ADVERTISEMENT

ಬಾತ್ರೂಮ್‌ನಿಂದ ಸ್ಟುಡಿಯೋವರೆಗೂ: ಹಾಡುಗಾರಿಕೆಗೆ ವೇದಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:27 IST
Last Updated 3 ಜುಲೈ 2018, 20:27 IST
ಸುನೀಲ್ ಕೋಶಿ
ಸುನೀಲ್ ಕೋಶಿ   

ನಮ್ಮ ನಡುವೆ ಅದ್ಭುತ ಪ್ರತಿಭೆಗಳಿದ್ದಾರೆ. ವೃತ್ತಿಪರ ಗಾಯಕರಿಗಿಂತ ಚೆಂದವಾಗಿ ಸುಮಧುರವಾಗಿ ಹಾಡುವ ಚಾಕಚಕ್ಯತೆ ಅವರಲ್ಲಿದೆ. ಅಡುಗೆ ಮನೆ, ಬಾತ್‌ರೂಮ್‌ ಹಾಗೂ ಕಾಲೇಜುಗಳ ನಾಲ್ಕುಗೋಡೆಗಳ ಮಧ್ಯೆ ಕೈ ಸಿಗುವ ಸೌಟು, ಮಗ್ ಹಾಗೂ ಪೇಪರ್‌ಗಳನ್ನು ಮೈಕ್‌ ಎಂದೇ ಭಾವಿಸಿ ಹಾಡುತ್ತಿರುತ್ತಾರೆ.

ಆದರೆ, ಅವರೆಲ್ಲರಿಗೂ ಅವಕಾಶದ ಊರುಗೋಲು ಸಿಗದೆ ನಾಲ್ಕು ಗೋಡೆಗಳ ನಡುವೆಯೇ ತಮ್ಮ ಕಂಠ ಸಿರಿಯನ್ನು ಉದುಗಿಸಿಟ್ಟಿರುತ್ತಾರೆ. ಅಂಥವರಿಗೆ ಉತ್ತಮವಾದ ವೇದಿಕೆ ಕಲ್ಪಿಸಿಕೊಡುತ್ತಿದೆ ‘ಫ್ರಮ್ ಮಗ್ ಟು ಮೈಕ್’. ಕೊಂಚ ದುಡ್ಡು ಖರ್ಚಾದರೂ ಆಸೆ ಈಡೇರುತ್ತದೆ. ಜೊತೆಗೆ ಹಾಡಲು ವೇದಿಕೆ ಸಿಗುತ್ತದೆ ಎನ್ನುತ್ತಾರೆ ಇದರ ಸಂಸ್ಥಾಪಕ ಸುನೀಲ್ ಕೋಶಿ.

ಚಿಕ್ಕಂದಿನಿಂದಲೂ ಆಟ ಪಾಠಕ್ಕಿಂತ ಸಂಗೀತವೇ ನನಗೆಅಚ್ಚುಮೆಚ್ಚು. ಸಿಕ್ಕ ಚಿಕ್ಕ ಚಿಕ್ಕ ಅವಕಾಶಗಳನ್ನು ಬಳಸಿಕೊಂಡು ಹಲವಾರು ವೇದಿಕೆಗಳ ಮೇಲೆ ಹಾಡಿದ್ದೇನೆ. ಮೆಚ್ಚುಗೆಯೂ ಸಿಕ್ಕಿದೆ. ದೊಡ್ಡವನಾದಂತೆಲ್ಲ ಅದ್ಯಾಕೋ ಸಂಗೀತ ನನ್ನಿಂದ ದೂರವಾಗುತ್ತಲೇ ಇತ್ತು. ಕೈತುಂಬ ಸಂಬಳ ಸಿಕ್ಕರೂ ಏನೋ ಕಳೆದುಕೊಂಡ ಕೊರಗು ನನ್ನನ್ನು ಕಾಡುತ್ತಿತ್ತು. ಒಮ್ಮೆ ಜ್ಞಾನೋದಯವಾಯಿತು. ಕೂಡಲೇ ಸಂಗೀತ ಕಲಿಯು ಚೈನ್ನೈನ ಗುರುಕುಲಕ್ಕೆ ಹೊರಟೆ ಎಂದ ಸುನೀಲ್ ಅವರ ಮಾತಿನಲ್ಲಿ ಕಳೆದುಕೊಂಡದ್ದನ್ನು ಮತ್ತೆ ಪಡೆದ ಸಂತಸ ಧ್ವನಿಸುತ್ತಿತ್ತು.

