ADVERTISEMENT

ಶ್ಯಾಮಲಾದೇವಿಯ ಬದುಕು ತೆರೆದಿಟ್ಟ ಕೃತಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 19:30 IST
Last Updated 29 ಫೆಬ್ರುವರಿ 2020, 19:30 IST
ಶ್ಯಾಮಲಾದೇವಿ 
ಶ್ಯಾಮಲಾದೇವಿ    

ಪಾತರದ ಸಮುದಾಯದಿಂದ ಬಂದ ಸ್ವಾತಂತ್ರ್ಯಪೂರ್ವದ ಲೇಖಕಿ, ಉತ್ತರ ಕರ್ನಾಟಕ ಮೊದಲ ಕತೆಗಾರ್ತಿ ಎಂಬ ಖ್ಯಾತಿ ಪಡೆದವರು ಶ್ಯಾಮಲಾದೇವಿ. ಆದರೆ, ಇವರ ಬಗ್ಗೆ ಅರಿಯಲು ಬೇಕಾದ ಮಾಹಿತಿಯ ಕೊರತೆಯಿದೆ. ತಕ್ಕ ಮಟ್ಟಿಗೆ ‘ಶ್ಯಾಮಲಾದೇವಿ’ ಪುಸ್ತಕವು ಶ್ಯಾಮಲಾದೇವಿ ಅವರ ಬದುಕಿನ ಕೆಲವು ಪುಟಗಳನ್ನಾದರೂ ಅರಿಯಲು ಸಹಾಯ ಮಾಡುತ್ತದೆ.

‘ಹೂ ಬಿಸಿಲು’ ಮತ್ತು ‘ಹೊಂಬಿಸಿಲು’ ಎಂಬ ಎರಡು ಕಥಾಸಂಕಲಗಳನ್ನು ತಂದ ಅವರು ‘ಜಯಕರ್ನಾಟಕದಂಥ’ ಪ್ರತಿಷ್ಠಿತ ಪತ್ರಿಕೆಯನ್ನು ಒಂದಷ್ಟು ಕಾಲ ನಡೆಸಿದರು. ಇಂಥ ಒಬ್ಬ ಲೇಖಕಿಯನ್ನು ಭಾರತೀಯ ಸಾಹಿತ್ಯ ನಿರ್ಮಾಪಕರ ಮಾಲಿಕೆಯಲ್ಲಿ ಪರಿಚಯಿಸಲಾಗಿದೆ.

ಸಾಮಾಜಿಕ ಮತ್ತು ಕೌಟುಂಬಿಕ ಜವಾಬ್ದಾರಿಯ ಹೇರಿಕೆಗಳ ನಡುವೆ ಕಳೆದುಹೋಗುವ ಹೆಣ್ಣುಮಕ್ಕಳಿಗೆ ಈ ಸವಲತ್ತಿನ ದಿನಗಳಲ್ಲಿ ಶ್ಯಾಮಲಾ ಅವರ ಜೀವನ ದೊಡ್ಡ ಸ್ಫೂರ್ತಿಗಾಥೆಯೇ ಸರಿ. ಅಷ್ಟೇನೂ ಸವಲತ್ತು ಇರದ ಆ ದಿನಗಳಲ್ಲಿ ಕತೆಗಾರ್ತಿಯಾಗಿ, ಪತ್ರಕರ್ತೆಯಾಗಿ ಕೌಟುಂಬಿಕವಾಗಿಯೂ ಚಂದದ ಬದುಕನ್ನು ಬದುಕಿ, 32 ಹರೆಯಕ್ಕೆ ತಮ್ಮ ಬದುಕಿನ ಪಯಣ ಮುಗಿಸಿರುವುದು ದುರ್ದೈವ.

ADVERTISEMENT

ಶ್ಯಾಮಲಾದೇವಿ ಮತ್ತು ಅವರ ಪತಿ ಆರ್‌.ಪಿ. ಬೆಳಗಾಂವ್‌ಕರ್‌ ಎಂದು ಹೆಸರಾಗಿದ್ದ ರಾಮಚಂದ್ರರಾಯರು. ಇವರಿಬ್ಬರ ಬದುಕು ಮತ್ತು ಬರಹ ಆಗಿನ ಕಾಲದಲ್ಲಿ ಗಾಢವಾಗಿದ್ದ ಸಾಮಾಜಿಕ, ಜಾತಿ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಕ್ರಿಯಾಶೀಲರಾಗಿದ್ದ ಶ್ಯಾಮಲಾದೇವಿ ಯಾವೆಲ್ಲ ಕಾರಣಗಳಿಗೆ ಎಲೆಮರೆಯ ಕಾಯಿಯಂತೆ ಉಳಿದರು ಎಂಬುದನ್ನು ಈ ಪುಸ್ತಕ ತೆರೆದಿಟ್ಟಿದೆ.

ಪುಸ್ತಕ: ಶ್ಯಾಮಲಾದೇವಿ

ಲೇಖಕರು: ಆರ್‌.ತಾರಿಣಿ ಶುಭದಾಯಿನಿ

ಪ್ರಕಾಶಕರು: ಸಾಹಿತ್ಯ ಅಕಾಡೆಮಿ

ದರ: ₹ 50

ಪುಟಗಳು: 96

ದೂರವಾಣಿ: 080–222245152

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.