ಅದು 2010ರ ದಸರೆ. ‘ಲೂಸಿಯಾ’ ಸಿನಿಮಾದ ಸಂಗೀತ ನಿರ್ದೇಶಕ ಎಸ್.ವಿ.ಪೂರ್ಣಚಂದ್ರ ತೇಜಸ್ವಿ ಆಗಷ್ಟೆ ಸಂಗೀತ ಕ್ಷೇತ್ರದಲ್ಲಿ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದರು. ಅವರ ಮೊದಲ ರಾಗ ಸಂಯೋಜನೆಯೇ ಮೈಸೂರು ಬಗೆಗಿನದು. ಆಗ ‘ದಸರಾ ಹಬ್ಬ ನಾಡಿನ ತುಂಬಾ’ ಎಂಬ ಸ್ವಾಗತಗೀತೆಯನ್ನು ಮಾಡಿದ್ದರು. ಅದು ಪ್ರತಿ ವರ್ಷವೂ ‘ಪಂಜಿನ ಕವಾಯತು’ ನಡೆಯುವಾಗ ಮೊಳಗುತ್ತದೆ. ‘ದಸರಾ ಹಬ್ಬ ನಾಡಿನ ತುಂಬಾ..ನಾಡ ಹಬ್ಬಕೆ.. ನಮ್ಮ ದಸರಕೆ ಬನ್ನಿ ಸೇರುವ..ಕರುನಾಡ ಹಬ್ಬದಿ ನಮ್ಮ ದಸರದಿ ಎಲ್ಲ ಬೆರೆಯುವ’ ಎಂದಿದ್ದರು. ಜನಪದ ದಾಟಿಯಲ್ಲಿದ್ದ ಗೀತೆಯು ಎಲ್ಲರನ್ನೂ ಸೆಳೆದಿತ್ತು
2016ರ ದಸರೆ ಸಂದರ್ಭದಲ್ಲಿ ‘ಜಂಬೂ ಸವಾರಿ..ನೋಡಕ್ಕೆ ನೀವು ಮೈಸೂರಿಗೆ ಬನ್ರೀ’ ಎಂದು ‘ನಾವು’ ಬ್ಯಾಂಡ್ ಪ್ರೀತಿಯಿಂದ ಆಹ್ವಾನ ನೀಡಿತು. ಬ್ಯಾಂಡ್‌ನ ಮೊದಲ ವಿಡಿಯೊ ಹಾಡಿದು. ಜಂಬೂ ಸವಾರಿಯ ಸಿದ್ಧತೆ ಜೊತೆಗೆ ಮೈಸೂರಿನ ಜನಜೀವನ ದಾಖಲಿಸಿತ್ತು. ಪ್ರವಾಸಿಗರನ್ನೂ ಕರೆದಿತ್ತು.
‘ಆನೆ ಮೇಲೊಂದ್ ಅಂಬಾರಿ.. ನೋಡಕ್ಕಲ್ಲ ದುಬಾರಿ.. ಲಕ್ಷಾಂತರ ಜನ ಸೇರ‍್ತಾರ್‍ರೀ ಪ್ರೋಗ್ರಾಮ್ಸೆಲ್ಲ ತರಾವರಿ’ ಎನ್ನುತ್ತಲೇ ರ‍್ಯಾಪ್ ಶೈಲಿಯಲ್ಲಿ ‘ಜಟ್ಟಿ ಕಾಳಗ ನೋಡೊದಕ್ಕೆ ಅರಮನೆಗೆ ನುಗ್ಗಿಬೀಳು.. ಬನ್ನಿಮಂಟಪಕ್ ಭೇಟಿ ನೀಡಿ ಟಾರ್ಚುಲೈಟು ಪೆರೇಡ್ ನೋಡು’...ಹೀಗೆ ಗೀತೆ ಸಾಗುತ್ತದೆ. ‘ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಕುರ್ಚಿ ಬೇಕಿಲ್ಲ. ಟಿಕೆಟ್ ಕಾಯ್ದಿರಿಸಬೇಕಿಲ್ಲ.
