ಸಂಧ್ಯಾ ಪುರೇಚಾ
ಭರತನಾಟ್ಯಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿ ದಂತಕತೆಯಾಗಿ ವಿಜೃಂಭಿಸಿದ ಆಚಾರ್ಯ ಪಾರ್ವತಿಕುಮಾರ್ ನಿಜಕ್ಕೂ ಆಚಾರ್ಯ ಪುರುಷರು. ಸರ್ಫೋಜಿ ಮಹಾರಾಜರ ಮರಾಠಿ ನಿರೂಪಣಂಗಳ ಬಗೆಗೆ ಸಂಶೋಧನೆಯನ್ನು ಮಾಡಿ ಅವುಗಳನ್ನು ನೃತ್ಯೀಕರಿಸಿದ ಶ್ರೇಯಸ್ಸಿಗೆ ಪಾತ್ರರಾದವರು. ನಂದೀಕೇಶ್ವರನ ‘ಅಭಿನಯ ದರ್ಪಣಂ’ ಶಾಸ್ತ್ರ ಗ್ರಂಥವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಅದನ್ನೇ ಆಧಾರವಾಗಿಟ್ಟುಕೊಂಡು ಭರತನಾಟ್ಯದ ಸಂಯೋಜನೆಗಳನ್ನು ಮಾಡಿ ಸಾಧಿಸಿದವರು. ಅವರ ಶಿಷ್ಯೆ ಸಂಧ್ಯಾ ಪುರೇಚಾ ಭರತನಾಟ್ಯ ಕ್ಷೇತ್ರದ ಹಿರಿಯ ಕಲಾವಿದೆ.
ಗುರುಗಳ ಆದೇಶ ಮತ್ತು ಮಾರ್ಗದರ್ಶನದಲ್ಲಿ ‘ಅಭಿನಯ ದರ್ಪಣಂ’ ನ ಶ್ಲೋಕಗಳ ಸಮಗ್ರ ಅಧ್ಯಯನ ಕೈಗೊಂಡು ಅವುಗಳನ್ನು ಭರತನಾಟ್ಯಕ್ಕೆ ಅಳವಡಿಸಿದ ಮೊದಲ ಕಲಾವಿದೆ ಸಂಧ್ಯಾ, ಕರಣಗಳ ಬಗೆಗೆ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ. ಪ್ರಬುದ್ಧ ಕಲಾವಿದೆ, ಸಂಯೋಜಕಿ, ಶಿಕ್ಷಕಿ, ಸಂಘಟಕಿ ಪಾತ್ರಗಳಲ್ಲಿ ಮಿಂಚಿದ್ದಾರೆ. ದೇಶದ ಸಂಗೀತ, ನೃತ್ಯ, ನಾಟಕಾದಿ ಕಲೆಗಳ ಪ್ರಾತಿನಿಧಿಕ ಸಂಸ್ಥೆಯಾಗಿರುವ ದೆಹಲಿಯಲ್ಲಿರುವ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆಯಾಗಿ ಸಕ್ರಿಯರಾಗಿದ್ದಾರೆ. ಮಧ್ಯಪ್ರದೇಶ ಸರ್ಕಾರದ ಪ್ರತಿಷ್ಠಿತ ‘ಕಾಳಿದಾಸ್ ಸಮ್ಮಾನ್’ಗೂ ಭಾಜನರಾಗಿದ್ದಾರೆ.
ನಿಮ್ಮ ಕಲಾಯಾನ ಆರಂಭಗೊಂಡಿದ್ದು ಹೇಗೆ?
