ADVERTISEMENT

ನೃತ್ಯದ ಲಾಲಿತ್ಯ: ತಾಯಿ–ಮಗಳ ಸಾಂಗತ್ಯ

ವಿಕ್ರಂ ಕಾಂತಿಕೆರೆ
Published 30 ಆಗಸ್ಟ್ 2025, 23:53 IST
Last Updated 30 ಆಗಸ್ಟ್ 2025, 23:53 IST
ಶ್ರೀಯಾ ಮತ್ತು ಸೌಮ್ಯಾ 
ಶ್ರೀಯಾ ಮತ್ತು ಸೌಮ್ಯಾ    

ಮಂಗಳೂರಿನಲ್ಲಿ ಈಚೆಗೆ ನಡೆದ ಕಲಾಪೋಷಕ, ಯುವ ಕಲಾವಿದ ಸ್ವರುಣ್ ರಾಜ್ ಅವರ ಸ್ಮರಣಾಂಜಲಿ ಕಾರ್ಯಕ್ರಮದ ಪ್ರಮುಖ ಭಾಗ, ನವದೆಹಲಿಯ ವಿದುಷಿ ಶುಭಾಮಣಿ ಮತ್ತು ಚೆನ್ನೈನ ವಿಜಯಕುಮಾರ್ ಅವರ ನೃತ್ಯ ಪ್ರದರ್ಶನ. ಶುಭಾಮಣಿ ಅವರ ಭರತನಾಟ್ಯದ ಕೆಲವು ಭಾಗಗಳಲ್ಲಿ ನಟುವಾಂಗ ಆಗಿದ್ದವರು ಅವರ ತಾಯಿ, ವಿದುಷಿ ಶಾರದಾಮಣಿ ಶೇಖರ್.

ಮಗಳಿಗೆ ತಾಯಿ ನಟುವಾಂಗ ಆಗುವ ಇಂಥ ಪ್ರಸಂಗಗಳು ವಿಶೇವೇನಲ್ಲ. ಈಚೆಗೆ, ತಾಯಿಗೆ ಮಗಳು ನಟುವಾಂಗ ಆಗುವುದು ಕೂಡ ಅಪರೂಪವೇನಲ್ಲ. ತಾಯಿ–ಮಗಳ ಸಾಂಗತ್ಯ ಇತ್ತೀಚಿನ ವರ್ಷಗಳಲ್ಲಿ ನೃತ್ಯದಲ್ಲಿ ಅಷ್ಟರ ಮಟ್ಟಿಗೆ ಗಟ್ಟಿಯಾಗಿ ಬೇರೂರಿದೆ. ಪರಂಪರೆ ಮತ್ತು ಹೊಸತನದ ಬೆಸುಗೆಯ ಕೊಂಡಿಯಾಗಿಯೂ ನೃತ್ಯರೂಪಕಗಳಲ್ಲಿ ಈ ‘ಸಾಥ್‌–ಸಂಗತ್‌’ ಮಿಳಿತವಾಗಿದೆ. ತೊದಲ್ನುಡಿಯುತ್ತ ಕೈ ಹಿಡಿದು ಅಡಿಯಿಟ್ಟ ಮಗಳು ಬೆಳೆದು ಗೆಜ್ಜೆಕಟ್ಟಿ ನೃತ್ಯಕ್ಕೆ ಹೆಜ್ಜೆ ಹಾಕಲು ಅಣಿಯಾಗುವುದಕ್ಕೆ ಸಾಕ್ಷಿಯಾದ, ಬಾಲಪಾಠ ಹೇಳಿಕೊಟ್ಟ ಅನೇಕ ವಿದುಷಿಯರಿಗೆ ಈಗ ಅದೇ ಮಗಳು ಹೊಸ ವಿಷಯಗಳನ್ನು ಕಲಿಸಿಕೊಡುವ ಗುರು. ಮಾನವ ಸಂಬಂಧಗಳಿಗೆ ಸಂಬಂಧಿಸಿದ ಪರಿಕಲ್ಪನೆಯ ನೃತ್ಯಸಂಯೋಜನೆಗಳಿಗೂ ಕೆಲವೊಮ್ಮೆ ಹೊಸಶೈಲಿಯ ಆವಿರ್ಭಾವಕ್ಕೂ ಈ ಸ್ಥಿತ್ಯಂತರ ಕಾರಣವಾಗಿದೆ.

