ADVERTISEMENT

ಪುಸ್ತಕ ಪರಿಚಯ: ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಸುಭಾಷಚಂದ್ರ ಬೋಸ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 23:43 IST
Last Updated 25 ಅಕ್ಟೋಬರ್ 2025, 23:43 IST
ಅಪೂರ್ಣ ಆತ್ಮಕಥೆ
ಅಪೂರ್ಣ ಆತ್ಮಕಥೆ   

ಸುಭಾಷಚಂದ್ರ ಬೋಸ್‌ ಬೋಸ್‌ ಅವರ ‘ಆ್ಯನ್‌ ಇಂಡಿಯನ್‌ ಪಿಲಿಗ್ರಿಮ್‌ ಆ್ಯನ್‌ ಅನ್‌ಫಿನಿಶಡ್‌ ಬಯೋಗ್ರಫಿ’, ‘ಇಂಡಿಯನ್‌ ಸ್ಟ್ರಗಲ್‌’ ಮತ್ತು ‘ಎಂ’ ಎಂದು ಗುರುತಿಸಿಕೊಂಡಿದ್ದ ಅನಾಮಧೇಯ ಮಹಿಳೆ ರಚಿಸಿದ ‘ಅಸಾಮಾನ್ಯ ದಿನಚರಿ’ಯನ್ನು ಪ್ರೊ.ಕೆ.ಈ. ರಾಧಾಕೃಷ್ಣ ಅವರು ಕನ್ನಡಕ್ಕೆ ಪರಿಚಯಿಸಿದ್ದಾರೆ. 

‘ಆ್ಯನ್‌ ಇಂಡಿಯನ್‌ ಪಿಲಿಗ್ರಿಮ್‌ ಆ್ಯನ್‌ ಅನ್‌ಫಿನಿಶಡ್‌ ಬಯೋಗ್ರಫಿ’ (‘ಓರ್ವ ಭಾರತೀಯ ಯಾತ್ರಿಕ ಒಂದು ಅಪೂರ್ಣ ಆತ್ಮಕಥೆ’) ಸುಭಾಷಚಂದ್ರ ಬೋಸ್‌ ಬೋಸ್‌ ಅವರ ಹುಟ್ಟು, ಬಾಲ್ಯ, ಕುಟುಂಬದ ಪರಿಚಯ, ಶಿಕ್ಷಣದ ವಿವರವನ್ನು ತಿಳಿಸುತ್ತದೆ. ಅವರು ಭಾರತೀಯ ನಾಗರಿಕ ಸೇವೆಯ ಹುದ್ದೆಗೆ ನೀಡಿದ ರಾಜೀನಾಮೆ ಪತ್ರವೂ ಒಳಗೊಂಡಂತೆ ಸುಭಾಷ ಅವರ 12 ಪತ್ರಗಳು ಇದರಲ್ಲಿ ಇವೆ. ಸುಭಾಷ ತಮ್ಮ ಸಮಕಾಲೀನ ನೇತಾರರಾದ ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್‌, ನೆಹರೂ, ತಮ್ಮ ಅಣ್ಣ ಶರತ್‌ಚಂದ್ರ ಅವರಿಗೆ ಬರೆದ ಪತ್ರಗಳು ಇಲ್ಲಿವೆ. ಮಾತ್ರವಲ್ಲದೆ, ಅಪರೂಪದ ಚಿತ್ರಗಳನ್ನೂ ಈ ಕೃತಿ ಒಳಗೊಂಡಿದೆ. 

‘ಇಂಡಿಯನ್‌ ಸ್ಟ್ರಗಲ್‌’ (ಭಾರತೀಯ ಹೋರಾಟ) ಕೃತಿಯಲ್ಲಿ ಸ್ವಾತಂತ್ರ್ಯ ಚಳವಳಿಯ ನೇತಾರ ಸುಭಾಷಚಂದ್ರ ಬೋಸ್‌ ಚಳವಳಿಯನ್ನು ಎರಡು ಕಾಲಘಟ್ಟದಲ್ಲಿ ಗುರುತಿಸಿದ್ದಾರೆ. 1920 ರಿಂದ 1934ರವರೆಗಿನ ಘಟನಾವಳಿಗಳನ್ನು ಮೊದಲ ಭಾಗದಲ್ಲಿ ದಾಖಲಿಸುತ್ತಾರೆ. ಎರಡನೇ ಭಾಗದಲ್ಲಿ 1935ರಿಂದ 1942ರವರೆಗೆ ಸಂಭವಿಸಿದ ರಾಜಕೀಯ ಮತ್ತು ಸಾಮಾಜಿಕ ಚಳವಳಿಗೆ ಸಂಬಂಧಿಸಿದಂತೆ ಬರೆಯುತ್ತಾರೆ. ಸ್ವತಃ ಚಳವಳಿಯ ಭಾಗವಾಗಿದ್ದ ಸುಭಾಷ ತಮ್ಮ ಒಲವು ನಿಲುವಿನ ಜೊತೆ ಅಂದು ಚಳವಳಿ ರೂಪುಗೊಳ್ಳುತ್ತಿದ್ದ ಬಗೆಯ ವಿವರವನ್ನು ಇಲ್ಲಿ ನೀಡಿದ್ದಾರೆ. ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಆಕರ ಗ್ರಂಥದಂತೆ ಇರುವ ‘ಭಾರತೀಯ ಹೋರಾಟ’ ಸ್ವರಾಜ್‌ ಪಕ್ಷದ ಬಂಡಾಯ, ಗಾಂಧಿ ಮತ್ತು ಇರ್ವಿನ್‌ ಅವರ ನಡುವಿನ ಒಪ್ಪಂದ, ದೇಶಬಂಧು ಸಿ.ಆರ್‌. ದಾಸ್‌ ಅವರ ಆಡಳಿತ, ಬಂಗಾಳದ ಪರಿಸ್ಥಿತಿ, ಭಾರತದ ಇತಿಹಾಸದಲ್ಲಿ ಎಂ.ಕೆ. ಗಾಂಧಿ ಅವರ ಪಾತ್ರ ಏನು ಎನ್ನುವ ವಿವರವನ್ನೂ ಒಳಗೊಂಡಿದೆ. ರಾಷ್ಟ್ರೀಯ ಕಾಂಗ್ರೆಸ್‌ ಮಾತ್ರವಲ್ಲದೆ, ಅಂದು ಚಳವಳಿಯಲ್ಲಿ ಸಕ್ರಿಯಾಗಿದ್ದ ಕಾರ್ಮಿಕ, ಮಹಿಳಾ ಮತ್ತು ಕಮ್ಯುನಿಸ್ಟ್‌, ಸಮಾಜವಾದಿ ಹೋರಾಟಗಳ ಪರಿಚಯವನ್ನೂ ಕಟ್ಟಿಕೊಟ್ಟಿದ್ದಾರೆ.

