗಿರಬಹುದು, ಬದುಕಿನುದ್ದಕ್ಕೂ ಹಿಂಬಾಲಿಸಿಕೊಂಡು ಬಂದಿರುವ ಅನುಬಂಧದ ತಂತು ಇರಬಹುದು. ಇವೆಲ್ಲವೂ ಈ ಕೃತಿಯ ಬರಹಗಳಿಗೆ ಜೀವಸ್ಪರ್ಶ ನೀಡಿವೆ.
‘ಏಳು ಮನೆ ಸಾಲು’ ಎನ್ನುವ ಶೀರ್ಷಿಕೆ ಲೇಖಕರ ಊರುಮನೆಯೊಂದಿಗೆ ತಳಕು ಹಾಕಿಕೊಂಡಿರುವ ಒಂದು ಭಾವತಂತು. ಆದರೆ, ಈ ಏಳು ಎನ್ನುವುದು ಹಲವು ಪಟ್ಟಾಗಿ, ಲೇಖಕರ ಊರು–ಮನೆ ಓದುಗರದೂ ಆಗಿ ಪರಿಣಮಿಸುವುದು ಈ ಕೃತಿಯ ವಿಶೇಷ. ಪುಟ್ಟ ಪ್ರಬಂಧಗಳಂತೆಯೂ ಓದಿಸಿಕೊಳ್ಳುವ ಗುಣ ಇಲ್ಲಿನ ಮೂವತ್ತೆರಡು ಬರಹಗಳಿಗಿದೆ.
ಏಳು ಮನೆ ಸಾಲು
ಲೇ: ಉಗಮ ಶ್ರೀನಿವಾಸ್
ಪ್ರ: ಕಣಿವೆ ಪ್ರಕಾಶನ
ಸಂ: 98444 73764
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.