ಅರೆಕಲ್ಲು ಮನೆಯಲ್ಲಿ ತಾಯಿ ಮತ್ತು ಅಜ್ಜಿಯ ಸಂಗೀತಾಸಕ್ತಿ ನೋಡುತ್ತ ಬೆಳೆದ ಮೈಸೂರಿನ ವಿದುಷಿ ಕೃಪಾ ಫಡ್ಕೆ ನೃತ್ಯ ಗುರುವಾಗಿ, ಸಂಯೋಜಕಿಯಾಗಿ ಹೆಸರು ಮಾಡಿದವರು. ಈಗ ಮಗಳು ಪೂಜಾ ಸುಗಮ್ ಜೊತೆ ಹೊಸ ‘ಟ್ರೆಂಡ್‌’ಗೆ ಅವರು ಒಗ್ಗಿಕೊಂಡಿದ್ದಾರೆ. ಇವರಿಬ್ಬರದು ತಾಯಿ–ಮಗಳ ಸಂಬಂಧ ಮಾತ್ರವಲ್ಲ. ಒಬ್ಬರಿಗೊಬ್ಬರು ಗುರುವೂ ಆಗಿದ್ದಾರೆ, ಎಂ–ಡಾನ್ಸ್‌ ತರಗತಿಯಲ್ಲಿ ‘ಕ್ಲಾಸ್‌ಮೇಟ್ಸ್‌’ ಕೂಡ ಆಗಿದ್ದರು.

ADVERTISEMENT

‘ವಿದ್ವತ್‌ ವರೆಗೆ ಪೂಜಾಗೆ ನಾನೇ ಪಾಠ ಮಾಡಿದ್ದು. ನನ್ನದು ಅಭಿನಯ ಪ್ರಧಾನವಾದ ಪಂದನಲ್ಲೂರು ಶೈಲಿ. ಮಗಳು ಸಂಗೀತವನ್ನೂ ಕಲಿತ ಕಾರಣ ‘ಲಯಕಾರಿ’ಯಲ್ಲಿ ಪಳಗಿದ್ದಾಳೆ. ಚೆನ್ನೈ ಶೈಲಿಯಲ್ಲಿ ನಾಟ್ಯದ ವೇಗ ನಡೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಕೆಲವು ಕಡೆಗಳಲ್ಲಿ ಜೊತೆಯಾಗಿ ಕಾರ್ಯಕ್ರಮ ನೀಡಿದ್ದು, ನೃತ್ಯ ನಾಟಕಗಳಲ್ಲೂ ಭಾಗವಹಿಸಿದ್ದೇವೆ. ಗುರು–ಶಿಷ್ಯ ನೃತ್ಯೋಲ್ಲಾಸ ಎಂಬ ಹೆಸರಿನಲ್ಲಿ ಯುಗಳ ನೃತ್ಯವನ್ನೂ ಮಾಡಿದ್ದೇವೆ. ನೃತ್ಯಗಿರಿ ಸಂಸ್ಥೆಯಲ್ಲಿ ಈಗ ಮಗಳೇ ನಟುವಾಂಗ’ ಎಂದು ಹೇಳಿದರು ಸಂಸ್ಥೆಯ ಸ್ಥಾಪಕಿ ಕೃಪಾ ಫಡ್ಕೆ.

ಮಂಗಳೂರಿನ ‘ನೃತ್ಯ ಸುಧಾ’ದ ವಿದುಷಿ ಸೌಮ್ಯಾ ಸುಧೀಂದ್ರ ಮತ್ತು ಮಗಳು ಶ್ರೀಯಾ ರಾವ್ ನಡುವಿನ ನೃತ್ಯಬಂಧದಲ್ಲಿ ಪುರಾಣ ಮತ್ತು ಇತಿಹಾಸದ ಮಹಿಳಾ ಪಾತ್ರಗಳನ್ನು ಪರಿಚಯಿಸುವ ‘ಮಾತೃಜ’ ಎಂಬ ರೂಪಕವೇ ಸಿದ್ಧವಾಗಿದೆ.