ADVERTISEMENT

‘ದೇಶಕ್ಕಾಗಿ ಎಲ್ಲ, ಸ್ವಂತಕ್ಕೆ ಏನೂ ಇಲ್ಲ’ ಎನ್ನುವ ಘೋಷವಾಕ್ಯವನ್ನು ‘ಅಸಾಮಾನ್ಯ ದಿನಚರಿ’ ಕೃತಿ ಸಾಕ್ಷಾತ್ಕರಿಸಿದೆ. ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ ಅನಾಮಿಕ ಮಹಿಳೆಯ ಡೈರಿಯ ಪ್ರಕಟಿತ ರೂಪ. ತಮ್ಮನ್ನು ‘ಎಂ’ ಎಂದು ಗುರುತಿಸಿಕೊಂಡಿರುವ ಅವರು ಭಾರತವನ್ನು ರಾಜಕೀಯ ದಾಸ್ಯದಿಂದ ಮುಕ್ತಗೊಳಿಸುವ ಸಂಬಂಧ ಸಕ್ರಿಯವಾಗಿ ಹೋರಾಡಿದ್ದಾರೆ. ಅವರು ‘ಅಜಾದ್‌ ಹಿಂದ್‌ ಫೌಜ್‌’ ಸಂಘಟನೆಯ ಝಾನ್ಸಿ ಲಕ್ಷ್ಮಿಬಾಯಿ ಸೇನಾ ವಿಭಾಗದಲ್ಲಿ ಸಕ್ರಿಯರಾಗಿದ್ದರು ಎನ್ನುವ ವಿವರವನ್ನು ಈ ಕೃತಿಯಲ್ಲಿ ನೀಡುತ್ತಾರೆ. ಈ ಕೃತಿ ಅಜಾದ್‌ ಹಿಂದ್‌ ಸೇನೆಯ ಆಂದೋಲನ, ಸುಭಾಷಚಂದ್ರ ಬೋಸ್‌ ಅವರ ಹೋರಾಟದ ಸ್ವರೂಪವನ್ನು ತಿಳಿಸುತ್ತದೆ.

ಓರ್ವ ಭಾರತೀಯ ಯಾತ್ರಿಕ ಒಂದು ಅಪೂರ್ಣ ಆತ್ಮ ಕಥೆ

ಇಂಗ್ಲಿಷ್‌ ಮೂಲ: ಸುಭಾಷಚಂದ್ರ ಬೋಸ್‌

ಕನ್ನಡಕ್ಕೆ: ಪ್ರೊ. ಕೆ.ಈ. ರಾಧಾಕೃಷ್ಣ

ಪುಟ: 436

₹: 500

ಭಾರತೀಯ ಹೋರಾಟ 

ಭಾರತೀಯ ಹೋರಾಟ

ಇಂಗ್ಲಿಷ್‌ ಮೂಲ: ಸುಭಾಶ್‌ಚಂದ್ರ ಬೋಸ್‌

ಕನ್ನಡಕ್ಕೆ: ಪ್ರೊ. ಕೆ.ಈ. ರಾಧಾಕೃಷ್ಣ

ಪುಟ: 524

₹: 550

ಅಸಾಮಾನ್ಯ ದಿನಚರಿ 

ಅಸಾಮಾನ್ಯ ದಿನಚರಿ

ಇಂಗ್ಲಿಷ್‌ ಮೂಲ: ಸುಭಾಶ್‌ಚಂದ್ರ ಬೋಸ್‌

ಕನ್ನಡಕ್ಕೆ: ಪ್ರೊ. ಕೆ.ಈ. ರಾಧಾಕೃಷ್ಣ

ಪುಟ: 264

₹: 300

ಪ್ರ: ಸನ್‌ಸ್ಟಾರ್‌ ಪಬ್ಲಿಷರ್‌

ಮೊ: 080– 22224143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.