ADVERTISEMENT

ಮುಸ್ಸಂಜೆಯಲ್ಲಿ ಮಾನ್ಸೂನ್‌ ರಾಗ! ಪುಣೆಯ ಗಾಯಕ ಪಂ. ಸಂಜೀವ್‌ ಅಭ್ಯಂಕರ್‌ ಅವರ ಸಂದರ್ಶನ

ಪಂ. ಸಂಜೀವ್‌ ಅಭ್ಯಂಕರ್‌ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಜುಲೈ 14ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದೆ.

ಪ್ರಜಾವಾಣಿ ವಿಶೇಷ
Published 9 ಜುಲೈ 2023, 0:41 IST
Last Updated 9 ಜುಲೈ 2023, 0:41 IST
ಸಂಜೀವ್ ಅಭಯಂಕರ್
ಸಂಜೀವ್ ಅಭಯಂಕರ್   

ವರ್ಷಧಾರೆ ಪ್ರಕೃತಿಯಲ್ಲಿ ನವೋಲ್ಲಾಸ ತುಂಬಿದರೆ, ಮಳೆರಾಗಗಳ ನಾದಧಾರೆ ಮನಸೋಲ್ಲಾಸವನ್ನು ತುಂಬುತ್ತದೆ. ಇದಕ್ಕಾಗಿ ‘ಬನ್ಯಾನ್‌ ಟ್ರೀ’ ಸಂಸ್ಥೆಯು ‘ವರ್ಷ ಋತು’ ಶೀರ್ಷಿಕೆಯಡಿಯಲ್ಲಿ ಪುಣೆಯ ಗಾಯಕ ಪಂ. ಸಂಜೀವ್‌ ಅಭ್ಯಂಕರ್‌ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಜುಲೈ 14ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದೆ. ಮೇಘರಾಗಗಳ ಕುರಿತು ಅವರೊಡನೆ ನಡೆಸಿದ ಸಂವಾದದ ಸಾರವಿದು.

ಸಂದರ್ಶನ: ಉಮಾ ಅನಂತ್

* ಮೇಘ, ಮಲ್ಹಾರ್‌ ಮುಂತಾದ ಮಳೆರಾಗಗಳು ಕೇಳುಗರಿಗೆ ಕಚಗುಳಿ ಇಡುತ್ತವೆ. ಈ ರಾಗಗಳನ್ನು ಕೇಳುವುದು ಎಂದಿಗೂ ಪರಮಾನಂದವೇ. ‘ಮಾನ್ಸೂನ್ ರಾಗ’ಗಳ ಬಗ್ಗೆ ನಿಮ್ಮ ವ್ಯಾಖ್ಯಾನ ಏನು?

