ADVERTISEMENT

ಮೊದಲ ಓದು: ಜಾತಿ ದೌರ್ಜನ್ಯ ಮೀರಲು ಮಾರ್ಗ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 21:47 IST
Last Updated 21 ಫೆಬ್ರುವರಿ 2026, 21:47 IST
<div class="paragraphs"><p>ನಮ್ಮ ಹಟ್ಟಿ</p></div>

ನಮ್ಮ ಹಟ್ಟಿ

   

‘ಒಗ್ಗಟ್ಟಿನಲ್ಲಿ ಬಲವಿದೆ’ ಎನ್ನುವ ಜನನುಡಿಯನ್ನು ತುಮಕೂರಿನ ‘ನರಸಿಂಹರಾಜ ಕಾಲೋನಿ’ಯ ನಿವಾಸಿಗಳು ಸಾಧಿಸಿ ತೋರಿಸಿದ್ದಾರೆ. ಬಹುತೇಕ ಮಾದಿಗ ಸಮುದಾಯದವರೇ ಇರುವ ಈ ಕೇರಿ ‘ದೊಡ್ಡ ಹಟ್ಟಿ’ ಎಂದೇ ಜನಜನಿತ. ಸಾಮಾನ್ಯವಾಗಿ ಆತ್ಮಕಥನದಲ್ಲಿ ಇರುವ ವ್ಯಕ್ತಿ ಕೇಂದ್ರಿತ ವೈಭವ ಇಲ್ಲಿಲ್ಲ. ಸುಮಾರು 400ಕ್ಕೂ ಅಧಿಕ ಪಾತ್ರಗಳು ಹಟ್ಟಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಅನನ್ಯತೆಯನ್ನು ಕಾಪಾಡಲು ಶ್ರಮಿಸಿದ ಹೋರಾಟದ ಕಥೆಯನ್ನು ಲೇಖಕ ಜಿ.ವಿ. ಆನಂದಮೂರ್ತಿ ಸೊಗಸಾಗಿ ನಿರೂಪಿಸಿದ್ದಾರೆ.

ಜಾತಿ ದೌರ್ಜನ್ಯವನ್ನು ಮೀರಲು ಹಟ್ಟಿ ಸ್ವಾಭಿಮಾನದ ಮಾರ್ಗ ಕಂಡುಕೊಂಡಿತ್ತು. ಅನೇಕ ಕುಶಲಕರ್ಮಿಗಳಿಗೆ ಇದು ಜೀವನ ನೀಡಿತ್ತು. ಕ್ಷೌರ ಮಾಡುವುದನ್ನೂ ಹಟ್ಟಿಯ ಯುವಕರಿಬ್ಬರು ಕಲಿತಿದ್ದರು. ಗಾಂಧೀಜಿ ಹಟ್ಟಿ ಪ್ರವೇಶ ಮಾಡಿದ್ದು ಕೂಡ ಪರಿವರ್ತನೆಗೆ ಪಲ್ಲವಿ ಹಾಡಿತ್ತು. ಇದಕ್ಕೆಲ್ಲ ‘ದಲಿತ ಯುವಕ ಸಂಘ’ದ ಕಾರ್ಯಯೋಜನೆಗಳೂ ಸಕಾರಣವಾದವು. ಸಮಾಜದ ಹಿತಕ್ಕೆ ದಲಿತ ಮಹಿಳೆಯರ ತ್ಯಾಗ ಮತ್ತು ಹೋರಾಟದ ದಾಖಲೆಯನ್ನು ದೊರೈರಾಜ್‌ ಅವರು ಇಲ್ಲಿ ಸ್ಮರಣೀಯ ಮಾಡಿದ್ದಾರೆ. ಇಲ್ಲಿನ ಮಸಿಯಮ್ಮ, ಆಂಜಿನಮ್ಮ, ಕೆಂಪಮ್ಮ, ಗಂಗಮ್ಮ ಅವರ ಬಿಡಿ ಬಿಡಿ ಅಭಿಪ್ರಾಯಗಳು ಕೃತಿಯ ಒಟ್ಟು ಆಶಯವನ್ನು ಪೂರ್ಣಗೊಳಿಸಿದಂತೆ ಭಾಸವಾಗುತ್ತದೆ.  

ADVERTISEMENT

ಸಮಾನತೆ ಕನಸಿನ ಹೋರಾಟಗಳ ಶಕ್ತಿಕೇಂದ್ರವಾಗಿದ್ದ ದೊಡ್ಡ ಹಟ್ಟಿ ಮಂಡಿ ಪೇಟೆಯ ಹಮಾಲಿಗಳ ಸಂಘಕ್ಕೂ ನಾಂದಿ ಹಾಡಿತ್ತು. ದಲಿತ ಸಂಘರ್ಷ ಸಮಿತಿಯ ಅನೇಕ ರಚನಾತ್ಮಕ ಕಾರ್ಯ ಸ್ವರೂಪಕ್ಕೆ ಚಪ್ಪಲಿ ಅಂಗಡಿಯೇ ಕಾರ್ಯಾಲಯವಾಗಿತ್ತು. ಅಂತೆಯೇ ಅಮಾನಕೆರೆಯ ಇಟ್ಟಿಗೆಗೂಡು ಅನೇಕರ ಬದುಕಿಗೆ ಆಶ್ರಯವಾಗಿತ್ತು. ಇಡೀ ಊರಿಗೆ ಆ ಇಟ್ಟಿಗೆ ಪ್ರಸಿದ್ಧವಾಗಿತ್ತು. ಒಂದು ರೀತಿಯಲ್ಲಿ ಹಟ್ಟಿ ಸ್ವರಾಜ್ಯವನ್ನು ಕಂಡುಕೊಂಡಿತ್ತು. ‘ಆತ್ಮಕಥಾನಕ’ದ ನಾಯಕ ಕೆ. ದೊರೈರಾಜ್‌ ‘ಇದು ಹೋರಾಟದ ಕಡಲಿನಿಂದ ಒಂದು ಬೊಗಸೆ ನೀರನ್ನು ಮಾತ್ರ ಮೊಗೆದು ಕೊಟ್ಟಂತೆ’ ಎನ್ನುತ್ತಾರೆ. ಸಂಘಟನೆಯಲ್ಲಿ ತೊಡಗಿದ ವ್ಯಕ್ತಿತ್ವಗಳನ್ನು ನೋಡಿದರೆ ‘ನಮ್ಮ ಹಟ್ಟಿ’ ಸಂಕ್ಷಿಪ್ತ ದಾಖಲೆ ಎಂದೇ ಅನ್ನಿಸುತ್ತದೆ. 

ಕೆ. ದೊರೈರಾಜ್‌ ನಮ್ಮ ಹಟ್ಟಿ ನಿ: ಜಿ.ವಿ. ಆನಂದಮೂರ್ತಿ ಪ್ರ: ಪ್ರತಿಪದ  ಸಂ: 94482 28624

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.