
ಸಿ.ಆರ್. ಹಿಮಾಂಶು. ಚಿತ್ರ/ಅನೂಪ್ ರಾಘ. ಟಿ.
ಗಣೇಶ ಚತುರ್ಥಿ ಬಂತೆಂದರೆ ಮೈಸೂರು ನಗರದ ವಿವಿ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ಹಬ್ಬದ ಸಂಭ್ರಮಕ್ಕೆ ಮತ್ತೊಂದು ರಾಗ ಸೇರುತ್ತದೆ. ಬೀದಿಯ ಮಧ್ಯೆ ಗಣಪನ ಮೂರ್ತಿ. ಅದರ ಎದುರು ತಾತ್ಕಾಲಿಕ ವೇದಿಕೆ. ಹತ್ತು ದಿನ ನಿರಂತರ ಸಂಗೀತಾರಾಧನೆ. ಇದು ಕೇವಲ ಹಬ್ಬವಲ್ಲ; ಇದು ಒಂದು ಪರಂಪರೆ. ಒಂದು ಬೀದಿಯ ಸಂಗೀತೋತ್ಸವಕ್ಕೆ ರಾಷ್ಟ್ರಮಟ್ಟದ ಘನತೆ ತಂದುಕೊಟ್ಟವರಲ್ಲಿ ಪ್ರಮುಖರು ಸಿ.ಆರ್. ಹಿಮಾಂಶು. ಇವರು ಸಂಗೀತ ಕಾರ್ಯಕ್ರಮಗಳ ಸಂಘಟನೆಗೇ ಬದುಕನ್ನು ಮುಡಿಪಿಟ್ಟವರು. ಚೆನ್ನೈನಲ್ಲಿರುವ ‘ಸಂಗೀತ ಕಲಾನಿಧಿ’, ಮೃದಂಗ ವಿದ್ವಾನ್ ತಿರುವರೂರ್ ಭಕ್ತವತ್ಸಲಂ ಅವರ ‘ಲಯ ಮಧುರ ಸಂಗೀತ ಸಂಸ್ಥೆ’ಯು ಇತ್ತೀಚೆಗೆ ಅವರಿಗೆ ‘ಮಧುರ ಕಲಾಸೇವಕ’ ಪುರಸ್ಕಾರ ನೀಡಿ ಸನ್ಮಾನಿಸಿತು.
ವಿವಿ ಮೊಹಲ್ಲಾದ 8ನೇ ಕ್ರಾಸ್ ಬಗ್ಗೆ ಹೇಳಿ...
ಮೈಸೂರಿನಲ್ಲಿ ಅಷ್ಟೇ ಏಕೆ, ಹಲವು ರಾಜ್ಯಗಳಲ್ಲಿ ಮೈಸೂರು ವಿವಿ ಮೊಹಲ್ಲಾ, 8ನೇ ಕ್ರಾಸ್ ಎಂದರೆ ಎಸ್‌ಪಿವಿಜಿಎಂಸಿ ಟ್ರಸ್ಟ್, ಸಂಗೀತೋತ್ಸವ ಎಂದೇ ಪ್ರಸಿದ್ಧಿ. ಇದು ಗಣೇಶನ ಹಬ್ಬ ಹಾಗೂ ಸಂಗೀತೋತ್ಸವಕ್ಕೇ ಒಂದೇ ವೇದಿಕೆ. ಇದು ನಮ್ಮ ಸಂಗೀತೋತ್ಸವ ನಡೆಯುವ ಒಂದು ಬೀದಿಯಷ್ಟೇ.
ಗಣೇಶ ಹಬ್ಬದ ಸಂದರ್ಭದಲ್ಲಿ ಸಂಗೀತೋತ್ಸವ ಆರಂಭವಾಗಿದ್ದು ಹೇಗೆ?
