ಶಾಸ್ತ್ರೀಯ ನೃತ್ಯ ಕಲಾಪ್ರಕಾರಗಳು ಹೊಸತಲೆಮಾರಿಗೆ ಎಷ್ಟರಮಟ್ಟಿಗೆ ಅರ್ಥವಾಗುತ್ತಿವೆ ಎನ್ನುವ ಪ್ರಶ್ನೆ ಸದಾ ಕಲಾ ವಿಮರ್ಶಕರನ್ನು ಕಾಡುತ್ತದೆ. ಉದಾಹರಣೆಗೆ ಭರತನಾಟ್ಯ ಕಲಾವಿದೆಯೊಬ್ಬಳು ಸ್ನೇಹಿತರನ್ನು ತನ್ನ ನೃತ್ಯ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾಳೆ ಎಂದಿಟ್ಟುಕೊಳ್ಳೋಣ. ಸ್ನೇಹಿತರೆಲ್ಲ ಸೇರಿ ಆ ನೃತ್ಯ ಕಾರ್ಯಕ್ರಮಕ್ಕೆ ಬರುತ್ತಾರೆ. ಆದರೆ ವೇದಿಕೆಯಲ್ಲಿ ನಡೆಯುತ್ತಿರುವ ನೃತ್ಯ ಪ್ರಸ್ತುತಿಯು ಅವರಿಗೆ ಅರ್ಥವಾಗುವುದು ಕಷ್ಟ. ಏಕೆಂದರೆ ನೃತ್ಯದಲ್ಲಿ ಹೂವು ಕೊಯ್ಯುವ, ಜಿಂಕೆಯೊಡನೆ ಮಾತನಾಡುವ, ಸಖಿಯ ಕೈ ಹಿಡಿದು ಬಾಗಿಲಿನವರೆಗೆ ಬಂದು ಪ್ರಿಯಕರ ಬಂದನೇ ಎಂದು ನೋಡುವ ಆ ಅಭಿನಯವು ಸಮಕಾಲೀನವಾದ ವಿಚಾರವಲ್ಲ. ಆದ್ದರಿಂದ, ಈ ರೀತಿಯ, ಸುಮಾರು ಒಂದೂವರೆಗಂಟೆಯ ಶಾಸ್ತ್ರೀಯ ನೃತ್ಯ ಕಾರ್ಯಕ್ರಮದಲ್ಲಿ, ತನ್ನ ಸಮಕಾಲೀನ ಸ್ನೇಹಿತರನ್ನು ತಲುಪುವುದಕ್ಕೆ ಏನಾದರೂ ಪ್ರಯತ್ನ ಮಾಡಬಹುದೇ ಎಂದು ಯೋಚಿಸಿದವರು ಭರತನಾಟ್ಯ ಕಲಾವಿದೆ ಚೆನ್ನೈನ ಕಾವ್ಯಾ ಗಣೇಶ್.
ಸಮಕಾಲೀನ ವಿಷಯಗಳ ಚುಂಗು ಹಿಡಿದು ಹೊಸತಲೆಮಾರಿಗೆ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಪರಿಚಯಿಸಬಹುದಲ್ಲವೇ ಎಂದು ಆಲೋಚಿಸಿದ ಅವರು, ಹೊಸರೀತಿಯ ಅಭಿನಯವನ್ನು ಅಳವಡಿಸಿಕೊಂಡರು. ಅಷ್ಟೇ ಅಲ್ಲ, ‘ರಿಲೇಷನ್‌ಶಿಪ್’ನಲ್ಲಿರುವ ಮಹಿಳೆಯಲ್ಲಿ ಬೇರೂರಿರುವ ಸ್ವಾಭಿಮಾನದ ಭಾವವನ್ನೂ ನೃತ್ಯ ಸಾಹಿತ್ಯದೊಳಗೆ ಸೇರಿಸಿಕೊಂಡು ಪ್ರಸ್ತುತಪಡಿಸುವ ಉದ್ದೇಶದಿಂದ ಹೊಸ ಹಾಡನ್ನೂ ಬರೆಯುವ ಪ್ರಯತ್ನ ಮಾಡಿದರು. ಅವರ ಈ ಪ್ರಯತ್ನದ ಫಲಿತಾಂಶವೆಂಬಂತಿದೆ ಹೊಸರೀತಿಯ ‘ವರ್ಣಂ’.
