ADVERTISEMENT

ಸುಸ್ಥಿರ ಕೃಷಿ ಪಾಠ ಹೇಳುವ ಕೃತಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 2:47 IST
Last Updated 21 ಜುಲೈ 2020, 2:47 IST
ಸುಸ್ಥಿರ ಕೃಷಿ ಪಾಠ ಹೇಳುವ ಕೃತಿ
ಸುಸ್ಥಿರ ಕೃಷಿ ಪಾಠ ಹೇಳುವ ಕೃತಿ   

ರಾಜ್ಯದಲ್ಲಿ ಮೂರು ದಶಕಗಳಷ್ಟು ಹಿಂದೆಯೇ ರಾಸಾಯನಿಕ ಕೃಷಿಗೆ ಪರ್ಯಾಯವಾಗಿ ಮಣ್ಣು-ಬೆಳೆಗೆ ವಿಷ ಉಣ್ಣಿಸದೆ ಬೇಸಾಯ ಮಾಡುವ ಸಾಧ್ಯತೆಯನ್ನು ಸ್ವಂತ ಅನುಭವದ ಮೂಲಕ ತೋರಿಸಿಕೊಟ್ಟು ಅದಕ್ಕೆ ಆಂದೋಲನದ ರೂಪ ಕೊಟ್ಟವರಲ್ಲಿ ದಿವಂಗತ ಎಲ್. ನಾರಾಯಣ ರೆಡ್ಡಿ ಪ್ರಮುಖರು.

ಸಾವಯವ ಕೃಷಿ, ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ, ಶಾಶ್ವತ ಕೃಷಿ, ಜೀವಚೈತನ್ಯ ಕೃಷಿ ಹೀಗೆ ಹಲವು ಕವಲುಗಳಲ್ಲಿ ಈ ಅಭಿಯಾನ ಬೆಳೆಯುತ್ತಿರುವಾಗ ಅವರು ಅವೆಲ್ಲವುಗಳ ಸಾರದ ಜತೆಗೆ ಪಾರಂಪರಿಕ ಕೃಷಿಯ ಸತ್ವವನ್ನೂ ಅರಗಿಸಿಕೊಂಡು, ಆರೋಗ್ಯಪೂರ್ಣ ಫಸಲು ಬೆಳೆಯುವ ವಿಧಾನವನ್ನು ರೈತ ಸಮುದಾಯದೊಂದಿಗೆ ಸದಾ ಹಂಚಿಕೊಳ್ಳುತ್ತಿದ್ದರು. ಆಸಕ್ತರ ಪಾಲಿಗೆ ಅವರ ತೋಟ ಒಂದು ವಿಶಿಷ್ಟ ತರಬೇತಿ ಕೇಂದ್ರವಾಗಿ ರೂಪುಗೊಂಡಿತ್ತು.

ತಮಿಳುನಾಡಿನ ಹೆಸರಾಂತ ಸಾವಯವ ಕೃಷಿಕ ಎಸ್.ಆರ್. ಸುಂದರ್ ರಾಮನ್ ಅವರು ಮೌಲಿಕ ಮುನ್ನುಡಿಯಲ್ಲಿ, ಮಣ್ಣಿನ ಆರೋಗ್ಯ ಪಾಲನೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರವನ್ನು ಚೆನ್ನಾಗಿ ಅರಿತಿದ್ದ ರೆಡ್ಡಿಯವರು ಹ್ಯೂಮಸ್ ಹೆಚ್ಚಿಸಲು ಹೆಚ್ಚಿಸಲು ಸೂಕ್ಷ್ಮಜೀವಿಗಳಿಗೆ ಪುಷ್ಕಳವಾಗಿ ಆಹಾರ ಒದಗಿಸಬೇಕೆಂದು ಹೇಳುತ್ತಿದ್ದರು ಹಾಗೂ ಇದಕ್ಕಾಗಿ ಅನೇಕ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

ADVERTISEMENT

ಮಣ್ಣಿನ ಸಂರಕ್ಷಣೆ, ವಿವಿಧ ಸಾವಯವ ಗೊಬ್ಬರಗಳನ್ನು ತಯಾರಿಸುವ ವಿಧಾನ, ಸುಸ್ಥಿರ ಕೃಷಿಯ ಹಾದಿಗಳು ಸೇರಿದಂತೆ ಏಳು ಅಧ್ಯಾಯಗಳಿರುವ ಈ ಪುಸ್ತಕವನ್ನು ರೆಡ್ಡಿಯವರ ಮಾತುಗಳಲ್ಲಿಯೇ ನಿರೂಪಿಸಲಾಗಿದೆ. ಶ್ರೀ ಪದ್ಧತಿಯ ಭತ್ತದ ಬೇಸಾಯ ಕ್ರಮ ಹಾಗೂ ದಕ್ಷಿಣ ಕೊರಿಯಾ ಮಾದರಿಯ ನೈಸರ್ಗಿಕ ಕೋಳಿ ಸಾಕಣೆ ಕ್ರಮದ ಬಗ್ಗೆ ವಿವರಗಳಿವೆ. ಈಗಾಗಲೇ ವಿಷಮುಕ್ತ ಕೃಷಿ ಮಾಡುತ್ತಿರುವವರಿಗೂ, ಹೊಸದಾಗಿ ಕೃಷಿರಂಗಕ್ಕೆ ಪ್ರವೇಶಿಸುತ್ತಿರುವವರಿಗೂ ಇದೊಂದು ಉಪಯುಕ್ತ ಕೈಪಿಡಿ. ಪುಸ್ತಕಗಳಿಗಾಗಿ ಸಂಪರ್ಕ ಸಂಖ್ಯೆ: 080–41626254

ಸಂಗ್ರಹ-ನಿರೂಪಣೆ: ಪ್ರಶಾಂತ್ ಜಯರಾಮ್

ಪ್ರಕಾಶನ : ಇಕ್ರಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.