ADVERTISEMENT

ಹದಿನಾರು ಪೆಪ್ಪರ್‌ಮೆಂಟುಗಳು!

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 19:30 IST
Last Updated 30 ನವೆಂಬರ್ 2019, 19:30 IST
ಬೆಳ್ಳಿತೊರೆ
ಬೆಳ್ಳಿತೊರೆ   

ಚಿತ್ರಪ್ರಿಯರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಾಹಿತ್ಯದ ಆಸ್ವಾದಕರ ಪಾಲಿಗೂ ‘ಬೆಳ್ಳಿತೊರೆ’ ಸಿನಿಮಾ ಪ್ರಬಂಧಗಳ ಪುಸ್ತಕ, ಮತ್ತೆ ಮತ್ತೆ ಸವಿಯಬೇಕೆನಿಸುವ ಹದಿನಾರು ಪೆಪ್ಪರ್‌ಮೆಂಟುಗಳಿರುವ ಪೊಟ್ಟಣ. ಈ ಪೊಟ್ಟಣಕ್ಕೆ ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿಯೆಂಬ ಆಕರ್ಷಕ ರ‍್ಯಾಪರ್ ಕೂಡ ಇದೆ.

ಕನ್ನಡ ಚಿತ್ರರಂಗದ ಕುರಿತು ಬಂದಿರುವ ಸಾಹಿತ್ಯವೇ ಕಮ್ಮಿ. ಅವುಗಳಲ್ಲಿಯೂ ಇತಿಹಾಸ, ವ್ಯಕ್ತಿಚಿತ್ರಗಳ ಕುರಿತ ಕೃತಿಗಳೇ ಬಹುಪಾಲು. ಸಿನಿಮಾ ಚಿಂತನೆಯನ್ನು, ಅಭಿರುಚಿಯನ್ನು ಉದ್ದೀಪಿಸುವ ಕೃತಿಗಳು ವಿರಳ. ‘ಬೆಳ್ಳಿತೊರೆ’ ಸಾಹಿತ್ಯದ ದೋಣಿಯಲ್ಲಿ ಕುಳಿತು ಸಿನಿಮಾ ಎಂಬ ನದಿಯಲ್ಲಿ ವಿಹಾರ ಮಾಡುತ್ತದೆ. ಸಾಹಿತ್ಯ ಮತ್ತು ಸಿನಿಮಾ ಧಾರೆಗಳ ಸಂಗಮಸ್ಥಳದಲ್ಲಿ ಈ ಬರಹಗಳು ಹುಟ್ಟಿಕೊಂಡಿವೆ.

‘ಕನ್ನಡ ಸಾಂಸ್ಕೃತಿಕ ಮನಸ್ಸ’ನ್ನು ರೂಪಿಸುವಲ್ಲಿ ಕನ್ನಡ ಸಿನಿಮಾಗಳು ಹೇಗೆ ಕೆಲಸ ಮಾಡಿವೆ ಎಂಬುದರ ಶೋಧನೆಯೇ ಈ ಎಲ್ಲ ಪ್ರಬಂಧಗಳ ಹಿಂದಿರುವ ಆಶಯ.ಇಲ್ಲಿನ ಎಲ್ಲ ಪ್ರಬಂಧಗಳು ಇತಿಹಾಸದ ತುದಿಯಿಂದ ವರ್ತಮಾನದ ಬದಿಯವರೆಗೆ ನಿರರ್ಗಳವಾಗಿ ಓಡಾಡುತ್ತವೆ. ಇಲ್ಲಿ ಬೀಸು ಹೇಳಿಕೆಗಳಾಗಲಿ, ಓಲೈಕೆಯ ಮಾತುಗಳಾಗಲಿ ಸಿಗುವುದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.