‘ನಾನು ಬೆಳೆದ ಯಕ್ಷಗಾನದ ವಾತಾವರಣ ಮಗಳ ಮೇಲೆಯೂ ಪ್ರಭಾವ ಬೀರಿತು. ಹಸ್ತಗಳನ್ನು ಬೇಗನೇ ಕಲಿತಳು. ನನ್ನ ಜೊತೆ ಕುಳಿತು ನಾಟ್ಯಶಾಸ್ತ್ರದ ಶ್ಲೋಕಗಳನ್ನು ಕಂಠಪಾಠ ಮಾಡಿದಳು. ಮೃದಂಗ ತರಗತಿಗೆ ಸೇರಿದ್ದರಿಂದ ನೃತ್ಯಕ್ಕೆ ಬೇಕಾದ ಲಯಗಳು, ಕೊನ್ನಕ್ಕೋಲ್‌ ಮುಂತಾದವುಗಳನ್ನು ಕರಗತ ಮಾಡಿಕೊಂಡಳು. ಇದೆಲ್ಲದರ ಪರಿಣಾಮವಾಗಿ ನನಗಿಂತ ಉತ್ತಮ ನಟುವಾಂಗ ಆಗಲು ಆಕೆಗೆ ಸಾಧ್ಯವಾಯಿತು. ‘ಮಾತೃಜ’ದಲ್ಲಿ ಬರುವ ‘ನೂಲಿನಂತೆ ಸೀರೆ, ಹೆತ್ತಬ್ಬೆಯ ನೆರಳಿನಂತೆ ತನಯೆ’ ಎಂಬ ಸಾಲನ್ನು ಮೀರಿ ಆಕೆ ಬೆಳೆದಿದ್ದಾಳೆ. ಬಪ್ಪನಾಡು ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನನಗೇ ನಟುವಾಂಗ ಆಗಿದ್ದಾಳೆ’ ಎನ್ನುತ್ತಾರೆ ಸೌಮ್ಯಾ.

ಪೂಜಾ ಮತ್ತು ಕೃಪಾ ಫಡ್ಕೆ

‘ನನ್ನಿಂದ ನಾಟ್ಯದ ಆರಂಭಿಕ ಪಾಠ, ಗುರುಭಕ್ತಿಯನ್ನು ಆಕೆ ಕಲಿತಿರಬಹುದು. ಆದರೆ ಇತ್ತೀಚೆಗೆ ಆಕೆಯಿಂದ ನಾನು ಕಲಿತದ್ದೇ ಹೆಚ್ಚು. ಕೆಲವೊಂದು ಜೀವನ ಸಿದ್ಧಾಂತಗಳನ್ನು ನನಗೆ ಕಲಿಸಿದವಳು. ಮೂಗೂರು ಮತ್ತು ಪಂದನಲ್ಲೂರು ಶೈಲಿಯಲ್ಲಿ ಕಲಿತ ನಾನು ಈಗ ಮಗಳ ಜೊತೆ ಸೇರಿಕೊಂಡು ಶಾಸ್ತ್ರದ ಚೌಕಟ್ಟಿನಲ್ಲಿ ನನ್ನದೇ ಶೈಲಿಯೊಂದನ್ನು ರೂಢಿಸಿಕೊಂಡಿದ್ದೇನೆ’ ಎನ್ನುತ್ತಾರೆ.

ಮಂಗಳೂರಿನ ‘ನೃತ್ಯ ಭಾರತಿ’ಯ ಗೀತಾ ಸರಳಾಯ ಮತ್ತು ರಶ್ಮಿ ಚಿದಾನಂದ, ಮೂರೂವರೆ ದಶಕಗಳಿಂದ ಜೊತೆಯಾಗಿ ನೃತ್ಯದ ಹೆಜ್ಜೆ ಹಾಕುತ್ತಿದ್ದಾರೆ. ತಾಯಿಯ ಪರಂಪರಾಗತ ಶೈಲಿಗೆ ಸಾಣೆ ಹಿಡಿದು ಪ್ರಸ್ತುತ ಸಂದರ್ಭಕ್ಕೆ ಒಗ್ಗಿಸಿಕೊಳ್ಳುವುದರಲ್ಲಿ ರಶ್ಮಿಗೆ ವಿಶೇಷ ಕಾಳಜಿ. ತಾಯಿಯ ಸೋಲೊ ಪ್ರದರ್ಶನಗಳಿಗೆ ಗುರುವಾಗಿಯೂ ರಶ್ಮಿ ನೆರವಾಗುತ್ತಿದ್ದಾರೆ. ಒಬ್ಬರಿಗೊಬ್ಬರು ನಟುವಾಂಗ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ.