1962ರಿಂದಲೇ ಚಿಕ್ಕದಾಗಿ ಉತ್ಸವ ನಡೆಯುತ್ತಿತ್ತು. ಸೌಂದರ್ಯಮ್ಮ ವೆಂಕಟೇಶನ್, ರಘೋತ್ತಮದಾಸ್, ಮಹಾಲಿಂಗು, ನಂಜಪ್ಪ, ನಾಗಣ್ಣ, ತುಳಸಿದಾಸ್ ದಾಸಪ್ಪ, ಅವರ ಪತ್ನಿ ಸರೋಜ ಎಲ್ಲರ ಆಸಕ್ತಿಯೇ ಇದಕ್ಕೆ ಕಾರಣ. ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಸಂಘದ ಹೆಸರಿನಲ್ಲಿ ಉತ್ಸವ ಶುರುವಾಯಿತು. ಮೊದಲಿಗೆ ಸ್ಥಳೀಯ ಕಲಾವಿದರನ್ನಷ್ಟೇ ಆಹ್ವಾನಿಸುತ್ತಿದ್ದೆವು. ಆಮೇಲೆ ಹೊರಗಿನಿಂದ ಒಬ್ಬಿಬ್ಬರನ್ನು ಕರೆಯಲಾರಂಭಿಸಿದೆವು.
ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಸಂಘವು ಟ್ರಸ್ಟ್ ಆಗಿದ್ದು?
1985ರಲ್ಲಿ ಸಂಘವು ಟ್ರಸ್ಟ್ ಆಯಿತು. ಅಂದಿನಿಂದ ಸಂಘವು, ಶ್ರೀ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್ ಆಯಿತು. ಧಾರ್ಮಿಕ ಟ್ರಸ್ಟ್ ಎಂಬ ಕಾರಣಕ್ಕೆ (80ಜಿ) ತೆರಿಗೆ ವಿನಾಯಿತಿ ರದ್ದಾಗಿತ್ತು. ಮತ್ತೆ ಅದನ್ನು ಪಡೆಯಲು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡೆವು. ನಂತರ, ಎಸ್‌ಪಿವಿಜಿಎಂಸಿ ಟ್ರಸ್ಟ್ ಎಂದು ನೋಂದಾಯಿಸಲಾಯಿತು. ಬಳಿಕ ಉತ್ಸವದ ಸ್ಥಳದಲ್ಲಿ ಶಾಶ್ವತ ವೇದಿಕೆಯನ್ನು ನಿರ್ಮಿಸಲಾಯಿತು. ಆದರೆ ಕಟ್ಟಡವಿಲ್ಲ.
ನಿಮ್ಮೊಳಗೆ ಸಂಗೀತದ ಅಭಿರುಚಿ ಮೂಡಿದ್ದು ಹೇಗೆ?
ನಾನು ನಾಲ್ಕೈದು ವರ್ಷದ ಬಾಲಕನಾಗಿದ್ದಾಗಿನಿಂದಲೇ ಸಂಗೀತ ಕೇಳುತ್ತಿದ್ದೆ. ನನ್ನ ತಾಯಿ ರಾಜಮ್ಮನವರು ಪಿಟೀಲು ಚೌಡಯ್ಯನವರ ತಂಗಿ ಚಂದ್ರಮುಖಿಯವರ ಮಗಳು. ಬಿಡಾರಂ ಕೃಷ್ಣಪ್ಪನವರ ಶಿಷ್ಯೆ. ಚೌಡಯ್ಯನವರೊಂದಿಗೆ ನನ್ನ ಅಜ್ಜಿ ಸಂಗೀತ ಕಛೇರಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರಿಗೆ ಹರಿಕಥೆಯೂ ಗೊತ್ತಿತ್ತು. ಮನೆಯಲ್ಲಿ ಸಂಗೀತದ ವಾತಾವರಣವಿರುತ್ತಿತ್ತು. ಕರ್ನಾಟಕ ಸಂಗೀತ ಆಧುನಿಕ ಕಛೇರಿ ಪದ್ಧತಿಯ ಪಿತಾಮಹರೆನಿಸಿದ್ದ ಅರಿಯಕುಡಿ ರಾಮಾನುಜ ಅಯ್ಯಂಗಾರ್ ಅವರ ಸಂಗೀತವನ್ನು ಬಾಲಕನಾಗಿದ್ದಾಗಲೇ ದಸರಾ ಸಂದರ್ಭದಲ್ಲಿ ಕೇಳಿದ್ದೆ. ರಾಗಗಳು ತಿಳಿದಿವೆ. ಆದರೆ ನಾನು ಗಾಯಕನಲ್ಲ, ವಾದಕನೂ ಅಲ್ಲ. ಸಂಗೀತ ಪ್ರೇಮಿ, ಸಂಗೀತದ ಸಾಮಾನ್ಯ ಪರಿಚಾರಕ.