ADVERTISEMENT

ಸಂಗೀತ ಕಲಿಯಬೇಕೆಂಬ ಹಂಬಲವುಳ್ಳವರು ವೇದಿಕೆ ಸಿಗದೆ ಹೇಗೆ ಕೊರಗುತ್ತಾರೆ ಎಂಬುದಕ್ಕೆ ನಾನೇ ಉದಾಹರಣೆ. ಆ ನೋವಿನ ಅನುಭವ ನನಗಾಗಿದೆ. ನನ್ನಿಂದ ಸಾಧ್ಯವಾಗುವಷ್ಟು ಮಂದಿಗೆಈ ಸಂಸ್ಥೆ ಮೂಲಕ ವೇದಿಕೆ ಕಲ್ಪಿಸಿಕೊಡಲಾಗುತ್ತದೆ. ಅದಕ್ಕಾಗಿ, ಸಂಸ್ಥೆಯ ಹೆಸರಿನಲ್ಲಿಯೇ ಸಂಗೀತ ಕಾರ್ಯಾಗಾರ ಆಯೋಜಿಸಲಾಗುತ್ತಿದೆ ಎನ್ನುತ್ತಾರೆ ಸುನೀಲ್.

ಸಿಗುವ ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಈ ಕಾರ್ಯಾಗಾರವೇ ಗಾಯಕರಾಗಿ ದೊಡ್ಡ ಹೆಸರು ಮಾಡಿ ಇದೇ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಬಹುದು ಎಂಬುದು ಸುನೀಲ್ ಅವರ ಮನದ ಮಾತು.

ವೃತ್ತಿಗೆ ಮಾರ್ಗ ಈ ಕಾರ್ಯಾಗಾರ
ಈ ಕಾರ್ಯಾಗಾರಗಳಲ್ಲಿ ಯಾರೂ ಬೇಕಾದರೂ ಭಾಗಿಯಾಗಬಹುದು. ಹಾಡುವ ಆಸಕ್ತಿ ಬೇಕಷ್ಟೇ. ಕಾರ್ಯಾಗಾರದ ಮೂಲಕ ಮೂರು ಹಂತಗಳಲ್ಲಿ ಗಾಯನದ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.

ವೃತ್ತಿಪರ ಗಾಯಕರು ಹಾಡಲು ಯಾವ ರೀತಿ ಸಜ್ಜಾಗುತ್ತಾರೆ, ಯಾವ ರೀತಿ ಹಾವಭಾವ ಮೈಗೂಡಿಸಿಕೊಂಡಿರುತ್ತಾರೆ, ಸ್ಟೇಜ್ ಫೀಯರ್ (ವೇದಿಕೆ ಹತ್ತಲು ಅಂಜಿಕೆ) ಅನ್ನು ಹೇಗೆ ಹೋಗಲಾಡಿಸಬೇಕು, ವೇದಿಕೆಗಳ ಮೇಲೆ ಹಾಗೂ ಸ್ಟುಡಿಯೊಗಳಲ್ಲಿ ಮೊದಲ ಬಾರಿಗೆ ಹಾಡಲು ಮುಂದಾದಾಗ ಎದುರಾಗುವ ಸಾಮಾನ್ಯ ತೊಂದರೆಗಳನ್ನು ಯಾವ ರೀತಿ ನಿಭಾಯಿಸಬೇಕು ಎಂಬುದರ ಬಗ್ಗೆ ಮೊದಲ ಹಂತದ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುತ್ತದೆ.

ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಎರಡನೇ ಹಂತಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ. ಅದೂ ಆಸಕ್ತಿ ಇದ್ದರೆ ಮಾತ್ರ. ಹಾಡುವುದನ್ನು ಹೇಗೆ ಮತ್ತಷ್ಟು ಕರಗತ ಮಾಡಿಕೊಳ್ಳಬೇಕು, ಗಾಯನದ ವೇಳೆ ಧ್ವನಿಯ ಏರಿಳಿತ ಯಾವ ರೀತಿ ನಿರ್ವಹಣೆ ಮಾಡಬೇಕು, ಕರೊಕೆ ಜೊತೆ ಯಾವ ರೀತಿ ಹಾಡಬೇಕು ಹಾಗೂ ಕರೋಕೆ ಇಲ್ಲದೇ ಯಾವ ರೀತಿ ಹಾಡಬೇಕು ಎಂಬುದನ್ನು ಈ ಹಂತದಲ್ಲಿ ಹೇಳಿಕೊಡಲಾಗುತ್ತದೆ.

ಇನ್ನೂ ಮೂರನೇ ಹಂತದ ಕಾರ್ಯಾಗಾರವನ್ನು ವಾರಂತ್ಯಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಇದರಲ್ಲಿ ಪ್ರತಿ ಅಭ್ಯರ್ಥಿಯೂ ಎರಡು ಹಾಡುಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಆ ಹಾಡುಗಳನ್ನು ವೇದಿಕೆಗಳ ಮೇಲೆ ಹೇಗೆ ಪ್ರಸ್ತುತಿ ಪಡಿಸಬೇಕು ಎಂಬುದನ್ನು ಸೂಚ್ಯವಾಗಿ ತಿಳಿಸಲಾಗುತ್ತದೆ. ಕಾರ್ಯಾಗಾರದ ಅಂತ್ಯದಲ್ಲಿ ಸಾರ್ವಜನಿಕರನ್ನೊಳಗೊಂಡ ವೇದಿಕೆಯಲ್ಲಿ ಹಾಡಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಫ್ರಮ್ ಮಗ್ ಟು ಮೈಕ್ ಸಂಸ್ಥೆಯು ಖ್ಯಾತ ಗಾಯಕರಾದ ಹರಿಹರನ್, ಚಿತ್ರಮ್ಮ ಅವರ ಸ್ಟುಡಿಯೊಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳನ್ನು ಕೆಲವೊಮ್ಮೆ ಈ ಸ್ಟುಡಿಯೊಗಳಿಗೆ ಕರೆದುಕೊಂಡು ಹೋಗಿ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಖ್ಯಾತ ಗಾಯಕರನ್ನು ಕಾರ್ಯಾಗಾರಗಳಿಗೆ ಕರೆಸಿ, ಗಾಯನದ ಬಗ್ಗೆ ಹಲವಾರು ಟಿಪ್ಸ್ ಕೊಡಿಸಲಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ರೂವಾರಿ ಸುನೀಲ್.

**

ಸಾಫ್ಟ್‌ವೇರ್ ಎಂಜಿನಿಯರ್ ಟು ಸಿಂಗರ್

ಸಾಫ್ಟ್‌ವೇರ್ ಎಂಜಿನಿಯರ್ ಕೆಲಸ. ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ. ಆದರೂ ಸಂತೃಪ್ತಗೊಳ್ಳದ ಬದುಕು. ಇಷ್ಟದ್ದನ್ನು ಸಾಧಿಸಲಾಗದ ಚಡಪಡಿಕೆ. ಕುಟುಂಬಸ್ಥರ ವಿರೋಧದ ನಡುವೆ ಕಡೆಗೂ ದೃಢ ನಿರ್ಧಾರ ಮಾಡಿ ತನ್ನಿಷ್ಟದ ಸಂಗೀತ ಕ್ಷೇತ್ರಕ್ಕೆ ಧುಮುಕಿ ಸರಸ್ವತಿಯನ್ನು ಒಲಿಸಿಕೊಳ್ಳಲು ಪರಿಶ್ರಮ ಪಡುತ್ತಿರುವವರು ಸುನೀಲ್ ಕೋಶಿ. ಅವರ ಪ್ರತಿ ಮಾತಿನಲ್ಲೂ ಮತ್ತಷ್ಟು ಕಲಿಯಬೇಕೆಂಬ ಉತ್ಸಾಹ ಗೋಚರವಾಗುತ್ತದೆ.