ಹೊಸ ‘ವರ್ಣಂ’ನಲ್ಲಿ ಅವನಿಗಾಗಿ ಹೂಮಾಲೆಯನ್ನು ಸಿದ್ಧಪಡಿಸುವ ಆರ್ತತೆಯಿಲ್ಲ. ಸಖಿಯೊಡನೆ ಅವನ ಸುದ್ದಿ ಕೇಳುವ ಧಾವಂತವಿಲ್ಲ. ಅವನೇ ದೇವರೆಂದು ಪೂಜಿಸುವ ಶರಣಾಗತಿಯೂ ಇಲ್ಲ. ಈ ಸಂಬಂಧದಿಂದ ಅವನು ಹೊರನಡೆದ ಬಳಿಕ ನಿಜವಾಗಿಯೂ ತನ್ನತನವನ್ನು ಹೇಗೆ ಕಂಡುಕೊಳ್ಳುತ್ತಿದ್ದೇನೆ ಎಂಬ ಅರಿವಿನ ಹೊಳಹುಗಳಿವೆ. ಅಬ್ಬಾ, ಅವನು ಹೋದನಲ್ಲ ಎನ್ನುವ ನಿರಾಳತೆ ಒಂದೆಡೆ. ‘ಅರೇ ಇವನೊಡನೆ ಸಂಬಂಧ ಉಳಿಸಿಕೊಳ್ಳಲು ನಾನು ಎಷ್ಟೆಲ್ಲಾ ಪ್ರಯತ್ನ ಮಾಡುತ್ತಿದ್ದೆನೆಲ್ಲಾ...’ ಎಂಬ ಅಚ್ಚರಿ ಮತ್ತೊಂದೆಡೆ. ಅವನನ್ನು ಜೀವನದಲ್ಲಿ ಉಳಿಸಿಕೊಳ್ಳಬೇಕಾದರೆ ಪ್ರತೀ ಬಾರಿಯೂ ‘ತನ್ನದೇನು ಮಹಾ..ನೀನೇ ಮಹಾನ್’ ಎಂಬ ಧೋರಣೆಯಲ್ಲಿ ಅವನನ್ನು ಓಲೈಸುತ್ತಿದ್ದೆನಲ್ಲಾ ಎಂಬ ಹೊಳಹು, ಇನ್ನು ಮುಂದೆ ಅವನ ತಾಳಕ್ಕೆ ಕುಣಿಯಬೇಕಿಲ್ಲ ಎಂಬ ನಿರಾಳತೆ ಕೂಡ ಇದೆ. ಕಾವ್ಯಾ ಅವರಿಗೆ ಹೊಳೆದ ಈ ಆಲೋಚನೆಯನ್ನು ಆಧರಿಸಿ ಸೂರ್ಯಶ್ರೀರಾಮ್ ಸಾಹಿತ್ಯ ರಚನೆ ಮಾಡಿದ್ದಾರೆ. ಕಾವ್ಯಾ ಅದ್ಭುತ ನೃತ್ಯ ಸಂಯೋಜನೆ ಮಾಡಿ ದೇಶದ ವಿವಿಧೆಡೆ ಪ್ರದರ್ಶಿಸುತ್ತಿದ್ದಾರೆ.
ಅವನಿಗಿಂತ ತಾನು ಎತ್ತರ ಕಾಣಬಾರದೆಂಬ ದಾಕ್ಷಿಣ್ಯವಿಲ್ಲದೆ ಹೈಹೀಲ್ಡ್ ಧರಿಸಿ ನಿರಾಳವಾಗಿ ನಡೆಯುವ ಹುಡುಗಿ, ಲ್ಯಾಪ್‌ಟಾಪ್‌ನಲ್ಲಿ ಮುಳುಗಿ ಕೆಲಸ ಮಾಡುತ್ತಿರುವಾಗ, ‘ಕಾಫಿ ಕೊಡು’ ಎಂದು ಪದೇ ಪದೇ ಕಿರಿಕಿರಿಯಿಲ್ಲದ ಪ್ರಶಾಂತತೆ, ಮಿನಿಸ್ಕರ್ಟ್ ತೊಡುವಾಗ ಗದರುವ ಕಣ್ಣುಗಳಿಲ್ಲದ ಹಗುರಭಾವಗಳನ್ನು ಅನುಭವಿಸುವ ನಾಯಕಿಯ ಮನಸ್ಥಿತಿಯು ಹೊಸ ‘ವರ್ಣಂ’ನ ಪ್ರಧಾನ ಆಶಯ.
