
ವಾಲ್ಮೀಕಿ ವಿರಚಿತ ರಾಮಾಯಣವನ್ನು ತಪ್ಪುಗಳೇ ಇಲ್ಲ ಎಂಬಷ್ಟು ಶುದ್ಧ ಪಠ್ಯದೊಂದಿಗೆ ನೀಡುವ ಯತ್ನ ‘ಶ್ರೀಮದ್ವಾಲ್ಮೀಕಿರಾಮಾಯಣಮ್’ ಕೃತಿಯಲ್ಲಿ ಕಾಣುತ್ತದೆ. ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿರುವ ಈ ಕೃತಿ ಸಾಂಪ್ರದಾಯಿಕ ರಾಮಾಯಣ ಪಾರಾಯಣ ಮಾಡುವವರಿಗೆ ಅತ್ಯಂತ ಸೂಕ್ತವಾಗಿದೆ. ಪ್ರತಿ ಸಂಪುಟವನ್ನು ಒಂಬತ್ತು ದಿನಗಳು ಯಾವ ರೀತಿ ಪಾರಾಯಣ ಮಾಡಬೇಕೆಂಬ ಮಾಹಿತಿಯೂ ಕೃತಿಯಲ್ಲಿದೆ.
‘ಪ್ರಾಚೀನಮುದ್ರಿತ ಪುಸ್ತಕಗಳನ್ನು ಅನುಸರಿಸಿ ದೇವನಾಗರಿ ಮತ್ತು ಕನ್ನಡ ಲಿಪಿಗಳಲ್ಲಿ ಸಂಪೂರ್ಣ ರಾಮಾಯಣದ ಮೂಲವನ್ನು ಮೂರು ಭಾಗಗಳಾಗಿ ಮುದ್ರಿಸಲಾಗಿದೆ. ಶ್ರೀಮದ್ರಾಮಾಯಣಪಾರಾಯಣೆಯನ್ನು ಮಾಡುವ ಆಸ್ತಿಕರಿಗೆ ಇದರಿಂದ ಅತ್ಯಂತ ಉಪಕಾರವಾಗುತ್ತದೆ ಎಂಬ ವಿಷಯದಲ್ಲಿ ಯಾವುದೇ ಸಂದೇಹವಿಲ್ಲ’ ಎಂಬುದಾಗಿ ಶೃಂಗೇರಿಯ ಶ್ರೀ ಭಾರತೀತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶದಲ್ಲಿ ಹೇಳಿರುವುದು ಪುಸ್ತಕದ ಸಂಶೋಧನಾ ಶ್ರೇಷ್ಠತೆಗೆ ಹಿಡಿದ ಕನ್ನಡಿಯಂತಿದೆ.
ಸಾಕೇತ ಪ್ರತಿಷ್ಠಾನದ ಮೂಲಕ ಪ್ರಕಟಗೊಂಡಿರುವ ಈ ಕೃತಿಗೆ ನಾಡಿನ ಹಲವು ವಿದ್ವಾಂಸರು ಸೂಕ್ತ ಆಕರ ಗ್ರಂಥಗಳನ್ನು ಒದಗಿಸಿ, ಕೃತಿ ಪರಿಶೀಲಿಸುವ ಮೂಲಕ ಕೊಡುಗೆ ನೀಡಿದ್ದಾರೆ. ಪಾರಾಯಣಕ್ಕೆ ಅನುಕೂಲವಾಗುವಂತೆ ಶ್ಲೋಕಗಳನ್ನು ಮೂರು ಸಂಪುಟಗಳಲ್ಲಿ ವಿಂಗಡಿಸಲಾಗಿದ್ದು, ಶೃಂಗೇರಿ ಮಠದ ಮೇಲ್ವಿಚಾರಣೆಯೊಂದಿಗೆ ಈ ಸರಣಿ ಸಿದ್ಧಗೊಂಡಿದೆ. ಪರಿಣಾಮವಾಗಿ ವಸ್ತು–ವಿಷಯ ಗುಣಮಟ್ಟದಲ್ಲಿಯೂ ಉತ್ಕೃಷ್ಟವಾಗಿದೆ. ರಾಮಾಯಣ ಪಾರಾಯಣ ವಿಧಿವಿಧಾನದಿಂದ ಪ್ರಾರಂಭಿಸಿ ಏಳು ಕಾಂಡಗಳ ಸಂಪೂರ್ಣ ಕಥೆಯಿದೆ. ಏಳು ಕಾಂಡಗಳ ಒಟ್ಟು 23,664 ಶ್ಲೋಕಗಳು ಈ ಕೃತಿಯಲ್ಲಿವೆ. ಇಡೀ ಕೃತಿ ಸಂಸ್ಕೃತ ಶ್ಲೋಕ ರೂಪದಲ್ಲಿ ಇರುವುದರಿಂದ, ಶ್ಲೋಕಗಳನ್ನು ಅರ್ಥೈಸಿಕೊಂಡು ರಾಮಾಯಣದ ಕುರಿತು ಆಳವಾದ ಅಧ್ಯಯನ ಬಯಸುವವರಿಗೆ, ರಾಮಾಯಣದ ಮೂಲ ಸ್ವರೂಪವನ್ನು ಸಂಶೋಧಿಸುವ ವಿದ್ವಾಂಸರಿಗೆ ಹೆಚ್ಚು ರುಚಿಸುವ ಹೊತ್ತಿಗೆಯಿದು.
ಶ್ರೀಮದ್ವಾಲ್ಮೀಕಿರಾಮಾಯಣಮ್
3 ಸಂಪುಟಗಳು
ಸಂ: ಶೇಷಗುರು ಗಂಗಾಧರ ಭಟ್ಟ
ಪ್ರ: ಸಾಕೇತಪ್ರತಿಷ್ಠಾನಮ್
ಸಂ: 9448142866
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.