ಆರಂಭದಿಂದಲೂ ಶಾಸ್ತ್ರೀಯ ಸಂಗೀತಕ್ಕಷ್ಟೇ ಆದ್ಯತೆ ನೀಡಲಾಗಿತ್ತೇ?
ಇಲ್ಲ. ಶಾಸ್ತ್ರೀಯ ಸಂಗೀತದ ಜೊತೆಗೆ ಹರಿಕಥೆ, ಭಾವಗೀತೆ, ಭಕ್ತಿಗೀತೆ ಗಾಯನವೂ ನಡೆಯುತ್ತಿತ್ತು. ಮೈಸೂರು ಅನಂತಸ್ವಾಮಿ, ಬಿ.ಕೆ.ಸುಮಿತ್ರಾ ಅವರೂ ಬಂದು ದೇವರನಾಮಗಳನ್ನು ಹಾಡಿದ್ದಾರೆ. ಗಾಯಕ ವಿಜಯಪ್ರಕಾಶ್ ಅವರ ತಾತ ಲಕ್ಷ್ಮಿಪತಿ ಶಾಸ್ತ್ರಿ, ಕೊಣನೂರು ಸೀತಾರಾಮಶಾಸ್ತ್ರಿ, ಭದ್ರಗಿರಿ ಅಚ್ಯುತದಾಸರು ಹರಿಕಥೆಗಳನ್ನು ಮಾಡಿದ್ದಾರೆ. ಇದೆಲ್ಲ ಕೆಲವು ವರ್ಷ ನಡೆಯಿತು.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಮುನಿಕೃಷ್ಣ ಅವರು ಒಮ್ಮೆ ಉತ್ಸವದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಆದ್ಯತೆ ನೀಡೋಣ ಎಂದು ಪ್ರತಿಪಾದಿಸಿದರು. ಅಂದಿನಿಂದ ಶಾಸ್ತ್ರೀಯ ಸಂಗೀತವೇ ಪ್ರಧಾನವಾಯಿತು. ಸುಗಮ ಸಂಗೀತ ಕ್ಷೇತ್ರದವರು ಬಂದರೂ ಶಾಸ್ತ್ರೀಯ ಗಾಯನವನ್ನೇ ಪ್ರಸ್ತುತಪಡಿಸುತ್ತಾರೆ. ಅದೇ ವಿಶೇಷ. ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜರೆಲ್ಲರೂ ಇಲ್ಲಿಗೆ ಬಂದಿದ್ದಾರೆ. ಬರುತ್ತಿದ್ದಾರೆ.
ಕಲಾವಿದರ ಆಯ್ಕೆ, ಅವರನ್ನು ಆಹ್ವಾನಿಸುವ ಬಗೆ ಹೇಗಿರುತ್ತಿತ್ತು. ಹೇಗೆ ಸ್ಪಂದಿಸುತ್ತಿದ್ದರು?
