
ಮನೆ ಬಳಕೆಯ ರಾಸಾಯನಿಕಗಳು
ದೈನಂದಿನ ಜೀವನದಲ್ಲಿ ಬಳಸುವ ರಾಸಾಯನಿಕಗಳ ಬಗ್ಗೆ ಪುಸ್ತಕ ಬೆಳಕು ಚೆಲ್ಲುತ್ತದೆ. ನಾವು ದೈನಂದಿನ ಬಳಕೆಗಾಗಿ ಉಪಯೋಗಿಸುವ ಆಹಾರ ಶುಚಿಗೊಳಿಸುವ ಉತ್ಪನ್ನಗಳಲ್ಲಿ ಯಾವುದನ್ನು ಬಳಸಬೇಕು ಎಂಬುದು ಜಿಜ್ಞಾಸೆಯಾಗಿಯೇ ಉಳಿದಿರುವ ಇಂದಿನ ಕಾಲಘಟ್ಟದಲ್ಲಿ ಇಂತಹ ಮಾರ್ಗದರ್ಶಕ ಪುಸ್ತಕಗಳು ಸಹಕಾರಿಯಾಗುತ್ತವೆ. ಮುಖ್ಯವಾಗಿ ಆಹಾರ ಹಾಗೂ ಶೃಂಗಾರ ಸಾಧನಗಳಲ್ಲಿರುವ ಹಾನಿಕಾರಕ ರಾಸಾಯನಿಕ ನಮ್ಮ ಆರೋಗ್ಯಕ್ಕೂ ಮಾರಕವಾಗುತ್ತವೆ. ಈ ಹಿನ್ನೆಲೆಯಲ್ಲಿ ಪುಸ್ತಕ ರಾಸಾಯನಿಕಗಳ ಉಪಯುಕ್ತತೆ ಹಾಗೂ ಅವುಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಸಹಕಾರಿಯಾಗಿದೆ.
ಹಾಗೆ ನೋಡಿದರೆ ನಾವು ಬಳಸುವ ಸುಗಂಧ ದ್ರವ್ಯಗಳಲ್ಲೂ ರಾಸಾಯನಿಕಗಳಿರುತ್ತವೆ. ಯಾವ ವಸ್ತುವಿನಲ್ಲಿ ಎಷ್ಟರ ಪ್ರಮಾಣದಲ್ಲಿ ರಾಸಾಯನಿಕಗಳಿರುತ್ತವೆ ಎಂಬುದೂ ಇಲ್ಲಿ ತಿಳಿಸಲಾಗಿದೆ. ಇಲ್ಲಿರುವ ಮನೆಯಲ್ಲಿ ಪರಿಚಿತ ರಾಸಾಯನಿಕಗಳು, ಕಾರ್ಬೊಹೈಡ್ರೇಟ್, ಹಾಲು ಮೊಟ್ಟೆ ಮತ್ತು ಲವಣಗಳು, ಹಣ್ಣು ಮತ್ತು ಬೀಜಗಳಲ್ಲಿರುವ ರಾಸಾಯನಿಕಗಳು, ಮಸಾಲೆಗಳು ಮುಂತಾದ ಅಧ್ಯಾಯಗಳು ನಮಗೆ ವೈಜ್ಞಾನಿಕ ಹಾಗೂ ವಿಸ್ತಾರವಾದ ಮಾಹಿತಿ ಒದಗಿಸಲು ಸಹಕಾರಿಯಾಗಿದೆ. ಅಲ್ಲದೆ ರಾಸಾಯನಿಕಗಳ ಉಪಯೋಗ ಹಾಗೂ ಇದರ ವಿಜ್ಞಾನವನ್ನು ಸರಳವಾಗಿ ಪುಸ್ತಕದಲ್ಲಿ ವಿವರಿಸುವುದು ಈ ಹೊತ್ತಗೆಯ ಮೌಲ್ಯವನ್ನು ಹೆಚ್ಚಿಸಿದೆ ಎನ್ನಬಹುದು.
ಆಹಾರ ಬಗ್ಗೆ ಹೆಚ್ಚಿನ ಕಾಳಜಿ ಇರುವವರು ಹಾಗೂ ಮುತುವರ್ಜಿ ವಹಿಸುವವರಿಗೂ ನಮ್ಮ ಮನೆಗಳಲ್ಲಿ ಬಳಸುವ ಆಹಾರ ಪದಾರ್ಥಗಳೂ ಸೇರಿದಂತೆ ಎಲ್ಲ ವಸ್ತುಗಳಲ್ಲಿ ಇರುವ ರಾಸಾಯನಿಕಗಳ ಬಗ್ಗೆ ಅರಿವಿನ ಕೊರತೆ ಇರುತ್ತದೆ. ಬಳಸುವ ಬಗ್ಗೆ ಗೊಂದಲವೂ ಇರುತ್ತದೆ. ಅಲ್ಲದೆ ಎಲ್ಲ ರಾಸಾಯನಿಕಗಳು ಹಾನಿಕಾರಕ ಮತ್ತು ವಿಷಕಾರಿ ಎಂಬ ತಪ್ಪು ತಿಳಿವಳಿಕೆಗಳೂ ಇರುತ್ತವೆ. ಅಂತಹ ತಪ್ಪು ಅಭಿಪ್ರಾಯವನ್ನು ಹಾಗೂ ಗೊಂದಲವನ್ನು ನಿವಾರಿಸುವಲ್ಲಿ ಈ ಪುಸ್ತಕ ಸಫಲವಾಗಿದೆ. ಇಂದಿನ ಕಲುಷಿತ, ಕಲಬೆರಕೆ ವಾತಾವರಣದಲ್ಲಿ ಯಾವುದು ಬಳಸಬೇಕು ಯಾವುದು ಬಿಡಬೇಕು ಎಂಬ ಗೊಂದಲ ಕಾಡುತ್ತಿರುವಾಗ ಈ ಪುಸ್ತಕ ದಾರಿದೀಪದಂತಿದೆ.
ಮನೆ ಬಳಕೆಯ ರಾಸಾಯನಿಕಗಳು
ಲೇ: ಗೋಪಾಲಪುರ ನಾಗೇಂದ್ರಪ್ಪ ರೇಣುಕಾರಾಣಿ ನಾಗೇಂದ್ರಪ್ಪಪ್ರ:
ನವಕರ್ನಾಟಕ ಪಬ್ಲಿಕೇಷನ್ಸ್
ಸಂ:08022161900
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.