ರಾಮ–ಸೀತೆ, ಶಿವ–ಪಾರ್ವತಿಯಾಗಿ ‘ನೃತ್ಯ ಯುಗಳ’ ಪ್ರದರ್ಶಿಸುವ ಈ ಜೋಡಿ ‘ಕೃಷ್ಣಾಂತರಂಗ’ದಲ್ಲಿ ಬಾಲಕೃಷ್ಣನಿಂದ ಗೀತೋಪದೇಶದ ವರೆಗಿನ ಪ್ರಸಂಗವನ್ನೂ ಆಡಿತೋರಿಸುತ್ತಿದ್ದಾರೆ. ದುಬೈ, ಬಹರೇನ್‌, ಮಸ್ಕತ್‌ ವರೆಗೆ ಸಾಗಿರುವ ಈ ಸಂಯೋಜಕಿಯರು ಮಸ್ಕತ್‌ನಲ್ಲಿ ಶಾಖೆಯನ್ನೂ ತೆರೆದಿದ್ದಾರೆ.

ವಿದ್ಯಾಶ್ರೀ ಮತ್ತು ಪೂರ್ವಿ ಜೊತೆಯಾಗಿಯೇ ನೃತ್ಯ ಪ್ರದರ್ಶನ ನೀಡುವುದು ರೂಢಿ. ತಂಡದ ಕಾರ್ಯಕ್ರಮ ಇದ್ದಾಗಲೂ ಅದರಲ್ಲಿ ತಾಯಿ–ಮಗಳ ‘ಯುಗಳ ನೃತ್ಯ’ವೊಂದು ಇರುವುದು ಕಡ್ಡಾಯ. ‘ಇಬ್ಬರ ವಯಸ್ಸಿನ ನಡುವೆ ಇರುವ ಒಂದು ಪೀಳಿಗೆಯ ಅಂತರವನ್ನು ಗಮನದಲ್ಲಿರಿಸಿ ಶಕ್ತಿ ಮತ್ತು ದೌರ್ಬಲ್ಯವನ್ನು ಅಳೆದು ನೃತ್ಯ ಸಂಯೋಜನೆ ಮಾಡುತ್ತೇವೆ. ಆಕೆಗೆ ನಾಟ್ಯ ಕಲಿಸಿದ್ದು ನಾನಾದರೂ ಈಗ ಚೆನ್ನಾಗಿ ನೃತ್ಯ ಕಲಿಸಲು ಆಕೆಯೇ ನನಗೆ ಗುರು’ ಎಂದು ವಿದ್ಯಾಶ್ರೀ ಹೇಳುತ್ತಾರೆ.

‘ಹೊಸ ತಲೆಮಾರಿನವರಿಗೆ ಇರುವಷ್ಟು ದೇಹ ಕಸುವು ನಮ್ಮಲ್ಲಿ ಇರುವುದಿಲ್ಲ. ನಮ್ಮಲ್ಲಿ ಇರುವ ಸಾತ್ವಿಕ ಅಭಿನಯದ ಬಲ ಅವರಲ್ಲಿ ಇರುವುದಿಲ್ಲ. ಆದ್ದರಿಂದ ಬೇರು ಮತ್ತು ಚಿಗುರು ಸೇರುವಂತೆ ತಾಯಿ–ಮಗಳ ಕೂಡುವಿಕೆಯಿಂದ ಒಳ್ಳೆಯ ಪರಿಕಲ್ಪನೆ ಮೂಡಲು, ಮನೋಧರ್ಮ ಗಟ್ಟಿಯಾಗಲು ಸಾಧ್ಯ. ಮೈಸೂರು ಮತ್ತು ಪಂದನಲ್ಲೂರು ಶೈಲಿಯಲ್ಲಿ ಕಲಿತು ಕಲಾಕ್ಷೇತ್ರ ಶೈಲಿಯನ್ನು ರೂಢಿಸಿಕೊಂಡ ನಾನು ಈಗ ನಮ್ಮದೇ ಶೈಲಿಯನ್ನು ಬೆಳೆಸಿಕೊಂಡಿದ್ದೇನೆ. ಹಾಗೆ ನೋಡಿದರೆ ಪ್ರತಿಯೊಬ್ಬ ಕಲಾವಿದರಿಗೂ ಅವರದೇ ಆದ ಶೈಲಿ ಇದೆ’ ಎನ್ನುವುದು ವಿದ್ಯಾಶ್ರೀ ಅವರ ಅಭಿಪ್ರಾಯ.

