ADVERTISEMENT

ಹುಬ್ಬಳ್ಳಿಯಲ್ಲಿ ರಾಗರಂಜನೆ: ಸಂಗೀತದ ರಸದೌತಣ

ಎರಡು ದಿನಗಳ ಭೀಮಪಲಾಸ ಸಂಗೀತೋತ್ಸವಕ್ಕೆ ಚಾಲನೆ, ಸಂಗೀತ ಪ್ರೇಮಿಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಮೇ 2022, 10:21 IST
Last Updated 15 ಮೇ 2022, 10:21 IST
ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್‌ನಲ್ಲಿ ಶನಿವಾರ ನಡೆದ ಭೀಮಪಲಾಸ ಕಾರ್ಯಕ್ರಮದಲ್ಲಿ ಗಾಯಕ ವಿನಾಯಕ ಹೆಗಡೆ ಹಿಂದೂಸ್ತಾನಿ ಸಂಗೀತ ಪ್ರಸ್ತುತ ಪಡಿಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್‌ನಲ್ಲಿ ಶನಿವಾರ ನಡೆದ ಭೀಮಪಲಾಸ ಕಾರ್ಯಕ್ರಮದಲ್ಲಿ ಗಾಯಕ ವಿನಾಯಕ ಹೆಗಡೆ ಹಿಂದೂಸ್ತಾನಿ ಸಂಗೀತ ಪ್ರಸ್ತುತ ಪಡಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಇಳಿ ಸಂಜೆಯ ಹೊತ್ತಿನಲ್ಲಿ ಮಧುವಂತಿ ರಾಗರಂಜನೆ ವಾತಾವರಣದಲ್ಲಿ ನಾದಬ್ರಹ್ಮನನ್ನು ಆಹ್ವಾನಿಸಿದಂತಾಗಿತ್ತು. ಹಿಂದೂಸ್ತಾನಿ ಗಾಯಕ ವಿನಾಯಕ ಹೆಗಡೆ ಮುತ್ಮುರುಡು ಅವರ ಗಾಯನದ ಮೋಡಿ ನೆರದಿದ್ದವರನ್ನು ಸಂಗೀತ ಲೋಕಕ್ಕೆ ಕರೆದುಕೊಂಡು ಹೋಗಿತ್ತು.

ಪಂ. ಭೀಮಸೇನ ಜೋಶಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಯ ಸಹಯೋಗದಲ್ಲಿ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿಶನಿವಾರ ಭೀಮಪಲಾಸ ಸಂಗೀತೋತ್ಸವಕ್ಕೆ ಚಾಲನೆ ದೊರೆಯಿತು.

ಕಲಾವಿದರು ನಿರಂತರ ಒಂದೂವರೆ ಗಂಟೆ ಕೇಳುಗರಿಗೆ ಸಂಗೀತದ ರಸದೌತಣ ಉಣ ಬಡಿಸಿದರು. ಸಂಗೀತಾಸಕ್ತರ ಶಹಬ್ಬಾಸ್‌ಗಿರಿಗಳೊಂದಿಗೆ ಆಗಾಗ ನೀರವ ಮೌನಕ್ಕೆ ಸೆಳೆದು ತರುತ್ತಿದ್ದರು. ಮಂತ್ರಮುಗ್ಧರಾದ ಶ್ರೋತೃವರ್ಗಕ್ಕೆ ತಮ್ಮದೇ ಚಪ್ಪಾಳೆಯಿಂದ ಎಚ್ಚರವಾ
ಗುತ್ತಿತ್ತು. ಪಂ. ರಘುನಾಥ ನಾಕೋಡ ಅವರ ತಬಲಾ ಸಾಥ್ ತಲೆದೂಗುವಂತಿತ್ತು. ಸತೀಶ ಭಟ್ ಹೆಗ್ಗಾರ ಹಾರ್ಮೋನಿಯಂ ಸಾಥ್‌ ನೀಡಿದರು.

ADVERTISEMENT

ಕೋಲ್ಕತ್ತದ ಪಂ.ಪುರಬಯನ್‌ ಚಟರ್ಜಿ ಅವರ ಸೀತಾರ ಹಾಗೂ ಚೆನ್ನೈನ ವಿದ್ವಾನ್‌ ಯು. ರಾಜೇಶ ಅವರ ಮಾಂಡೋಲಿನ್ ಜುಗಲ್‌ಬಂದಿಯಂತೂ ನೆರೆದವರ ಮನಗೆಲ್ಲುವಲ್ಲಿ ಸಫಲವಾಯಿತು. ಹಂಸಧ್ವನಿ ರಾಗದ ನೀನಾದ ಬಹುಹೊತ್ತಿನವರೆಗೂ ಅನುರಣಿಸುತ್ತಿತ್ತು. ಅವರಿಗೆ ದೇಬ್ಜಿತ್‌ ಪಾಟಿಟುಂಡಿ ತಬಲಾ ಸಾಥ್‌ ನೀಡಿದರು.

ಪಂ. ಬಾಲಚಂದ್ರ ನಾಕೋಡ, ಮುರಳೀಧರ ಮಳಗಿ, ರವೀಂದ್ರ ಯಾವಗಲ್‌, ಗೋವಿಂದ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.