ಎಲ್ಲೆಂದರಲ್ಲಿ ಟವೆಲ್ ಹಾಸಿ ಕೂತು ನೋಡಬಹುದು’ ಎನ್ನುವ ಸಾಲುಗಳು ‘ಜನಸಾಮಾನ್ಯರ ದಸರೆಯಿದು’ ಎನ್ನುವಂತೆ ಮಾಡುತ್ತದೆ.ಫೋಕ್ ಆರ್ಟ್ ರಾಕ್ ಶೈಲಿಯಲ್ಲಿ ಸಂಯೋಜಿಸಲಾಗಿದ್ದು, ಶಾಸ್ತ್ರೀಯ ಸಂಗೀತದ ಮಿಳಿತವೂ ಇದೆ. ತ್ಯಾಗರಾಜರ ‘ಎಂದರೊ ಮಹಾನುಭಾವುಲು’ ಕೃತಿಯನ್ನು ಬಳಸಿಕೊಂಡಿರುವುದು ವಿಶೇಷ.
‘ಚಿಕ್ಕಂದಿನಲ್ಲಿ ಅಪ್ಪ–ಅಮ್ಮ ಜೊತೆ ದಸರೆಯನ್ನು ಜನಸಮೂಹದೊಡನೆ ನಿಂತು ನೋಡುವ ಅನುಭವವನ್ನೇ ಗೀತೆಯಾಗಿಸಿ
ದ್ದೇವೆ’ ಎನ್ನುತ್ತಾರೆ ಬ್ಯಾಂಡ್‌ನ ತಬಲಾ, ಮೃದಂಗ ವಾದಕ ಅನುಷ್ ಎ. ಶೆಟ್ಟಿ. ಅನುಷ್ ಶೆಟ್ಟಿ, ಸುಂದರೇಶ್ ದೇವಪ್ರಿಯಂ, ಶಾಲೋಮ್ ಸನ್ನುತಾ, ಬಿ.ಕೆ.ಕಿರಣ್ ಈ ಹಾಡನ್ನು ಹಾಡಿದ್ದಾರೆ. ಶೇಖರ್ ಎಸ್. ಡಿಎಫ್‌ಡಿ ಛಾಯಾಗ್ರಹಣ, ಸಂಕಲನದ ಜೊತೆ ನಿರ್ದೇಶನ ಮಾಡಿದ್ದಾರೆ.
ಎಂದೆಂದೂ ನಮ್ಮೂರು ಮೈಸೂರು
2018ರ ದಸರೆಯಲ್ಲಿ ವಾಸು ದೀಕ್ಷಿತ್ ಬರೆದು, ಸಂಯೋಜಿಸಿದ ‘ಮೈಸೂರು’ ಹಾಡು ಎಲ್ಲೆಲ್ಲೂ ರಿಂಗಣಿಸುತ್ತದೆ. ‘ಬೆರೆತರೂ ನಮ್ಮೂರು.. ಮರೆತರೂ ನಮ್ಮೂರು.. ಎಂದೆಂದೂ ನಮ್ಮೂರು ಮೈಸೂರು...’ ಹೀಗೆ ಆರಂಭವಾಗುವ ಗೀತೆ ಮೈಸೂರಿನ ಸೊಬಗನ್ನು ಕಟ್ಟಿಕೊಟ್ಟಿತ್ತು. ಈ ವಿಡಿಯೊ ಹಾಡು ಮೈಸೂರನ್ನು ತಾಯಂತೆ ಪ್ರೀತಿಸುವವರಲ್ಲಿ ಸಂತಸವನ್ನು ಉಕ್ಕಿಸುತ್ತದೆ. ಪ್ರತಿ ದಸರಾದಲ್ಲೂ ಮೈಸೂರಿಗರಿಗೆ ಮುದ ನೀಡುತ್ತದೆ. ಸುಗಮ ಸಂಗೀತ, ಶಾಸ್ತ್ರೀಯ, ಜನಪದದ ಹೂರಣವುಳ್ಳ ಹಾಡಿಗಾಗಿ ಮ್ಯಾಂಡಲಿನ್, ಸ್ಯಾಕ್ಸೋಫೋನ್, ಹಾರ್ಮೋನಿಯಂ ಜೊತೆಗೂಡಿವೆ. ಅರಮನೆ ಬ್ಯಾಂಡ್‌ನ ಮರುಸೃಷ್ಟಿಯಂತೆ ಫ್ಯೂಷನ್ ನಾದವೂ ಹೃದ್ಯವಾಗುತ್ತದೆ.
