ADVERTISEMENT

ಮೊದಲ ಓದು: ದಲಿತ ಸಂವೇದನೆಯ ಪ್ರಬಂಧಗಳಗುಚ್ಛ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 23:30 IST
Last Updated 1 ಮಾರ್ಚ್ 2025, 23:30 IST
book
book   

ದಲಿತರ ನೋವು, ಸಂಕಟ, ಬವಣೆ, ತಾರತಮ್ಯ, ಖುಷಿ, ಜೀವನ ಪದ್ಧತಿಯನ್ನು ಶಕ್ತವಾಗಿ ಹಿಡಿದಿಟ್ಟಿರುವ ಲಲಿತ ಪ್ರಬಂಧದ ಗುಚ್ಛ ಇದು. ಹಳ್ಳಿಯ ಸೊಗಡು, ಬದುಕು, ಆಚರಣೆಗಳ ಮೇಲೂ ಇಲ್ಲಿನ ಪ್ರಬಂಧಗಳು ಬೆಳಕು ಚೆಲ್ಲುತ್ತವೆ. ಬರಹದಲ್ಲಿ ಮಿಳಿತಗೊಂಡಿರುವ ದಲಿತ ಸಂವೇದನೆ ಹಾಗೂ ಪರಿಸರ ಪ್ರಜ್ಞೆ ಪುಸ್ತಕದ ತೂಕವನ್ನು ಹೆಚ್ಚಿಸಿದೆ. ತಮ್ಮ ನೋವುಗಳನ್ನೇ ಲೇಖಕರು ಅಕ್ಷರ ರೂಪಕ್ಕಿಳಿಸಿದ್ದಾರೆ ಎನ್ನುವಷ್ಟು ಇಲ್ಲಿನ ಬರಹಗಳು ಆಪ್ತವಾಗಿವೆ.

ಹಾಸ್ಯ, ವ್ಯಂಗ್ಯ, ವಿಷಾದ, ಭಾವುಕತೆ, ಬಂಡಾಯ ಇಲ್ಲಿನ ಪ್ರಬಂಧಗಳಲ್ಲಿ ಪ್ರಮುಖ ಗುಣ. ವಿಷಯದ ಆಯ್ಕೆ, ಅದರ ನಿರೂಪಣೆ, ಅದರಲ್ಲಿ ಅಡಕವಾಗಿರುವ, ನೋವು, ತಳಮಳ, ದುರಂತ ಓದುಗನ ಭಾವಕೋಶಕ್ಕೆ ನಾಟುತ್ತದೆ. ಇಲ್ಲಿರುವ ಬಹುತೇಕ ಪ್ರಬಂಧಗಳು ಹಳ್ಳಿಯ ಹಿಂದಿನ ಜೀವನ ಹಾಗೂ ಈಗಿನ ಬದುಕಿನ ಬಗೆಗಿನ ಮುಖಾಮುಖಿಯೂ ಹೌದು. ಕಾಲಗಳು ಹಲವು ಉರುಳಿದರೂ ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಅನಿಷ್ಟಗಳ ಬಗೆಗಿನ ಸಾತ್ವಿಕ ಸಿಟ್ಟು, ವಿಷಾದವನ್ನು ಲೇಖಕರು ಮನತಟ್ಟುವ ಹಾಗೆ ವಿವರಿಸಿದ್ದಾರೆ.

‘ಇಲಿ ಬೇಟೆ’ ಪ್ರಬಂಧದ ಕಥಾನಾಯಕ ಮರಿಯನ ಪಾತ್ರವು ದಲಿತರ ಜೀವನ ಚರಿತ್ರೆಯನ್ನೇ ಕಟ್ಟಿಕೊಟ್ಟಂತಿದೆ. ಇದು ಕೇವಲ ಮರಿಯನ ಕಥೆ ಮಾತ್ರವಲ್ಲ, ದಲಿತರ ವ್ಯಥೆಯೂ ಹೌದು. ಸಮಾಜದಲ್ಲಿ ಮರೆಯಾಗುತ್ತಿರುವ ಮಾನವೀಯ ಸಂವೇದನೆಯನ್ನು ಪ್ರಬಂಧಗಳು ಬಡಿದೆಬ್ಬಿಸುತ್ತವೆ. ಕೆಲವು ಕಡೆ ತುಸು ಹೆಚ್ಚೇ ಎನಿಸುವ ವಿವರಗಳು ತಾಳ್ಮೆ ಪರೀಕ್ಷಿಸಿದರೂ, ಕುತೂಹಲವನ್ನು ಕಾಪಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ADVERTISEMENT

ಒಂದು ತಲೆ ಚವುರದ ಕಥೆ

ಲೇ: ಡಾ. ಶಿವರಾಜ ಬ್ಯಾಡರಹಳ್ಳಿ

ಪ್ರ: ಕಿರಂ ಪ್ರಕಾಶನ

ಸಂ: 70901 80999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.