ADVERTISEMENT

ಮಳೆಯ ನೀರ ಧಾರ, ರಾಗದ ರಸಧಾರೆ ಎರಡೂ ಪುಳಕ ಕೊಡುವಂಥದ್ದು. ‘ಮಳೆ ಹನಿಗಳ ಧಾರೆ ಆತ್ಮವನ್ನೂ ದ್ರವಿಸುತ್ತದೆ’ ಎಂಬ ಮಾತಿದೆ. ಮಳೆಗಾಲ ಮತ್ತು ಸಂಗೀತದ ಮಧ್ಯೆ ಎಂದಿಗೂ ಅವಿನಾಭಾವ ಸಂಬಂಧವಿದೆ. ಮೇಘ ರಾಗ ನನಗೆ ಎಂದಿಗೂ ಬಹಳ ಇಷ್ಟ. ಮಲ್ಹಾರ್‌, ಮಿಯಾ ಮಲ್ಹಾರ್‌ ಮುಂತಾದ ರಾಗಗಳು ಹಾಡುಗಾರ–ಕೇಳುಗರ ಮಧ್ಯೆ ಹೊಸ ಮೂಡ್‌ ಅನ್ನು ಕ್ರಿಯೇಟ್‌ ಮಾಡುತ್ತವೆ. ಹೀಗಾಗಿಯೇ ಮಳೆಗೂ ಸಂಗೀತಕ್ಕೂ ಎಲ್ಲಿಲ್ಲದ ಅನುಬಂಧವಿರುವುದು. ಮಳೆ ರಾಗಗಳಲ್ಲಿರುವ ರಸಪೂರ್ಣತೆ ಅತ್ಯಂತ ವಿಶಿಷ್ಟ. ಅಲ್ಲಿ ಲಾಲಿತ್ಯವಿದೆ, ಲಾಸ್ಯವಿದೆ, ಸೊಗಸಿದೆ. ಮಿಂಚು–ಗುಡುಗುಗಳ ಆರ್ಭಟ, ಆಟ ಪ್ರಕೃತಿಯ ಸೊಬಗಾದರೆ, ರಾಗಾಲಾಪ, ಸ್ವರ ತಾನ್‌ಗಳ ಸುರಿಮಳೆ, ಆಕಾರ್‌ ತಾನ್‌ಗಳ ಭೋರ್ಗರೆತ ಎಲ್ಲವೂ ಸಂಗೀತದ ಭಾಗವಾಗಿ ಸಮ್ಮಿಳಿತಗೊಂಡಿವೆ. ಹಿಂದೂಸ್ತಾನಿ ಸಂಗೀತದ ಮೇರುಗಾಯಕ ತಾನ್‌ಸೇನ್ ಹಾಡುತ್ತಿದ್ದ ಮಳೆರಾಗ ‘ಮಲ್ಹಾರ್‌’ ಇದೇ ಕಾರಣಕ್ಕಾಗಿ ಎಂದಿಗೂ ಸುಪ್ರಸಿದ್ಧವಾದುದು.

ಮಳೆರಾಗಗಳಿಗೆ ಎಂದಿಗೂ ನಮ್ಮದು ಮೊದಲ ಆದ್ಯತೆ. ಈ ಮಾನ್ಸೂನ್‌ ರಾಗಗಳು ಭಾವನೆಗಳೊಂದಿಗೆ ಬೆಸೆದುಕೊಂಡಿವೆ ಎನ್ನಬಹುದು. ಈ ರಾಗಗಳು ಶೃಂಗಾರ, ಭಕ್ತಿ, ವಿರಹ, ವೀರರಸ... ಮುಂತಾದ ರಸಗಳನ್ನು ಸೇರಿಸಿಕೊಂಡು ಹೊಸ ನಾದಭಾಷ್ಯ ಬರೆಯುತ್ತವೆ. ‘ಎ ಗ್ಲೂಮಿ ಕೈಂಡ್‌ ಆಫ್‌ ಅಟ್ಮಾಸ್ಮಿಯರ್‌‘ (ನಸುಕು ಕವಿದಂತಹ ವಾತಾವರಣ) ಅಲ್ಲಿ ಸೃಷ್ಟಿಯಾಗುತ್ತದೆ. ಬೆಂಗಳೂರಿನಲ್ಲಿ ನಡೆಯುವ ನನ್ನ ಕಛೇರಿಯಲ್ಲಿ ಮಳೆರಾಗಗಳ ಜೊತೆಗೆ ‘ಮಾನ್ಸೂನ್‌ ಮೂಡ್‌‘ ಕ್ರಿಯೇಟ್‌ ಮಾಡುವ ಇತರ ಸನಿಹದ ರಾಗಗಳನ್ನು ಹಾಡಬೇಕೆಂದಿದ್ದೇನೆ.

* ಪಂ. ಜಸರಾಜ್‌... ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ವಿಶ್ವವಿಖ್ಯಾತರಾದವರು. ಅವರ ಅಚ್ಚುಮೆಚ್ಚಿನ ಶಿಷ್ಯರಾದ ನೀವು ಅವರನ್ನು ಹೇಗೆ ಸ್ಮರಿಸುತ್ತೀರಿ?