‘ಕಾವೇರಿ ತಾಯಿ ತಂಪು ಒಡಲಲ್ಲಿ, ಚಾಮುಂಡಿ ಒಲುಮೆ ನೆತ್ತಿಲಿ. ಅರಮನೆಯ ಬೆಳಕು ಜನಮನದ ಸೊಬಗು ನಿನ್ನಲ್ಲೇ...’ ಎನ್ನುತ್ತಲೇ, ‘ಬೆಳೆದರೂ ಬಾಗದಿರೂ ಅರಳಿಯೂ ಬಾಡದಿರು ನೀ ಎಂದೆಂದೂ. ಬಿರುಕದಿರು, ಬದಲಾಗದಿರು, ಮರೆಯಾಗದಿರು ಮೈಸೂರು’ ಎಂದು ಬಿನ್ನವಿಸಿಕೊಳ್ಳುವ ಸಾಲುಗಳು, ಬದಲಾಗುತ್ತಿರುವ ಊರಿನ ಕುರಿತ ಅಹವಾಲನ್ನು ಮಂಡಿಸುತ್ತವೆ. ‘ಮೈಸೂರು’ ಕುರಿತ ಹಾಡೆಂದರೆ ದೀಕ್ಷಿತ್‌ಗೆ ವಿಶೇಷ ಪ್ರೀತಿ.
‘ಮೈಸೂರು ಕ್ರಿಯೇಟಿವಿಟಿಯ ಅಂಗಳ. ಮಗುವಿನ ಕಲಿಕೆಗಾಗಿ ತಾಯಿಯೇ ಮಗುವಾಗುವಂತೆ ಮೈಸೂರು. ಇದು ನನ್ನ ಜೀವನವನ್ನು ರೂಪಿಸಿದೆ. ಹುಟ್ಟಿದೂರಿನ ಭಾವುಕತೆ ಇದ್ದರೂ, ಅದನ್ನು ಉಳಿಸುವ ಕಾಳಜಿಯೇ ಹಾಡಾಗಿದೆ’ ಎನ್ನುತ್ತಾರೆ ವಾಸು ದೀಕ್ಷಿತ್.
ನಾವೇನೇ ರಾಜರು
‘ಕರುನಾಡಿನ ಹೆಮ್ಮೆಯ ಊರು ನಮ್ಮ ಮೈಸೂರು...’ ಹಾಗೂ ‘ನಮ್ಮೂರು ಮೈಸೂರು ನಾವೇನೇ ರಾಜರು’ ಎಂಬ ಎರಡು ಹಾಡುಗಳನ್ನು ಮೈಸೂರಿನವರೇ ಆದ ಸಂಗೀತ ನಿರ್ದೇಶಕ ಹರಿಕಾವ್ಯ ಹಾಡಿದ್ದಾರೆ. ‘ನಮ್ಮ ಮೈಸೂರು...’ ಅವರೇ ಬರೆದು, ರಾಗ ಸಂಯೋಜಿಸಿ ಹಾಡಿದ್ದು, ನವರಾತ್ರಿಯ ಸೊಬಗನ್ನು ಪ್ರಜ್ವಲ್ ಅರಸ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಪಾಶ್ಚಾತ್ಯ ಸಂಗೀತ ದಾಟಿಯಲ್ಲಿ ಆರಂಭವಾಗುವ ಹಾಡಿಗೆ ಜನಪದ ತಾಳವಾದ್ಯಗಳ ಮಿಳಿತವಿದೆ. ಶಾಸ್ತ್ರೀಯ ಸಂಗೀತದ ಪ್ರಭಾವವೂ ಇದೆ. ಮೈಸೂರು ಸಂಸ್ಥಾನ ಗೀತೆ ‘ಕಾಯೌ ಶ್ರೀಗೌರಿ.. ಕರುಣಾ ಲಹರಿ’ ಹಾಡಿನ ಕೊನೆಯಾರ್ಧದಲ್ಲಿ ಬರುತ್ತದೆ. ಹಳೆಯ ಮೈಸೂರಿನ ಫೋಟೊಗಳನ್ನು ಬಳಸಲಾಗಿದೆ.
ಸುಶ್ರಾವ್ಯತೆಯ ಜೊತೆಗೆ ದೃಶ್ಯ ಸಿರಿವಂತಿಕೆಯಿಂದ ಕೂಡಿದ ಹಾಡಿನ ಸಾಹಿತ್ಯ ಸರಳವಾಗಿದ್ದರೂ ಸಂಯೋಜನೆ, ಚಿತ್ರೀಕರಣ ಗುಣಮಟ್ಟದಿಂದ ಕೂಡಿದೆ. ಆರಂಭದಲ್ಲಿ ಕುಣಿಯುವಂತೆ ಮಾಡುವ ಗೀತೆಯು ಕೊನೆಯಲ್ಲಿ ಭಕ್ತಿರಸವನ್ನು ಉಕ್ಕಿಸುತ್ತದೆ.