ಕೇರಳದ ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿದ ಸುನೀಲ್ ಪ್ರಾಥಮಿಕ ಶಿಕ್ಷಣ ಮುಗಿಸಿದ್ದೆಲ್ಲ ಅಬುಧಾಬಿನಲ್ಲಿ. ಉನ್ನತ ಶಿಕ್ಷಣಕ್ಕೆ ಬೆಳಗಾವಿಗೆ ಬಂದು ಕಂಪ್ಯೂಟರ್ ಸೈನ್ಸ್‌ ಆ್ಯಂಡ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ ಅವರು, ಬಳಿಕ ನಗರದ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಕೈತುಂಬ ದುಡಿಯುತ್ತಿದ್ದರು.

‘ಬಾಲ್ಯದಿಂದ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದೆ. ಅಬುಧಾಬಿಯಲ್ಲಿದ್ದಾಗಲೂ ಹಲವು ವೇದಿಕೆಗಳ ಮೇಲೆ ಹಾಡಿ ಮೆಚ್ಚುಗೆ ಪಡೆದಿದ್ದೆ. ಶಿಕ್ಷಣ ಹಾಗೂ ಉದ್ಯೋಗದ ಹಾದಿಯಲ್ಲಿದ್ದಾಗ ಸಂಗೀತವಿಲ್ಲದ ಬದುಕು ಏಕೆ ಎಂಬ ಕೊರಗು ಕಾಡುತ್ತಿತ್ತು. ಸಂಗೀತವನ್ನು ಒಲಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದು, ಕೆಲಸಕ್ಕೆ ರಾಜೀನಾಮೆ ಕೊಟ್ಟು ಚೆನ್ನೈನ ಗುರುಕುಲದಲ್ಲಿ ಸಂಗೀತ ಕಲಿಕೆಗೆ ಹೋದೆ’ ಎನ್ನುವ ಸುನೀಲ್, ಅಂದುಕೊಂಡದ್ದನ್ನು ಸಾಧಿಸಿಯೇ ತೀರುವ ಛಲಗಾರ ಎಂಬುದನ್ನು ತೋರಿಸಿದ್ದಾರೆ.

‘ಗುರುಕುಲದಿಂದ ಹೊರಬಂದ ಬಳಿಕ ಆರ್ಥಿಕ ಸಮಸ್ಯೆ ಎದುರಾಯಿತು. ಆಗ ವಿಧಿಯಿಲ್ಲದೇ ಮತ್ತೆ ಸಾಫ್ಟ್‌ವೇರ್ ಎಂಜಿನಿಯರ್ ಕೆಲಸಕ್ಕೆ ಸೇರಿಕೊಂಡೆ. ಆಗಲೂ ಸಂಗೀತವು ನನ್ನನ್ನು ಸೆಳೆಯುತ್ತಲೇ ಇತ್ತು. ದೃಢ ನಿರ್ಧಾರ ಮಾಡಿ ಮತ್ತೆ ಸಂಗೀತಕ್ಕೆ ಬಂದು ಬಿಟ್ಟೆ’ ಎಂದ ಸುನೀಲ್ ಸಂಗೀತದ ಮೇಲಿನ ಪ್ಯಾಷನ್‌ಗಾಗಿಯೇ ‘ಫ್ರಮ್ ಮಗ್ ಟು ಮೈಕ್’ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ.

ಹೊಸ ಚಿತ್ರತಂಡ ಪ್ರಾರಂಭಿಸಿರುವ ‘ಒಂಬತ್ತನೇ ಅದ್ಭುತ’ ಚಿತ್ರದ ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸುನೀಲ್ ಅವರು ಸುಮಧುರವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.