ಹಿಂದೂಸ್ತಾನಿ ಸಂಗೀತದ ಮೇವಾತಿ ಘರಾಣೆಯಲ್ಲಿ ಹಾಡುತ್ತಿದ್ದ ನನ್ನ ಗುರು ಪಂ. ಜಸರಾಜ್‌ ಗಾಯನದಲ್ಲಿ ಮೇರು ಶಿಖರ. ಅವರೊಂದು ರೀತಿಯ ಮ್ಯಾಜಿಕಲ್‌ ಮ್ಯಾನ್‌ ಎಂಬುದನ್ನು ನಾನು ಸದಾ ಹೇಳುತ್ತಲೇ ಬಂದಿದ್ದೇನೆ. ಅವರನ್ನು ಕೇಳುಗರು ‘ಪಂ. ರಸರಾಜ್‌’ ಎಂದೇ ಕರೆಯುತ್ತಿದ್ದುದು. ಎಂದರೆ ಅವರ ‘ಗಾಯಕಿ‘ಯಲ್ಲಿ ಹೊಮ್ಮುತ್ತಿದ್ದ ರಾಗರಸ ಕೇಳುಗರನ್ನು ಹಿಡಿದಿಡುತ್ತಿದ್ದ ಪರಿ ಅಚ್ಚರಿ ಮೂಡಿಸುವಷ್ಟು ಆಪ್ಯಾಯಮಾನವಾಗಿರುತ್ತಿತ್ತು. ಅವರ ಗಾಯನದ ಪರಿ ಅನನ್ಯ. ಸಂಗೀತದ ಮೂರೂ ಆಕ್ಟೇವ್‌ಗಳಲ್ಲಿ (ಸ್ಥಾಯಿ) ವಿಶಿಷ್ಟ ಸಂಚಲನ ಮೂಡಿಸುತ್ತಿದ್ದ ನನ್ನ ಗುರೂಜಿ, ಮಂದ್ರ ಹಾಡುವಾಗ ಸಮುದ್ರದ ಆಳಕ್ಕಿಳಿದು ಈಜಾಡಿದಂತಹ ಅನುಭವ, ಮಧ್ಯ ಸ್ಥಾಯಿಯಲ್ಲಿ ಅಯಸ್ಕಾಂತದಂತೆ ಸೆಳೆಯುವ ಇಂಪು ಹಾಗೂ ಧ್ಯಾನಸ್ಥ ಗುಣ ಸೃಷ್ಟಿಸುವ ಚಮತ್ಕಾರ ಮತ್ತು ತಾರಸ್ಥಾಯಿಯಲ್ಲಿ ಹಾಡುತ್ತಿದ್ದಾಗ ಅವರ ಧ್ವನಿ ದೈವತ್ವವನ್ನು ಮೀರಿಸಿದಂತಿದ್ದವು. ಹೀಗೆ ಮೂರೂ ಸ್ಥಾಯಿಗಳಲ್ಲಿ ಲೀಲಾಜಾಲವಾಗಿ ಹಾಡುತ್ತಿದ್ದ ಅವರ ಚಾಕಚಕ್ಯತೆ ಅವಿಸ್ಮರಣೀಯ. ಅವರ ಆಲಾಪ, ರಾಗ ವಿಸ್ತಾರ, ತಾನ್‌ಗಳ ಪ್ರಸ್ತುತಿಯಲ್ಲಿ ಪರಿಪೂರ್ಣತೆ ಎದ್ದುಕಾಣುತ್ತಿತ್ತು. ಅವರು ಹಾಕಿಕೊಟ್ಟ ಸಂಗೀತದ ಮೆಟ್ಟಿಲುಗಳೇ ನಮಗೆಂದಿಗೂ ದಾರಿದೀಪ.

* ಮೇವಾತಿ ಘರಾಣೆಯಲ್ಲಿ ಸಂಗೀತದ ಅದ್ಭುತ ರಸ ಹೊರಹೊಮ್ಮುತ್ತದೆ. ನಿಮ್ಮ ಈ ‘ಗಾಯಕಿ’ ಬಗ್ಗೆ ಹೇಳುವುದಾದರೆ..?