ನಮ್ಮ ನೃತ್ಯ ಶೈಲಿಯು ಒಂದು ಗಟ್ಟಿಯಾದ ಅರ್ಥಪೂರ್ಣ ಶಾಸ್ತ್ರೀಯತೆ, ಸಂಪ್ರದಾಯ ಹಾಗೂ ಪರಂಪರೆಯ ಮೇಲೆ ಸುಭದ್ರವಾಗಿ ಬೇರೂರಿದೆ. ನಾವು ಅದನ್ನು ಸಂರಕ್ಷಿಸುತ್ತಾ ಉಳಿಸಿ ಬೆಳೆಸಬೇಕು. ಸಾಂಪ್ರದಾಯಿಕ ಸಂಯೋಜನೆಯ ರಚನೆಗಳನ್ನು ಯಥಾವತ್ತಾಗಿ ಕಾಪಿಟ್ಟುಕೊಳ್ಳಬೇಕು. ಏನೇ ಆಗಲಿ, ಸಾಂಪ್ರದಾಯಿಕತೆಯನ್ನು ಕಡೆಗಣಿಸಬಾರದು. ಅವುಗಳ ಸಾರ ಮತ್ತು ಸ್ವಾರಸ್ಯವನ್ನು ಭವಿಷ್ಯದ ಪೀಳಿಗೆಯು ಅರ್ಥಮಾಡಿಕೊಳ್ಳುವ ಅವಕಾಶವನ್ನು ನಾವು ಕಸಿದುಕೊಳ್ಳಬಾರದು ಎಂದು ನಂಬಿರುವ ನಾನು ಅದನ್ನೇ ಮಾಡುತ್ತಿದ್ದೇನೆ. ಹಾಗಾಗಿ ನನಗೆ ಆತ್ಮ ಸಂತೋಷದ ಜೊತೆಗೆ ಅನೇಕ ರೀತಿಯಲ್ಲಿ ಅದರ ಸತ್ಫಲಗಳನ್ನು ಹೊಂದಿ ಅವುಗಳನ್ನು ಹಂಚುತ್ತಿದ್ದೇನೆ. ಭಾರತೀಯ ಜನಪದ ನೃತ್ಯಗಳನ್ನು ಕಲಿಯುವುದರೊಂದಿಗೆ ನನ್ನ ಕಲಾಯಾನ ಪ್ರಾರಂಭವಾಯಿತು. ನಂತರ ನೃತ್ಯ ಸಂಯೋಜಕ, ಸಂಶೋಧಕ, ಗುರು ಆಚಾರ್ಯ ಪಾರ್ವತಿಕುಮಾರ್ ಅವರ ಶಿಸ್ತುಬದ್ಧ ಮಾರ್ಗದರ್ಶನದಲ್ಲಿ ನನ್ನ ಸಾಧನೆ ಮುಂದುವರೆಯಿತು. ಭಾರತನಾಟ್ಯದ ಮುದ್ರೆಗಳು ಮತ್ತು ಭಂಗಿಗಳ ಮೂಲವನ್ನು ಮರುಶೋಧಿಸಲು ನಂದಿಕೇಶ್ವರನ ‘ಅಭಿನಯಾ ದರ್ಪಣಂ’ ಸೂಕ್ತ ಗ್ರಂಥವೆಂದು ಪರಿಗಣಿಸಿ ಪಟ್ಟುಬಿಡದೆ ಮಾಡಿದ್ದ ಆಚಾರ್ಯರ ಕೆಲಸವನ್ನು ಮುಂದವರೆಸಿ ಸುಮಾರು ಐದು ವರ್ಷಗಳಲ್ಲಿ ಅದರ 324 ಶ್ಲೋಕಗಳನ್ನು ಕಲಿತು ಪ್ರಸ್ತುತ ಪಡಿಸಿದೆ. ‘ಭರತನಾಟ್ಯದಲ್ಲಿ ಆಂಗಿಕಾಭಿನಯ-ಸಿದ್ಧಾಂತ ಮತ್ತು ಅಭ್ಯಾಸ’ ವಿಷಯವನ್ನು ಕುರಿತಾಗಿ ಪಿಎಚ್‌ಡಿ ಪದವಿ ಪಡೆದೆ.