ಆಗೆಲ್ಲಾ ದೊಡ್ಡ ಕಲಾವಿದರು ನಮ್ಮ ಕಾರ್ಯಕ್ರಮಕ್ಕೆ ಮೂರನೇ ದರ್ಜೆ ರೈಲಿನಲ್ಲಿ ಬಂದಿದ್ದಾರೆ. ಆಟೊರಿಕ್ಷಾ, ಲಾರಿಯಲ್ಲಿ ಬಂದು ಕಾರ್ಯಕ್ರಮ ಕೊಟ್ಟಿದ್ದಾರೆ. ಮೊದಲಿಗೆ ಪತ್ರ ವ್ಯವಹಾರ ಮಾಡುತ್ತಿದ್ದೆವು. ಪತ್ರ ಬರೆದು ಕೆಲವು ದಿನಗಳು ಕಾಯಬೇಕಾಗಿತ್ತು. ಟ್ರಂಕಾಲ್ ವ್ಯವಸ್ಥೆ ಬಂದ ಮೇಲೆ ಸ್ವಲ್ಪ ಸುಧಾರಿಸಿತು. ಈಗ ಒಂದು ಫೋನ್ ಕಾಲ್ ಸಾಕು. ಆದರೆ ಕಲಾವಿದರನ್ನು ಬರಮಾಡಿಕೊಳ್ಳುವುದು, ಅವರ ವಾಸ್ತವ್ಯವೆಲ್ಲವನ್ನೂ ನಾನೇ ಖುದ್ದಾಗಿ ನೋಡಿಕೊಳ್ಳುತ್ತೇನೆ. ಭಾಷೆ, ಜಾತಿ, ಧರ್ಮ, ದೊಡ್ಡ ಕಲಾವಿದರು, ಚಿಕ್ಕ ಕಲಾವಿದರು, ಸ್ಥಳೀಯರು, ಹೊರಗಿನವರು ಎಂಬ ತಾರತಮ್ಯವಿಲ್ಲ. ನಮಗೆ ಉತ್ತಮ ಸಂಗೀತವಷ್ಟೇ ಮುಖ್ಯ.
ಉತ್ಸವಕ್ಕೆ ಯಾವುದಾದರೂ ದೊಡ್ಡ ಸವಾಲು ಎದುರಾಗಿತ್ತೇ?
ಟಿ. ವೆಂಕಟಸ್ವಾಮಿ ಆಯೋಗದ ವರದಿ ಹಿನ್ನೆಲೆಯಲ್ಲಿ ಪ್ರತಿಭಟನೆ, ರಸ್ತೆ, ರೈಲು ತಡೆ ನಡೆಯುತ್ತಿದ್ದಾಗಲೇ ನಮ್ಮ ಟ್ರಸ್ಟ್‌ನ ಬೆಳ್ಳಿ ಹಬ್ಬವಿತ್ತು. ಆಗ ಚೆನ್ನೈ ಮತ್ತು ಬೆಂಗಳೂರಿನ ಕಲಾವಿದರು ಸಾಹಸ ಮಾಡಿ ಮೈಸೂರಿಗೆ ಬಂದಿದ್ದರು. ವಿದುಷಿ ಟಿ.ರುಕ್ಮಿಣಿ ಲಾರಿಯಲ್ಲಿ ಬಂದಿದ್ದರು. ಖಂಜಿರ ವಾದಕ ಭೀಮಾಚಾರ್ ಬೆಂಗಳೂರಿನಿಂದ ಟಿವಿಎಸ್ ಮೊಪೆಡ್‌ನಲ್ಲೇ ಬಂದಿದ್ದರು.
ಸಂಗೀತೋತ್ಸವಕ್ಕೆ ದೇಣಿಗೆ ಸಂಗ್ರಹ ಹೇಗಿರುತ್ತಿತ್ತು?