ನನ್ನ ಗುರು ಪಂ. ಜಸರಾಜ್‌, ತಾಯಿ ಶೋಭಾ ಅಭ್ಯಂಕರ್‌ ಮೇವಾತಿ ಘರಾಣೆಯಲ್ಲೇ ಹಾಡುತ್ತಿದ್ದುದು. ಇದರಲ್ಲಿರುವ ರಾಗರಸ ಎಂಥ ಕೇಳುಗರಲ್ಲೂ ‘ಸಂಗೀತ ಪ್ರೀತಿ’ ಹುಟ್ಟಿಸುತ್ತದೆ. ಈ ‘ಗಾಯಕಿ’ಯಲ್ಲಿ ಹಾಡುವಾಗ ಶಾಂತಿ, ಸಹನೆ, ಅನುಭೂತಿ ಮುಂತಾದ ಭಾವನೆಗಳು ಸೃಷ್ಟಿಯಾಗುತ್ತವೆ. ವೀರರಸದ ಸಂದರ್ಭ ಬಂದಾಗ ಮಾತ್ರ ‘ಅಗ್ರೆಷನ್’ ಇರಬೇಕಾಗುತ್ತದೆ. ಗಾಯನದಲ್ಲಿ ಕಣ್‌ನೋಟ್ಸ್, ಮೀಂಡ್‌, ಗಮಕ್‌, ಲಯಕಾರಿ, ರಿದಂ, ಸರಗಮ್‌ ಎಲ್ಲವೂ ಅತ್ಯಂತ ಸೊಗಸಾಗಿರುತ್ತವೆ. ಇವು ಸಂಗೀತದ ಏಕತಾನತೆಯನ್ನು ಮರೆಸುತ್ತವೆ. ಶುದ್ಧ ಸಾಹಿತ್ಯ, ಆಕಾರ, ಈಕಾರ, ಊಕಾರ, ಓಂಕಾರಗಳಲ್ಲಿ ಹಾಡುವಾಗ ವಿಶಿಷ್ಟ ಮೂಡ್‌ ಸೃಷ್ಟಿಯಾಗುತ್ತದೆ. ಅಲ್ಲದೆ ಈ ಘರಾಣೆಯ ಗಾಯನದಲ್ಲಿ ತಂತ್ರಗಾರಿಕೆ, ಆಲಂಕಾರಿಕ ಅಂಶಗಳು ಬಹಳ ಕಷ್ಟಕರ. ಇವುಗಳನ್ನು ಮೂರೂ ಸ್ಥಾಯಿಗಳಲ್ಲಿ ಸಾಮಾನ್ಯ ಜನರ ಹೃದಯ ತಟ್ಟುವ ಹಾಗೆ ಹಾಡುವುದು ಕೂಡ ಸವಾಲೇ. ಇದು ‘ಮಾಸ್‌ ಅಪೀಲ್‌’ ಆಗುವಂತೆ ಮಾಡುವುದು ಕೂಡ ಸುಲಭದ ಮಾತಲ್ಲ.

ಸಂಜೀವ್‌ ಅಭ್ಯಂಕರ್‌

* ಶಾಸ್ತ್ರೀಯ ಸಂಗೀತದಲ್ಲಿ ಗುರು–ಶಿಷ್ಯ ಪರಂಪರೆ ಅನಾದಿ ಕಾಲದಿಂದಲೂ ಬಂದಿರುವಂಥದ್ದು. ದಿಗ್ಗಜರೂ ಈ ಪರಂಪರೆಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ನಿಮ್ಮ ಪ್ರಕಾರ ಗುರು–ಶಿಷ್ಯ ಪರಂಪರೆಯ ಈಗಿನ ಔಚಿತ್ಯ ಏನು?

ಜಗತ್ತು ಡಿಜಿಟಲ್‌ ಯುಗದಲ್ಲಿದೆ. ಆಧುನಿಕತೆಯತ್ತ ದಾಪುಗಾಲು ಹಾಕುತ್ತಿದೆ. ಇಷ್ಟಾದರೂ ನಾನು ಗುರು–ಶಿಷ್ಯ ಪರಂಪರೆಗೆ ಹೆಚ್ಚಿನ ಒತ್ತಾಸೆ ನೀಡುತ್ತೇನೆ. ಬಹಳ ಹಿಂದಿನಿಂದಲೇ ಬೆಳೆದುಬಂದಿರುವ ಈ ಪದ್ಧತಿಯತ್ತ ನಾನೂ ನನ್ನ ಶಿಷ್ಯರೂ ಒಲವು ತೋರುತ್ತಿದ್ದೇವೆ, ಇದಕ್ಕಾಗಿ ಶಿಷ್ಯಂದಿರೊಂದಿಗೆ ಆಪ್ತ ಸಂಬಂಧ ಇಟ್ಟುಕೊಂಡಿದ್ದೇನೆ. ನನ್ನ ಕಛೇರಿಗಳಿಗೆ ಶಿಷ್ಯರನ್ನೂ ಕರೆದುಕೊಂಡು ಹೋಗ್ತೇನೆ. ನನ್ನ ಗುರುಗಳೊಂದಿಗೆ ನಾನು ಹಲವಾರು ಕಛೇರಿಗಳಲ್ಲಿ ಹಾಡಿದಂತೆ ಶಿಷ್ಯರಿಗೂ ಅವಕಾಶ ನೀಡುತ್ತಿದ್ದೇನೆ. ಇದರಿಂದ ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ಸಿಕ್ಕಿದಂತಾಗುತ್ತದೆ.