‘ಗುರು ದಕ್ಷಿಣ’, ‘ಅರ್ಥಶೃಂಗಾರ್’, ‘ಋತು ಸಂಹಾರ್’ ಮುಂತಾದ ನನ್ನ ಬಹುಮಾನಿತ ಪ್ರಸ್ತುತಿಗಳು ಒಂದು ರೀತಿಯಲ್ಲಿ ‘ಅಭಿನಯ ದರ್ಪಣಂ’ನ ವಿಸ್ತರಣೆಯೇ ಆಗಿದ್ದು, ಅದರ ಸಂಗೀತ, ಥೀಮ್ ಮತ್ತು ವೇಷಭೂಷಣಗಳು ಸಮಕಾಲೀನವಾಗಿತ್ತು. ಇವು ಕೇವಲ ಒಂದೆರಡು ಉದಾಹರಣೆಗಳಾಗಿವೆ. ನನ್ನ ಬಹುತೇಕ ಎಲ್ಲಾ ನಿರ್ಮಾಣಗಳು ಶಾಸ್ತ್ರದೊಂದಿಗೆ ಉಸಿರಾಡುತ್ತವೆ.
ಕಲಾ ಪ್ರದರ್ಶನಗಳಲ್ಲಿ ಬದಲಾವಣೆಗಳನ್ನು ನೀವು ಸ್ವಾಗತಿಸುತ್ತೀರಾ?
ಪರಿವರ್ತನೆಯೇ ಜೀವನ. ಇದು ನಿರಂತರ ಸತ್ಯ. ಅದು ನಿಂತ ನೀರಾಗದೆ ಮರು ಮೌಲ್ಯಮಾಪನವಾಗುತ್ತಿರಬೇಕು ಮತ್ತು ಸಮಯದೊಂದಿಗೆ ರಿಫ್ರೆಶ್ ಆಗಬೇಕು! ಅಲಂಕಾರ ಶಾಸ್ತ್ರ ಅಥವಾ ಕಾವ್ಯಗಳಲ್ಲಿ ನಾವು ಔಚಿತ್ಯ ಮತ್ತು ಅನೌಚಿತ್ಯಗಳ ಅಧ್ಯಯನ ಮಾಡುವಂತೆಯೇ ಅದೇ ತತ್ವವನ್ನು ನೃತ್ಯಕ್ಕೂ ಅನ್ವಯಿಸಬೇಕು.
ಪ್ರೇಕ್ಷಕರು ಮತ್ತು ಕಲಾವಿದರ ಪ್ರತಿಕ್ರಿಯೆಗಳು ಮತ್ತು ಜವಾಬ್ದಾರಿಗಳು ಏನು?
ಇಂದು ಪ್ರೇಕ್ಷಕರ ಪ್ರಮುಖ ಜವಾಬ್ದಾರಿಗಳಲ್ಲಿ ಒಂದು ತಾಳ್ಮೆ ಬೆಳೆಸಿಕೊಳ್ಳುವುದು. ಅವರು ತಮ್ಮನ್ನು ತಾವು ತಲ್ಲೀನಗೊಳಿಸುವ ಅನುಭವವನ್ನು ಆನಂದಿಸಬೇಕು. ಈಗಿನ ಕಾಲದ ಪ್ರೇಕ್ಷಕರು, ಸಹೃದಯಿಗಳು, ರಸಿಕರು ಬಹಳ ಜಾಣರು. ವಿವಿಧ ರಾಜ್ಯಗಳಲ್ಲಿ ನಾವು ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಿಗೆ ಅವರಿಂದ ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದೇವೆ. ಕಲಾವಿದರು ತಮ್ಮ ಕಲಾ ಪ್ರಕಾರಗಳ ಮೂಲಕ ಉಂಟು ಮಾಡುವ ರಸವನ್ನು ಸಹೃದಯಿಗಳು ಸಂಪೂರ್ಣವಾಗಿ ಹೀರಿಕೊಳ್ಳುವಂತಾಗಬೇಕು. ಅವರು ತಮ್ಮನ್ನು ತಾವು ತಲ್ಲೀನಗೊಳಿಸುವ ಅನುಭವವನ್ನು ಆನಂದಿಸಬೇಕು. ರಸಿಕರು ಕೇವಲ ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು