ಅಗ್ರಹಾರ ಕೃಷ್ಣಮೂರ್ತಿ ಅವರು ಬರೆದ ಲೇಖನಗಳು ಮತ್ತು ಸಾಹಿತ್ಯ ಕೃತಿಗಳ ವಿಮರ್ಶೆಗಳನ್ನು ‘ಕಾಲ್ದಾರಿ’ ಕೃತಿಯಲ್ಲಿ ಸಂಕಲಿಸಿದ್ದಾರೆ. ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರತಿಷ್ಠಿತ ಕೇಂದ್ರಗಳೂ’ ಈ ಲೇಖನ ಓದುಗನನ್ನೂ ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ.
2015ರಲ್ಲಿ ‘ಪ್ರಶಸ್ತಿ ವಾಪಾಸಾತಿ ಆಂದೋಲನ’ ಜರುಗಿತ್ತು. ಆ ವರ್ತಮಾನಕ್ಕೂ ಈ ಲೇಖನ ಕೈಗನ್ನಡಿಯಂತೆ ಇದೆ. ಎಂ.ಎಂ.ಕಲಬುರ್ಗಿ ಅವರ ಹತ್ಯೆ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಪ್ರಾದೇಶಿಕ ವ್ಯವಹಾರದಂತೆ ಗೋಚರಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ 1975ರಲ್ಲೇ ಆರಂಭವಾಗಿತ್ತು. ಆಗ ಸೆನ್ಸಾರ್‌ಶಿಪ್ ಖಂಡಿಸಿ ಲೇಖಕಿ ನಯನಾತಾರಾ ಸೆಹಗಲ್ ಅವರು ಪತ್ರಿಕೆಯೊಂದಕ್ಕೆ ಬರೆದ ಲೇಖನದ ಸಾರವನ್ನೂ ಇಲ್ಲಿ ನೀಡಿದ್ದಾರೆ. ಸಲ್ಮಾನ್ ರಶ್ದಿ ಅವರ ‘ದಿ ಸೆಟಾನಿಕ್ ವರ್ಸಸ್’ ಕಾದಂಬರಿಯನ್ನು ಭಾರತ ಸರ್ಕಾರ ನಿಷೇಧಿಸಿತು. ಲೇಖಕರ ವಿರುದ್ಧ ಫತ್ವಾ ಕೂಡ ಹೊರಡಿಸಲಾಗಿತ್ತು. ಆದರೆ ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಲೇಖಕರನ್ನು ಕೊಲ್ಲುವ ಆದೇಶಗಳ ವಿರುದ್ಧ ಒಂದು ನಿರ್ಣಯ ಮಂಡಿಸಲು ಆಗ ನಡೆದ ಸರ್ವಸದಸ್ಯರ ಸಭೆಗೆ ಸಾಧ್ಯವಾಗಲೇ ಇಲ್ಲ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಸ್ವರೂಪವನ್ನು ಪ್ರಶ್ನಿಸುತ್ತಾರೆ.
ಮೊಗಳ್ಳಿ ಗಣೇಶ್ ಅವರ ‘ಬುಗರಿ’ ಕಥೆ ಹಿನ್ನೆಲೆಯಲ್ಲಿ ಅವರ ಸಾಹಿತ್ಯ ಅವಲೋಕನವನ್ನು ‘ಸಂಕೇತಗಳ ಸುತ್ತ ಬುಗರಿ’ ಟಿಪ್ಪಣಿಯಲ್ಲಿ ಮಾಡುತ್ತಾರೆ. ‘ಭಾವಕೋಶ ಅರಳುವ ಪರಿ’, ‘ಭೂಮಿ ಬದುಕಿನ ಸುಗಂಧ’, ‘ಶಿವಪ್ರಕಾಶ ಕಾವ್ಯ; ಕೆಲವು ಟಿಪ್ಪಣಿಗಳು’, ‘ಕರೀಗೌಡರ ಕಥನ ಸಂಜೀವನ’, ‘ಸಾಂಸ್ಕೃತಿಕ ಪಲ್ಲಟ–ಸಿಹಿಮೀನು’ ಸೇರಿ 30 ಲೇಖನಗಳನ್ನು ಈ ಕೃತಿ ಒಳಗೊಂಡಿದೆ.
ಲೇ: ಅಗ್ರಹಾರ ಕೃಷ್ಣಮೂರ್ತಿ
ಪ್ರ: ಪಲ್ಲವ ಪ್ರಕಾಶನ
ಸಂ: 8880087235
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.