‘ಚೆನ್ನೈನಲ್ಲಿ ಬಹುಭಾಷೆಯ ಸಿನಿಮಾಗಳಿಗೆ ಹಿನ್ನೆಲೆ ಸಂಗೀತವನ್ನು ನೀಡುತ್ತಿದ್ದ ದಿನಗಳಲ್ಲಿ, 2018ರ ದಸರೆ ವೇಳೆಯಲ್ಲಿ ಹಾಡು ಹುಟ್ಟಿತು. ಹುಟ್ಟೂರು ಕೆ.ಆರ್.ನಗರ, ಓದಿದ್ದು ಮೈಸೂರಿನ ಕಾವಾ. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತೆ. ಸಿನಿಮಾ ಸಂಗೀತ ನಿರ್ದೇಶಕನಾದೆ. ಅದಕ್ಕೆ ಮೈಸೂರೇ ಕಾರಣ’ ಎನ್ನುತ್ತಾರೆ ಹರಿಕಾವ್ಯ.
ಹಿನ್ನೆಲೆ ಗಾಯಕಿ ಅನನ್ಯ ಭಟ್, ಹರಿಕಾವ್ಯ, ಶಶಾಂಕ್ ಶೇಷಗಿರಿ, ವಿಜೇತ್ ಕೃಷ್ಣ ಹಾಡಿದ ಮೈಸೂರು ಕುರಿತ ಗೀತೆ ‘ನಮ್ಮೂರು ಮೈಸೂರು ನಾವೇನೆ ರಾಜರು’. ಇದು 2019ರ ದಸರೆಯಲ್ಲಿ ಬಿಡುಗಡೆಗೊಂಡಿದ್ದು, ನಗರದ ಪ್ರಸಿದ್ಧ ಸ್ಥಳಗಳು ಸೆರೆಯಾಗಿವೆ. ಚಲನಚಿತ್ರ ನಟ ಸತೀಶ್ ಪೊನ್ನಾಚಿ ನಿರ್ದೇಶಿಸಿದ್ದರೆ, ಸಾಗರ್ ತೊರೆಮಾವು ಹಾಗೂ ಟಿ.ಆರ್. ಪ್ರದೀಪ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಸತೀಶ್ ಸೋಲೂರು ಸಾಹಿತ್ಯ ಬರೆದಿದ್ದು, ಎಸ್.ಪ್ರಶಾಂತ್ ನಿರ್ಮಿಸಿದ್ದಾರೆ.
ಕರುಣೆಯ ಕಡಲು
2022 ರಲ್ಲಿ ‘ನಾಡದೇವತೆಯ ಸಿರಿ ತವರು.. ನಮ್ಮೂರು’ ಎಂಬ ಗೀತೆಯನ್ನು ಮಾಡಿದ್ದ ಸಂಗೀತ ನಿರ್ದೇಶಕ ನೀತು ನಿನಾದ್ ಈ ಬಾರಿ ಎರಡು ಹಾಡುಗಳನ್ನು ಮಾಡಿದ್ದಾರೆ. ಜಿಲ್ಲಾಡಳಿತವೇ ಅವರಿಗೆ ಜೊತೆಯಾಗಿದೆ. ‘ಕರುನಾಡ ಕರುಣೆಯ ಕಡಲಿನಲಿ.. ಮೈಸೂರು ಮಮತೆಯ ಮಡಿಲಿನಲಿ’ ಎಂಬ ದಸರಾ ಥೀಮ್ ಗೀತೆ ಜನರ ಮನಗೆದ್ದಿದೆ.
