
ಲೇಖಕ ಜಿ ಬಿ ಹರೀಶ್ ‘ವಿಕ್ರಮ’ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರೆಯುತ್ತಿದ್ದ ನೇತಾಜಿ ಬದುಕಿನ ಕಥೆಯೇ ‘ಮಹಾಕಾಲ’. ‘ಸೃಷ್ಟಿ’ ಮತ್ತು ‘ಸ್ಥಿತಿ’ ಎಂಬುದಾಗಿ ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿದೆ. ಈ ಕೃತಿ ಸುಭಾಷ್‌ಚಂದ್ರ ಬೋಸ್‌ರ ಬದುಕಿನ ಕಥೆಯನ್ನು ಹೇಳುತ್ತಲೇ, ಆ ಕಾಲಘಟ್ಟದ ದೇಶದ ರಾಜಕೀಯ ಚಿತ್ರಣವನ್ನು ಕಟ್ಟಿಕೊಡುತ್ತದೆ.
ಸ್ವತಂತ್ರ್ಯ ಹೋರಾಟದಲ್ಲಿ ಗಾಂಧಿಜೀ ಆಯ್ದುಕೊಂಡಿದ್ದು ಒಂದು ಮಾರ್ಗವಾದರೆ, ನೇತಾಜಿ ಆಯ್ದುಕೊಂಡಿದ್ದು ಇನ್ನೊಂದು ಮಾರ್ಗ. ಕೃತಿಯಲ್ಲಿ ಗಾಂಧಿ ಮತ್ತು ನೇತಾಜಿ ನಡುವಿನ ವೈಚಾರಿಕ ಸಂಘರ್ಷಗಳು ಅಲ್ಲಲ್ಲಿ ಕಾಣಸಿಗುತ್ತವೆ. ಕಾದಂಬರಿಯ ಮೊದಲ ಭಾಗ ‘ಸೃಷ್ಟಿ’ ಕಳೆದ ವರ್ಷ ಪ್ರಕಟಗೊಂಡಿತ್ತು. ಅದರಲ್ಲಿ ಬೋಸ್ ಅವರ ಬಾಲ್ಯದಿಂದ ವಿವಾಹದ ತನಕದ ಕಥೆಯಿತ್ತು. ಅಲ್ಲಿಂದ ಮುಂದುವರಿದು ಸ್ವಾತಂತ್ರ್ಯ ನಂತರವೂ ಬೋಸ್ ಅವರು ಬದುಕಿದ್ದರು ಎಂಬ ಭಾವ ಮೂಡಿಸುವ ತನಕದ ಕಥೆ ‘ಸ್ಥಿತಿ’ಯಲ್ಲಿದೆ.
ಇದೊಂದು ಐತಿಹಾಸಿಕ ಕಾದಂಬರಿ ಎಂಬುದು ಇಲ್ಲಿ ಉಲ್ಲೇಖಿಸಿರುವ ಅನೇಕ ಘಟನೆಗಳಿಂದ ಸ್ಪಷ್ಟವಾಗುತ್ತದೆ. ತಾವು ಈ ಕೃತಿಗೆ ಯಾವ ರೀತಿ ಸಂಶೋಧನೆ ನಡೆಸಿ, ಎಷ್ಟೆಲ್ಲ ಜಾಗಗಳನ್ನು ಸುತ್ತಾಡಿದ್ದೇನೆ ಎಂಬುದನ್ನು ಲೇಖಕ ಪ್ರಸ್ತಾವನೆಯಲ್ಲಿಯೇ ಹೇಳಿಕೊಂಡಿದ್ದಾರೆ. ಇದು ಬೋಸರ ಜೀವನಗಾಥೆಯಾದ್ದರಿಂದ ಬಹುತೇಕ ಕಡೆ ಪಾತ್ರಗಳ ಮೂಲಕ ಗಾಂಧಿಗಿಂತ ಬೋಸ್ ಅವರ ನಿಲುವನ್ನೇ ಲೇಖಕ ಸಮರ್ಥಿಸಿಕೊಂಡಿದ್ದಾರೆ.
‘ನೆಹರು ಕಾಲದಲ್ಲಿ ನೇತಾಜಿ ಬದುಕಿದ್ದೇ ಆಗಿದ್ದರೆ ಭಾರತದಲ್ಲಿ ಎಲ್ಲಿ ವಾಸವಿದ್ದರು?’ ಎಂದು ವಿಶೃಂಖಲಾ ಎನ್ನುವ ಪಾತ್ರ ಕೇಳುತ್ತದೆ.
‘ಇತಿಹಾಸಕಾರರು ಇದರ ಬಗ್ಗೆ ಮೌನ ಮುರಿದಿಲ್ಲ’ ಎಂದು ದತ್ತಾತ್ರೇಯ ಹೇಳುತ್ತಾನೆ. ಬೋಸರು ಸ್ವಾತಂತ್ರ್ಯ ನಂತರವೂ ಬದುಕಿದ್ದರೂ ಎಂಬ ಭಾವ ಮೂಡಿಸುವ ಅಧ್ಯಾಯಗಳು ಕೃತಿಯಲ್ಲಿದ್ದರೂ ಅದಕ್ಕೊಂದು ಸ್ಪಷ್ಟತೆ ನೀಡದೆ ಕಥೆ ಮುಗಿಯುತ್ತದೆ!
ಮಹಾಕಾಲ
ಲೇ: ಜಿ ಬಿ ಹರೀಶ್
ಪ್ರ: ಅಯೋಧ್ಯ ಪಬ್ಲಿಕೇಷನ್ಸ್
ಸಂ: 9620916996
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.