ADVERTISEMENT

ಪುಸ್ತಕ ವಿಮರ್ಶೆ | ಕರ್ನಾಟಕದ ಮಾಸ್ಕೋದ ಕೆಂಪುಗಾಥೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 19:30 IST
Last Updated 17 ಸೆಪ್ಟೆಂಬರ್ 2022, 19:30 IST
ಕಪ್ಪು ನೆಲದ ಕೆಂಪುಗಾಥೆ
ಕಪ್ಪು ನೆಲದ ಕೆಂಪುಗಾಥೆ   

ಪ್ರಸ್ತುತ ದೇವನಗರಿ, ಬೆಣ್ಣೆನಗರಿ, ವಿದ್ಯಾಕಾಶಿ ಮುಂತಾದ ಉಪನಾಮಗಳೊಂದಿಗೆ ಗುರುತಿಸಲ್ಪಡುತ್ತಿರುವ ದಾವಣಗೆರೆ, ನಾಲ್ಕು ದಶಕಗಳ ಹಿಂದೆ ಕರ್ನಾಟಕದ ಮ್ಯಾಂಚೆಸ್ಟರ್‌ ಆಗಿ ಹಾಗೂ ಶ್ರಮಿಕರ ಹೋರಾಟ, ಬಲಿದಾನದಿಂದ ಕರ್ನಾಟಕದ ಮಾಸ್ಕೋ ಆಗಿಯೂ ಗುರುತಿಸಿಕೊಂಡಿತ್ತು. ಕಾಲ ಉರುಳಿದಂತೆ ಈ ಕೆಂಪುಗಾಥೆಯನ್ನು ಮಣ್ಣು ಮರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಪ್ಪುನೆಲದ ಕೆಂಪುಗಾಥೆಯನ್ನು ಮತ್ತೆ ನೆನಪಿಸುವ ಕೃತಿ ಇದು.

ಬಟ್ಟೆಗಿರಣಿ, ಕಾರ್ಮಿಕ ಹೋರಾಟ ಹಾಗೂ ಅದರ ಪರಿಣಾಮ, ಹರಿದ ರಕ್ತ, ಶಾಸನಸಭೆಯಲ್ಲಿಕೆಂಬಣ್ಣ ಹೀಗೆ ದಾವಣಗೆರೆಯ ಅರ್ಧಶತಮಾನದ ಚರಿತ್ರೆಯನ್ನು ಈ ಕೃತಿ ಕಟ್ಟಿಕೊಟ್ಟಿದೆ. 1970ರ ಏ.1ರಂದು ದಾವಣಗೆರೆಯಲ್ಲಿ ನಡೆದ ಎ.ಐ.ಟಿ.ಯು.ಸಿ ನಾಯಕರಾದ ಶೇಖರಪ್ಪ, ಸುರೇಶ್‌ ಅವರ ಕೊಲೆ, ಪಂಪಾಪತಿ ಅವರ ಮೇಲೆ ನಡೆದ ಭೀಕರ ಹಲ್ಲೆಯ ಘಟನೆಗಳಿಂದ ಅಧ್ಯಾಯವು ಆರಂಭಗೊಳ್ಳುತ್ತದೆ.

ಕಾಟನ್‌ ಮಿಲ್‌ ಆರಂಭ, ಈ ಮಿಲ್‌ನ ಕಾರ್ಮಿಕರ ಸಂಘಕ್ಕೆ ನರಸಿಂಹನ್‌ ಅವರು ಅಧ್ಯಕ್ಷರಾದ ನಂತರ ನಡೆದ ಘಟನೆಗಳು, ನಗರಸಭೆಯ ಸದಸ್ಯ ಸ್ಥಾನಕ್ಕೆ ಪಂಪಾಪತಿ ಅವರ ಅವಿರೋಧ ಆಯ್ಕೆ, ಕಮ್ಯೂನಿಸ್ಟ್‌ ಪಕ್ಷದ ರಾಜಕಾರಣಕ್ಕೆ ಅಧಿಕೃತ ಪ್ರವೇಶ, ಬಡ ಕಾರ್ಮಿಕರೂ ಜನಪ್ರತಿನಿಧಿಗಳಾದ ಬಗೆ ಹೀಗೆ ಪ್ರತಿಪುಟದಲ್ಲೂ ಕೆಂಪುಗಾಥೆಯನ್ನು ಈ ಕೃತಿ ಹಿಡಿದಿಟ್ಟಿದೆ. ಕೃತಿಗೆ ಬೆನ್ನುಡಿ ಬರೆದಿರುವ ರಹಮತ್‌ ತರೀಕೆರೆ ಅವರು ಉಲ್ಲೇಖಿಸುವಂತೆ ಈ ಕೃತಿ ಓದುತ್ತಾ, ದಾವಣಗೆರೆಯ ಹೋರಾಟದ ಘಟನಾವಳಿಗಳನ್ನು ಕಣ್ಣಾರೆ ಕಂಡಿದ್ದ ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರ ಕಾದಂಬರಿ ‘ಜ್ವಾಲಾಮುಖಿಯ ಮೇಲೆ’ ನೆನಪಾಗುತ್ತದೆ.

ADVERTISEMENT

ಕೃತಿ: ಕಪ್ಪು ನೆಲದ ಕೆಂಪುಗಾಥೆ
ಲೇ: ಇಮ್ತಿಯಾಜ್‌ ಹುಸೇನ್‌
ಪ್ರ: ಸಹನಾ ಪ್ರಕಾಶನ, ದಾವಣಗೆರೆ
ಸಂ: 9844110454

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.