ADVERTISEMENT

ತೇರಿನ ಹಾದಿಯಲ್ಲಿ ಕಂಡ ಬೆಳಕಿನ ಬಿಂಬ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 19:30 IST
Last Updated 28 ನವೆಂಬರ್ 2020, 19:30 IST
ತೇರಿನ ಹಾದಿಯಲ್ಲಿ ಕಂಡ ಬೆಳಕು
ತೇರಿನ ಹಾದಿಯಲ್ಲಿ ಕಂಡ ಬೆಳಕು   

ಬೆಳಕಿನ ತೇರು
ಲೇ: ಕಾವ್ಯಶ್ರೀ ಜಿ.
ಪ್ರ: ಶ್ರೀಗುರು ದೊಡ್ಡಬಸವೇಶ್ವರ ಫೌಂಡೇಶನ್‌, ನಂದಿಪುರ 9731422613‌
ಬೆಲೆ: 150 ಪುಟಗಳು: 260

ಉತ್ತರ ಕರ್ನಾಟಕದ ಪ್ರಸಿದ್ಧ ವಕೀಲರಲ್ಲಿ ಎಚ್‌.ಎಂ. ವೀರಭದ್ರಯ್ಯನವರೂ ಒಬ್ಬರು. ಸ್ವಾತಂತ್ರ್ಯ ಪೂರ್ವದಲ್ಲೇ ಕಾನೂನು ಪದವಿಯನ್ನು ಗಳಿಸಿ, ವಕೀಲಿ ವೃತ್ತಿಯಲ್ಲಿ ತೊಡಗಿದ ಅವರು, ಸಮಾಜ ಸೇವೆಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡವರು. ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡವರು. ಇಂತಹ ಸಾಧಕರ ಬದುಕು–ಬರಹದ ಮೇಲೆ ಬೆಳಕು ಚೆಲ್ಲುವ ಕಾವ್ಯಶ್ರೀ ಜಿ. ಅವರ ಕೃತಿಯೇ ‘ಬೆಳಕಿನ ತೇರು’.

ಕೃತಿಯಲ್ಲಿ ಮೂರು ವಿಭಾಗಗಳಿವೆ. ಮೊದಲನೆಯ ಭಾಗದಲ್ಲಿ ವೀರಭದ್ರಯ್ಯನವರ ಬದುಕಿನ ವೃತ್ತಾಂತವಿದ್ದರೆ, ಎರಡನೇ ಭಾಗದಲ್ಲಿ ಕುಟುಂಬ ವರ್ಗದವರು ಬರೆದ ಲೇಖನಗಳಿವೆ. ಮೂರನೇ ಭಾಗದಲ್ಲಿ ಕಾನೂನು ಕ್ಷೇತ್ರದ ಹಿರಿಯರು ಬರೆದ ಲೇಖನಗಳಲ್ಲಿ ತಮ್ಮ ಈ ಸ್ನೇಹಿತನ ಜತೆಗೆ ಒಡನಾಡಿದ ಬೆಚ್ಚನೆಯ ನೆನಪುಗಳಿವೆ.

ADVERTISEMENT

ದಶಕಗಳ ಹಿಂದೆಯೇ ವೀರಭದ್ರಯ್ಯನವರು ಬರೆದ ‘ಪಾಟೀಸವಾಲು’ ಕೃತಿ ತುಂಬಾ ಮೆಚ್ಚುಗೆ ಗಳಿಸಿದ್ದು, ಕಾನೂನು ವಲಯದಲ್ಲಿ ಆಗಾಗ ಚರ್ಚೆಯಾಗುತ್ತಲೇ ಇದೆ. ಈ ಪುಸ್ತಕದ ಕುರಿತು ಬರೆದಿರುವ ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸರು, ‘ಪಾಟೀಸವಾಲಿಗೆ ಮಾತ್ರ ಈ ಕೃತಿ ಸೀಮಿತಗೊಂಡಿಲ್ಲ. ಇದು ನ್ಯಾಯ ವೃತ್ತಿಯ ಹಾಗೂ ನ್ಯಾಯಾಡಳಿತದ ಸರ್ವ ರೂಪುರೇಷೆಗಳನ್ನೂ ಒಳಗೊಂಡಿದೆ’ ಎಂದು ಕೊಂಡಾಡಿದ್ದಾರೆ.

ನ್ಯಾ. ವಿ.ಎಸ್‌. ಮಳಿಮಠ, ನ್ಯಾ. ಎ.ಜೆ. ಸದಾಶಿವ, ಸಿಕೆಎನ್‌ ರಾಜ ಮೊದಲಾದವರು ಬರೆದ ಲೇಖನಗಳು ಇಲ್ಲಿವೆ. ಗ್ರಾಮೀಣ ಭಾಗದಿಂದ ಬಂದು ದೊಡ್ಡ ಸಾಧನೆ ಮಾಡಿದ ಈ ಹಿರಿಯ ಜೀವದ ಬದುಕಿನ ಪುಟಗಳ ಓದಿನಲ್ಲಿ ಯುವ ವಕೀಲರಿಗೆ ಸಾಕಷ್ಟು ಪಾಠಗಳಿವೆ. ವೀರಭದ್ರಯ್ಯನವರ ಬದುಕಿನ ಆಪ್ತಕ್ಷಣಗಳ ಛಾಯಾಚಿತ್ರಗಳೂ ಕೃತಿಯಲ್ಲಿವೆ. ಸ್ವಾತಂತ್ರ್ಯ ಹೋರಾಟದಲ್ಲೂ ಧುಮುಕಿದ್ದ ಈ ಮಾಗಿದ ಜೀವಕ್ಕೆ ನೀಡಿದ ಅರ್ಥಪೂರ್ಣ ಕೊಡುಗೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.