* ಸಂಗೀತ ಕಛೇರಿಗಳಿಗಾಗಿ ದೇಶ ವಿದೇಶಗಳಿಗೆ ಸದಾ ಪ್ರಯಾಣ ಮಾಡುತ್ತಿರುವ ನೀವು ಧ್ವನಿ ನಿಯಂತ್ರಣ ಹಾಗೂ ಆರೋಗ್ಯ ಕಾಳಜಿ ಹೇಗೆ ಮಾಡುತ್ತೀರಿ?

ಗಾಯಕನಿಗೆ ತನ್ನ ಶಾರೀರ ಕಾಪಾಡಿಕೊಳ್ಳುವುದು, ಆರೋಗ್ಯ ಕಾಳಜಿ ವಹಿಸುವುದು ಬಹಳ ಮುಖ್ಯ. ಕಠಿಣ ಡಯಟ್‌ ಪಾಲಿಸುತ್ತಾ ಬಂದಿದ್ದೇನೆ. ಚಿಕ್ಕ ವಯಸ್ಸಿನಿಂದಲೇ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇಟ್ಟುಕೊಂಡಿದ್ದೇನೆ. ಸೇಬು, ಬಾಳೆಹಣ್ಣು, ಮೊಸರು, ಬಟಾಟೆ ವಡಾ, ಬಜ್ಜಿ ಇವಿಷ್ಟನ್ನು ತಿನ್ನುವುದೇ ಇಲ್ಲ. ನನ್ನ ಡಾಕ್ಟರ್ ಹೇಳಿರುವುದಿಷ್ಟು...‘ಐದರ್‌ ಯು ಲೀವ್‌ ಸಿಂಗಿಂಗ್‌ ಆರ್‌ ಯು ಲೀವ್‌ ಈಟಿಂಗ್‌ ಫ್ರೈಡ್‌ ಐಟಮ್ಸ್’ ಅಂತ. ಹೀಗಾಗಿ ಆರೋಗ್ಯ ಬಗ್ಗೆ ಬಹಳ ಕೇರ್ ತಗೋತೀನಿ.

* ಸಂಗೀತವಲ್ಲದೆ ನಿಮ್ಮ ಇತರ ಹವ್ಯಾಸಗಳೇನು?

ಕ್ರೀಡೆ ಇಷ್ಟ. ಟೆನಿಸ್‌, ಕ್ರಿಕೆಟ್‌ ನೋಡುತ್ತೇನೆ. ಸ್ನೇಹಿತರೊಂದಿಗೆ, ಶಿಷ್ಯರೊಂದಿಗೆ ಕಾಲ ಕಳೆಯುವುದು, ಪಿಕ್‌ನಿಕ್‌ ಹೋಗೋದು, ಸಿನಿಮಾ ನೋಡೋದು ಇಷ್ಟ. ತಿಂಗಳಿಗೆ ಸುಮಾರು 20 ಸಿನಿಮಾಗಳನ್ನು ನೋಡುತ್ತೇನೆ. ಪತ್ನಿ ಅಶ್ವಿನಿ ಜೊತೆ ಲಾಂಗ್‌ ಡ್ರೈವ್‌ ಹೋಗೋದು ಇಷ್ಟ.

ಸಂಜೀವ್‌ ಅಭ್ಯಂಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.