‘ಈಗ ಅವನು ಹೊರಟು ಹೋದದ್ದೇ ನನ್ನೆಲ್ಲ ಶಕ್ತಿಯು ಮರಳಿ ದೊರೆತಿದೆ, ನನ್ನದೇ ಹಾಡೊಂದು ನೆನಪಾಗಿದೆ’ ಎನ್ನುವ ತಮಿಳು ಹಾಡಿಗೆ ಅಭಿನಯಿಸುತ್ತ ಕಾವ್ಯಾ, ‘ಟಪ್..’ ಎಂದು ಲ್ಯಾಪ್‌ಟಾಪ್ ಮುಚ್ಚುವ, ಹೈಹೀಲ್ಡ್ ಹಾಕಿ ನಡೆಯುವ, ಮಿನಿಡ್ರೆಸ್ ಧರಿಸುವ ಹುರುಪನ್ನೂ ಹಸ್ತಾಭಿನಯ, ಕಾಲ್ಚಳಕ ಮತ್ತು ಆಂಗಿಕದೊಂದಿಗೆ ಸುಂದರವಾಗಿ ಪ್ರಸ್ತುತಪಡಿಸುತ್ತಾರೆ.
ಗೋಡೆಗಳು ನರ್ತಿಸಿದಾಗ
ಇಂತಹುದೇ ಹೊಸ ಪ್ರಯತ್ನವೊಂದನ್ನು ಮಾಡುವ ಕಲಾವಿದೆ ಪ್ರಾಚಿ ಸಾಥಿ, ಭರತನಾಟ್ಯ, ವರ್ಲಿ ಕಲೆ ಮತ್ತು ಅನಿಮೇಷನ್ ಕಲೆಗಳ ಸಮಪಾಕ ಸೃಷ್ಟಿಸಿದವರು. ‘ಗೋಡೆಗಳು ನರ್ತಿಸಿದಾಗ’ ಎನ್ನುವುದು ಅವರ ನೃತ್ಯದ ಶೀರ್ಷಿಕೆ. ಕಲಾವಿದೆಯ ಹೆಜ್ಜೆಯೊಡನೆ ಹಿನ್ನೆಲೆಯಲ್ಲಿ, ವರ್ಲಿ ಕಲೆಯಿಂದ ಅಲಂಕೃತವಾದ ಗೋಡೆಯು ಚಲಿಸುತ್ತ, ಪರಿಸರದ ಮಹತ್ವನ್ನು ಹೇಳುವ ಕಥೆಯೊಂದನ್ನು ಅನಾವರಣಗೊಳಿಸುತ್ತದೆ. ಬುಡಕಟ್ಟು ಸಮುದಾಯದ ಚಂಪಾ ಎಂಬ ಪುಟ್ಟ ಹುಡುಗಿ ಮತ್ತು ಆಕೆಯ ಪ್ರೀತಿಯ ಮರದ ನಡುವಿನ ಸಂಭಾಷಣೆಯೇ ನೃತ್ಯ ಪ್ರಸ್ತುತಿಯ ಹೂರಣ. ಈ ಸಂಭಾಷಣೆಯು ರಸಿಕರೊಡನೆ ಮಾಡುವ ಸಂವಹನ ಪರಿಣಾಮಕಾರಿ. ಅಲರಿಪು, ಚಂಪಾಳ ಹುಟ್ಟು, ವರ್ಣಮಾಲೆಯ ಹಾಡು, ಮದುವೆಯ ಹಾಡು, ಹಕ್ಕಿ ಹಾಡು, ವರ್ಲಿ ಬುಡಕಟ್ಟಿನ ಬೋಹದ ಎಂಬ ಹಬ್ಬದ ಹಾಡು, ಮಳೆ ಹಾಡು ಮತ್ತು ತಿಲ್ಲಾನದೊಂದಿಗೆ ನೃತ್ಯ ಪ್ರಸ್ತುತಿ ರೂಪುಗೊಂಡಿದೆ.