ಮೀರಿ, ಕಲೆಯಲ್ಲಿ ಆಸಕ್ತಿಯು ಬೆಳೆಯುವಂತೆ ಕಲಾವಿದರು ತಮ್ಮ ಕಾರ್ಯಕ್ರಮಗಳನ್ನು ಯೋಚಿಸಿ ಯೋಜಿಸಬೇಕು. ಅವು ಆ ಕಲೆಯ ಬಗೆಗೆ ಮತ್ತಷ್ಟು ತಿಳಿದುಕೊಳ್ಳಲು ಸ್ಫೂರ್ತಿ ಮತ್ತು ಅವಕಾಶವನ್ನು ಉಂಟು ಮಾಡುವಂತಹ ಪ್ರಸ್ತುತಿಗಳಾಗಬೇಕು. ಇಂದಿನ ವೇಗದ ಗತಿಯ ಗ್ರಾಹಕ-ಚಾಲಿತ ಜಗತ್ತಿನಲ್ಲಿ, ಮನರಂಜನೆ ಹಾಗೂ ಮನೋವಿಕಾಸವೂ ಸೇರಿದಂತೆ ಬಾಯಿ ಮಾತು ಮತ್ತು ಪ್ರಚಾರ-ಪ್ರಸಾರ ಪ್ರಬಲ ಪಾತ್ರ ವಹಿಸುತ್ತದೆ. ಆದ್ದರಿಂದ, ನಿರ್ಣಾಯಕ ಜವಾಬ್ದಾರಿ ಅಂದರೆ ‘ಹಂಚಿಕೊಳ್ಳುವುದು’ ವಾಟ್ಸ್‌ಆ್ಯಪ್ ಸಂದೇಶ ಕಾಡ್ಗಿಚ್ಚಿನಂತೆ ಹರಡಿ ಪ್ರಸಾರ-ಪ್ರಚಾರವಾಗುವಂತೆ, ಕಲೆಗಳ ಬಗ್ಗೆ ಮೆಚ್ಚುಗೆಯೂ ರವಾನಿಸಲ್ಪಡಬೇಕು. ನಮ್ಮ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಮೆಚ್ಚುಗೆಯನ್ನು ಉಳಿಸಿಕೊಳ್ಳುವಲ್ಲಿ ಮತ್ತು ಬೆಳೆಸುವಲ್ಲಿ ಬಾಯಿಮಾತು ಪ್ರಬಲ ಪಾತ್ರ ವಹಿಸುತ್ತದೆ. ನೀವು ಏನನ್ನಾದರೂ ಆನಂದಿಸಿದರೆ, ಅದಕ್ಕೆ ನಿಮ್ಮ ಸ್ನೇಹಿತರನ್ನೂ ಕರೆತನ್ನಿ ಮತ್ತು ಹೆಚ್ಚಿನ ಪ್ರದರ್ಶನಗಳಿಗೆ ಅವರನ್ನು ಪರಿಚಯಿಸಿ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರ್ವಹಿಸುತ್ತಿರುವ ಪಾತ್ರಗಳ ಬಗೆಗೆ ಹೇಳಿ?
ಬಹಳ ಉತ್ತೇಜನಕಾರಿಯಾಗಿದೆ. ಭಾರತದ ದೂರದ ಮೂಲೆಗಳಿಗೆ ನಮ್ಮ ಕಲಾ ಪ್ರಕಾರಗಳನ್ನು ಯಶಸ್ವಿಯಾಗಿ ಪರಿಚಯಿಸಿ ಸ್ಥಳೀಯ ಕಲಾವಿದರೊಂದಿಗೆ ಆಳವಾದ, ವೈಯಕ್ತಿಕ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾಗಿದೆ. ಅಪರೂಪದ ಇತಿಹಾಸವುಳ್ಳ ವಿವಿಧ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲು ಸರ್ಕಾರಗಳು ಸಕ್ರಿಯವಾಗಿ ಸಹಕರಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.