ಬದಲಾದ ಕಾಲಘಟ್ಟದಲ್ಲಿ ಇದೆಲ್ಲವೂ ಸಹಜ ಮತ್ತು ಸುಂದರ. ಇಂತಹ ಪ್ರಯೋಗಗಳಿಂದ ಪ್ರೇಕ್ಷಕರಿಗೇ ಹೆಚ್ಚು ಲಾಭ. ಆದ್ದರಿಂದ ಈ ರೀತಿಯ ಪ್ರಯೋಗಗಳು ಇನ್ನಷ್ಟು ಹೆಚ್ಚಾಗಲಿ. ⇒v

ವಿದ್ಯಾಶ್ರೀ ಮತ್ತು ಪೂರ್ವಿ

ತಾಯಿ ಮಕ್ಕಳು ಮತ್ತು ಮೊಮ್ಮಕ್ಕಳು

ಪುತ್ತೂರಿನ ವಿಶ್ವಕಲಾನಿಕೇತನ ಸಂಸ್ಥೆಯಲ್ಲಿ ತಾಯಿ ಮಕ್ಕಳು ಮತ್ತು ಮೊಮ್ಮಕ್ಕಳ ಅಪೂರ್ವ ನೃತ್ಯ ಸಂಗಮ. ನೃತ್ಯ ಗುರು ದಂಪತಿ ಕುದ್ಕಾಡಿ ವಿಶ್ವನಾಥ ರೈ ಮತ್ತು ನಯನಾ ರೈ ಅವರ ಮಕ್ಕಳು ಸ್ವಸ್ತಿಕಾ ಮತ್ತು ಆಸ್ತಿಕ ಅವರು ತಂದೆ–ತಾಯಿಯ ಜೊತೆಯಲ್ಲೇ ನೃತ್ಯದ ಅಡವುಗಳನ್ನು ಕಲಿತವರು. ನಂತರ ಸ್ವಸ್ತಿಕಾ ಅವರ ಪುತ್ರಿ ಆಂಗಿಕಾ ಕೂಡ ಇದೇ ‘ಕಲಾಶಾಲೆ’ಯಲ್ಲಿ ಕಲಿತರು. ಎಲ್ಲರೂ ಜೊತೆಯಾಗಿ ಕಾರ್ಯಕ್ರಮ ನೀಡಿದ್ದೂ ಇದೆ. ‘ನಾಟ್ಯಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ನಾವು ಯಾರೂ ಸಿದ್ಧಶೈಲಿಗೆ ಅಂಟಿಕೊಂಡಿಲ್ಲ. ಉತ್ತಮವಾದುದೆಲ್ಲವನ್ನೂ ಎಲ್ಲ ಕಡೆಯಿಂದ ಸ್ವೀಕರಿಸಿ ಪರಸ್ಪರ ಗುರು–ಶಿಷ್ಯರಾಗಿ ಬೆಳೆಯುತ್ತಿದ್ದೇವೆ. ಕಲಿಕೆಗೆ ತಲೆಮಾರಿನ ಅಂತರ ಅಡ್ಡಿಯಾಗುವುದಿಲ್ಲ. ಆದ್ದರಿಂದ ಮೊಮ್ಮಗಳಿಂದಲೂ ನಾನು ಹಲವು ಪಾಠಗಳನ್ನು ಕಲಿತಿದ್ದೇನೆ’ ಎಂದು ನಯನಾ ಮನದಾಳ ಬಿಚ್ಚಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.