ನೃತ್ಯವು ಬದುಕಿನ ಅನುಕರಣೆ ಎಂದು ನಂಬುವುದಾದರೆ ಇಂತಹ ಬುಡಕಟ್ಟು ಸಮುದಾಯದ ಕಲಾಕೃತಿಗಳನ್ನು ಒಳಗೊಳ್ಳಬಾರದೇಕೆ ಎಂಬ ದೃಷ್ಟಿಯಿಂದ ಇಂತಹ ಪ್ರಯತ್ನ ಮಾಡಿದೆ ಎನ್ನುವ ಪ್ರಾಚಿ, ವೇಗದ ಹೆಜ್ಜೆಯಿಡುವ ತನ್ನ ಸಮಕಾಲೀನ ಸಮುದಾಯವು ನೃತ್ಯದತ್ತ ತಿರುಗಿ ನೋಡಬೇಕು ಎಂದು ಆಶಿಸುತ್ತಾರೆ.
ಇದೇ ಮಾದರಿಯ ಹೊಸ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿರುವವರು ಮಂಗಳೂರಿನ ಶುಭಾಮಣಿ ಚಂದ್ರಶೇಖರ್, ಚೆನ್ನೈಯ ಮೈಥಿಲಿ ಪ್ರಕಾಶ್, ಪ್ರೀತಿ ಭಾರದ್ವಾಜ್, ವೈಭವ್ ಅರೇಕರ್ ಮುಂತಾದವರು.
‘ಭರತನಾಟ್ಯ ನಾನು ಕಲಿತ ಒಂದು ಭಾಷೆ. ಅದನ್ನು ಬಳಸಿ, ನನ್ನ ಸಮಕಾಲೀನರೊಡನೆ, ಮಕ್ಕಳೊಡನೆ ಸಂವಹನ ನಡೆಸಲು ಇಂತಹ ಅನೇಕ ಪ್ರಯತ್ನಗಳನ್ನು ಮಾಡಲು ಇಷ್ಟಪಡುವೆ’ ಎನ್ನುವುದು ಪ್ರೀತಿ ಭಾರದ್ವಾಜ್ ನಿಲುವು. ಅದಕ್ಕೆ ಪೂರಕವಾಗಿ ಹಿರಿಯ ಕಲಾವಿದರ ಮಾರ್ಗದರ್ಶನವೂ ಇದೆ. ‘ಯುವ ಕಲಾವಿದರು ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದರೆ ಅವರಲ್ಲಿ ನೃತ್ಯದ ಬಗ್ಗೆ ತೀವ್ರ ಆಸ್ಥೆಯಿದೆ ಎಂದರ್ಥ. ಅದರ ಯಶಸ್ಸು ಅಪಯಶಸ್ಸು ಏನೇ ಇರಲಿ, ಪ್ರೋತ್ಸಾಹಿಸುವುದು ಮುಖ್ಯ’ ಎಂದು ನಂಬಿರುವ ದೆಹಲಿಯ ರಮಾ ವೈದ್ಯನಾಥ್.
ದೇವಸ್ಥಾನಕ್ಕೆ ಸೀಮಿತವಾಗಿದ್ದ ನೃತ್ಯವು ವಿಕಾಸ ಹೊಂದಿ ವೇದಿಕೆಯಲ್ಲಿ ಅರಳಿನಿಂತಿದೆ. ಇಲ್ಲಿ, ಬದಲಾವಣೆ ಎನ್ನುವುದು ನಿರಂತರ ಪ್ರಕ್ರಿಯೆ. ‘21ನೇ ಶತಮಾನದಲ್ಲಿ ನಾವು ಹಲವಾರು ಹೊಸ ಪ್ರಯತ್ನಗಳನ್ನು ನೋಡುತ್ತಿದ್ದೇವೆ. ನೃತ್ಯ ಮತ್ತು ಅಭಿನಯದ ಪರಿಕಲ್ಪನೆ ಮತ್ತು ಭಾಷ್ಯವು ವಿಸ್ತಾರವಾಗುತ್ತಿದೆ. ಈ ರೀತಿಯ ಹೊಸ ಹರಿವನ್ನು ನಿಲ್ಲಿಸಲಾಗದು. ಈ ಹರಿವು ಭರತನಾಟ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ’ ಎನ್ನುತ್ತಾರೆ ರಮಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.