‘ಕನ್ನಡದ ಸಂಭ್ರಮದ ನಾಡಹಬ್ಬ.. ನಾಡದೇವತೆಯ ಸಿರಿ ದಸರಾ ಹಬ್ಬ..’ ಎನ್ನುತ್ತಲೇ ‘ಅರಮನೆಯ ಅಂಗಳದಿ ಅಂಬಾರಿಯ ಸೊಬಗು.. ಮೆರವಣಿಗೆಯ ಸಡಗರದಿ ಜನಮನದ ಮೆರುಗು.. ಮೈಸೂರಿದು ಕರುನಾಡಿಗೆ ಸಂಸ್ಕೃತಿಯ ಹಿರಿಮೆ.. ಪರಂಪರೆಯ ಸಂಭ್ರಮದ ಅಸ್ಮಿತೆಯ ಗರಿಮೆ’ ಎಂಬ ಸಾಲುಗಳು ಸೆಳೆಯುತ್ತವೆ. ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಹಾಡಿರುವ, ನೀತು ನಿನಾದ್ ಸಂಗೀತ ನೀಡಿರುವ ಗೀತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಸಾಹಿತ್ಯವಿದೆ.
ನೀತು ನಿನಾದ್ ಅವರೇ ‘ಯುವ ಸಂಭ್ರಮ’ದ ಬಗ್ಗೆ ಮತ್ತೊಂದು ಗೀತೆ ಸಂಯೋಜಿಸಿದ್ದು, ವಿಜಯಪ್ರಕಾಶ್ ದನಿಯಾಗಿದ್ದಾರೆ.
‘ಹೆಜ್ಜೆ ಮೇಲೆ ಹೆಜ್ಜೆ ಸೇರಿದೆ.. ಸದ್ದು ಊರ ತುಂಬಾ ಕೇಳಿದೆ.. ಎದ್ದು ಕುಣಿಯುವ ಹಾಗೆ ಮಾಡಿದೆ.. ನಾಡಹಬ್ಬ ಶುರುವಾಗಿದೆ’–ಗೀತೆ ಎಲ್ಲರ ಗೀತೆಯಾಗಿದೆ. ಮೈಸೂರು ತುಂಬಿಕೊಂಡಿದೆ.
ಲವ್ ಯೂ ಮೈಸೂರು
ಮೈಸೂರಿನವರೇ ಆದ ಬಹುಭಾಷಾ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಹಾಡಿರುವ ‘ಲವ್ ಯೂ ಮೈಸೂರು’ ನಗರದ ಸೊಬಗಿನ ಜೊತೆಗೆ ಮೈಸೂರಿಗರ ಹೃದಯವಂತಿಕೆ, ಕಲಾಪ್ರೀತಿಯನ್ನು ಕಟ್ಟಿಕೊಡುತ್ತದೆ. 2019ರ ದಸರೆಯಲ್ಲಿ ಬಿಡುಗಡೆಯಾದ ಈ ಹಾಡು ದಸರೆ ಬಂದಾಗಲೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡುತ್ತದೆ.
‘ರಾಜಾಧಿರಾಜರ ತವರೂರಿದು... ಸ್ವರ್ಗಕ್ಕೆ ಕಿಚ್ಚು ಹಚ್ಚುವ ಮೈಸೂರಿದು..’ ಎಂದು ಆರಂಭವಾಗುವ ಹಾಡು ‘ಚಾಮುಂಡಿ ಗಿರಿಯಿಂದ ನಮ್ಮೂರ ಅಂದ ಚಂದ ನೋಡೋದೆ ಆನಂದ.. ಲವ್ ಯೂ ಮೈಸೂರು. ಶ್ರೀಗಂಧ ನಮ್ಮೂರು..’ ಎನ್ನುತ್ತದೆ.
ದಸರೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವರು ಜಾಲತಾಣದಲ್ಲಿ ಹಂಚುವಾಗ ಹಿನ್ನೆಲೆ ಹಾಡಾಗಿ ಇದನ್ನು ಬಳಸುತ್ತಾರೆ. ದಸರೆಯ ದೀಪಾಲಂಕಾರ, ಬೃಂದಾವನ ಸೇರಿದಂತೆ ಮೈಸೂರಿನ ವಿಶೇಷಗಳನ್ನು ಬಿತ್ತರಿಸುವ ಹಾಡು ವಿಜಯಪ್ರಕಾಶ್ ಅವರ ಮೆಚ್ಚಿನ ಹಾಡುಗಳಲ್ಲೊಂದು. ಅದಕ್ಕೆ ಆಕಾಶ್ ಪರ್ವ ಸಂಗೀತ ನೀಡಿದ್ದರೆ, ಈಶ್ವರ್ ಶ್ಯಾಮರಾವ್ ಸಾಹಿತ್ಯ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.