
ಮುನವ್ವರ್ ಜೋಗಿಬೆಟ್ಟು ಅವರ ಎರಡನೇ ಕಥಾಸಂಕಲನ ‘ಟಚ್ ಮೀ ನಾಟ್’ನಲ್ಲಿ ಒಂಬತ್ತು ಕಥೆಗಳಿವೆ.
ಈ ಕಥೆಗಳು ಪಾತ್ರಗಳ ಮೂಲಕವೇ ಸಮಾಜದ ಸಂಕೀರ್ಣತೆಯನ್ನು ಹೇಳುತ್ತಾ, ಆಧುನಿಕತೆಯ ತಾಕಲಾಟಗಳನ್ನು ಕೂಡ ಅಭಿವ್ಯಕ್ತಪಡಿಸುತ್ತವೆ.
‘ಟಚ್ ಮೀ ನಾಟ್’ ಕಥೆಯಲ್ಲಿ ತಾನು ಮಾಡದ ತಪ್ಪೊಂದಕ್ಕೆ ಬಲಿಯಾಗುವ ಪಾತ್ರವಿದ್ದರೆ, ‘ಬಾಜಿ’ ಕಥೆಯಲ್ಲಿ ಇಂದಿನ ಯುವ ಸಮುದಾಯ ಆಧುನಿಕತೆಯಿಂದಲೇ ದಾರಿ ತಪ್ಪುತ್ತಿರುವುದನ್ನು ಕಾಣಬಹುದು. ಇಫ್ತಾರ್ ಹಾಗೂ ಕಂತ್ರಿ ನಾಯಿ, ಗೆರೆಗೆ ಸಿಗದ ನದಿ ಕಥೆಗಳು ಬಡತನದ ವಸ್ತುವನ್ನು ಹೊಂದಿದ್ದರೂ, ಸಮಾಜದ ವಿಭಿನ್ನ ದೃಷ್ಟಿಕೋನಕ್ಕೆ ಕನ್ನಡಿ ಹಿಡಿಯುತ್ತವೆ.
‘ಮುತ್ತಿಗೆ’ ಕಥೆಯು ವಿಭಿನ್ನ ಶೈಲಿಯ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಕಥೆಯಲ್ಲಿನ ಚಿನ್ನದ ಅಂಗಡಿಯ ಮ್ಯಾನೇಜರ್ ಪಾತ್ರವೊಂದು, ಚಿನ್ನದ ವ್ಯಾಪಾರವನ್ನು ಸಾಮ್ರಾಜ್ಯಕ್ಕೆ ಹೋಲಿಸಿ ಪೂರ್ತಿ ಕಥೆಯನ್ನು ನಿರೂಪಣೆ ಮಾಡುತ್ತದೆ.
ನಮ್ಮ ಜೀವನದಲ್ಲಿ ಪ್ರತಿನಿತ್ಯ ನೋಡುವ ವ್ಯಕ್ತಿಗಳೇ ಇಲ್ಲಿನ ಕಥೆಗಳಲ್ಲಿ ಮುಖ್ಯ ಪಾತ್ರಗಳಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಈ ಸಂಕಲನದ ಪ್ರತಿ ಕಥೆಗಳ ಪಾತ್ರಗಳು ಕೂಡ ವಿಭಿನ್ನ ವ್ಯಕ್ತಿತ್ವ ಹಾಗೂ ವಿಶಿಷ್ಠತೆಯಿಂದ ಕೂಡಿವೆ.
ಪಾತ್ರಗಳಲ್ಲಿನ ವೈವಿಧ್ಯವು ಈ ಸಂಕಲನದ ವಿಶೇಷವಾಗಿದೆ. ನೌಕರನಿಗೆ ಕಾಟ ಕೊಡುವ ಚಿನ್ನದ ಅಂಗಡಿಯ ಮ್ಯಾನೇಜರ್, ಯಾವುದೊ ಘಟನೆಯಿಂದ ಕಳ್ಳನಾಗುವ ಪಾತ್ರ, ಒಂದೊತ್ತಿನ ಊಟಕ್ಕಾಗೂ ಕಷ್ಟ ಪಡುವವರು, ಪಬ್ಜಿ - ಗಾಂಜಾದ ಅಮಲಿನಲ್ಲಿರುವ ಯುವಕರು, ಊರಲ್ಲಿರುವ ಏಕೈಕ ವ್ಲಾಗರ್, ಹಲವು ವರ್ಷಗಳ ಬಳಿಕ ತಾನು ಓದಿದ ಶಾಲೆಯ ಟೀಚರ್ ಭೇಟಿ ಮಾಡಲು ಹೊರಟವನು–ಹೀಗೆ ವಿಭಿನ್ನ ಪಾತ್ರಗಳು ಈ ಸಂಕಲನದ ಕಥೆಯಲ್ಲಿವೆ.
ಇದರಲ್ಲಿನ ಕಥೆಗಳಲ್ಲಿ ಮಂಗಳೂರು ಕನ್ನಡ, ಬ್ಯಾರಿ ಕನ್ನಡವನ್ನು ಕೂಡ ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಥೆಗಾರರು ಕಥಾ ಪಾತ್ರಗಳನ್ನು ಓದುಗರಿಗೆ ಸುಲಭವಾಗಿ ದಾಟಿಸಿದ್ದಾರೆ.
ಸಂಕಲನದಲ್ಲಿರುವ ಕಥೆಗಳಿಗೆ ಹಲವು ಪ್ರಮುಖ ಪ್ರಶಸ್ತಿಗಳು ದೊರಕಿವೆ.
ಟಚ್ ಮೀ ನಾಟ್
ಲೇ: ಮುನವ್ವರ್ ಜೋಗಿಬೆಟ್ಟು
ಪ್ರ: ಸಸಿ
ಪ್ರಕಾಶನ ಸಂ: 9513018456
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.