ಅದೊಂದು ಸಾಹಸ. ನಮ್ಮದು ನಾಲ್ಕಾಣೆ ದೇಣಿಗೆಯಿಂದ ಶುರುವಾದ ಉತ್ಸವ. ಸೈಕಲ್‌ನಲ್ಲಿ ಓಡಾಡಿ ಸಂಗ್ರಹಿಸುತ್ತಿದ್ದೆವು. ಆಗಲೇ 5 ರೂಪಾಯಿಯಿಂದ 200 ರೂಪಾಯಿವರೆಗೂ ಸಂಗ್ರಹಿಸಿದ್ದೇವೆ. ಅದು ಬಹಳ ದೊಡ್ಡ ಮೊತ್ತ. ಪ್ರತಿ ಮನೆಗೂ ಹೋಗುತ್ತಿದ್ದೆವು. ಕೆಲವರು ಕೊಡುತ್ತಿದ್ದರು. ಕೆಲವರು ನಮ್ಮನ್ನು ಭಿಕ್ಷುಕರೆಂಬಂತೆ ನೋಡಿ, ಮುಂದಕ್ಕೆ ಹೋಗಿ ಎನ್ನುತ್ತಿದ್ದರು. ನಾವು ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಪ್ರತಿ ಮನೆಯಲ್ಲೂ ತೆಂಗಿನಮರವಿದ್ದವರು ತಲಾ ಎರಡು ತೆಂಗಿನಗರಿಗಳನ್ನು ಕೊಡುತ್ತಿದ್ದರು. ಬೆಟ್ಟಯ್ಯ ಎಂಬುವವರು ಚಿಕ್ಕಾಸು ಮುಟ್ಟದೆ ಚಪ್ಪರ ಹಾಕುತ್ತಿದ್ದರು. ಜನರಿಗೆ ಟಾರ್ಪಲ್ ಹಾಸಿ ನೆಲದ ಮೇಲೆ ಕೂರಿಸುತ್ತಿದ್ದೆವು. ಎಷ್ಟೋ ವರ್ಷಗಳಾದ ಮೇಲೆ ಕುರ್ಚಿ ಹಾಕಲಾರಂಭಿಸಿದೆವು. ಈಗ ಒಂದೇ ಬಾರಿಗೆ ಮುರ್ನಾಲ್ಕು ಲಕ್ಷ ರೂಪಾಯಿ ಕೊಡುವ ದೊಡ್ಡ ದಾನಿಗಳಿದ್ದಾರೆ.
ಉತ್ಸವವನ್ನು ಬೀದಿಯಿಂದ ಬೇರೆಡೆಗೆ ಸ್ಥಳಾಂತರಿಸುವ ಆಲೋಚನೆ ಇದೆಯೇ?
ಇಲ್ಲ. 8ನೇ ಕ್ರಾಸ್ ಎಂಬುದಕ್ಕೆ ಒಂದು ಮಹತ್ವ ಸಿಕ್ಕಿದೆ. ಆ ಜಾಗದ ವಿಶೇಷ ಅದು. ಸಾಧ್ಯವಿರುವಷ್ಟೂ ದಿನ ಅಲ್ಲಿಯೇ ಉತ್ಸವ ಮಾಡುತ್ತೇವೆ. ಇದುವರೆಗೂ ಯಾರೂ ಆಕ್ಷೇಪಿಸಿಲ್ಲ. ನಗರದ ಪೊಲೀಸ್ ಕಮಿಷನರ್ ಆಗಿದ್ದ ಎಚ್.ಆರ್.ಕಸ್ತೂರಿ ರಂಗನ್ ಅವರು ಒಮ್ಮೆ ಆಕ್ಷೇಪಿಸಿದ್ದರು. ⇒v
ಸುಪ್ರಸಿದ್ಧ ಸಂಗೀತ ವಿದ್ವಾಂಸರಿಗೆ ದುಬಾರಿ ಗೌರವಧನ ನೀಡುವುದು ಕಷ್ಟ ಆಗಿಲ್ಲವೇ?
ನಮ್ಮ ಉತ್ಸವಕ್ಕೆ ಬರುವ ಸಂಗೀತಗಾರರು ಗೌರವಧನದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇಲ್ಲಿಗೆ ಬಂದು ಕಾರ್ಯಕ್ರಮ ಕೊಡುವುದೇ ಭಾಗ್ಯ ಎಂಬ ಭಾವನೆ ಬಹುತೇಕರಲ್ಲಿದೆ. ಯಾರಿಗೂ ನಾವು ಮುಂಗಡ ಹಣ ಕೊಡುವುದಿಲ್ಲ. ಕೆಲವರಂತೂ ಗೌರವಧನವಿಲ್ಲದೆಯೇ ಬಂದು ಸಂಗೀತ ಕಾರ್ಯಕ್ರಮ ಕೊಡುತ್ತಾರೆ. ಸಂಗೀತಗಾರರು ಬೇರೆ ಕಡೆ ಪಡೆಯುವ ಸಂಭಾವನೆಯನ್ನು ಕೇಳಿದರೆ ನಾವು ಉತ್ಸವವನ್ನೇ ಮಾಡಲಾಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.