ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರಾದ ಪಂಡಿತ ಪರಮೇಶ್ವರ ಹೆಗಡೆ ಹಿಂದೂಸ್ತಾನಿ ಸಂಗೀತದ ಮೇರು ಗಾಯಕ. ಕಿರಾಣ–ಗ್ವಾಲಿಯರ್–ಪಟಿಯಾಲ ಘರಾಣೆಯಲ್ಲಿ ಹಾಡುವ ಇವರು ಸಂಗೀತ ದಿಗ್ಗಜ ಪಂಡಿತ ಬಸವರಾಜ ರಾಜಗುರು ಅವರ ಗರಡಿಯಲ್ಲಿ ಪಳಗಿದವರು. ಆಕಾಶವಾಣಿಯ ಟಾಪ್ ಗ್ರೇಡ್ ಕಲಾವಿದರಾಗಿ ರೂಪುಗೊಂಡ ಹೆಗಡೆ ಅವರು ‘ಭಾನುವಾರದ ಪುರವಣಿ’ಯೊಂದಿಗೆ ತಮ್ಮ ಸಂಗೀತ ಸಾಧನೆಯ ಸಾರವನ್ನು ಹಂಚಿಕೊಂಡಿದ್ದಾರೆ.
ನಿಮಗೆ ಸಂಗೀತ ರಸಾಸ್ವಾದನೆಯ ರುಚಿ ಹತ್ತಿದ್ದು ಹೇಗೆ?
ಅದು ಅರವತ್ತರ ದಶಕ. ನಾನು ಅದು ಹೇಗೆ ಸಂಗೀತದ ಹುಚ್ಚು ಬೆಳೆಸ್ಕೊಂಡೆನೋ ಗೊತ್ತಿಲ್ಲ. ಮನೆಯಲ್ಲಂತೂ ಸಂಗೀತದ, ಕಲೆಯ ವಾತಾವರಣ ಇತ್ತು. ತಂದೆಯವರು ಭಜನೆ, ಯಕ್ಷಗಾನ, ನಾಟಕ, ಹಾರ್ಮೋನಿಯಂ ವಾದನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜೊತೆಗೆ ಸಂಗೀತದ ಗೀಳೂ ಇತ್ತು, ನನಗಾಗ ಎಂಟು ವರ್ಷ. ನನಗೆ ಸಂಗೀತ ಕಲಿಸಬೇಕು ಎಂಬ ಆಸೆ ಅಪ್ಪನಿಗಿತ್ತು. ಹೀಗಾಗಿ ಹೊನ್ನಾವರದ ನಮ್ಮ ಮನೆಗೆ ಸಂಗೀತ ಗುರು ಪಂಡಿತ ಎಸ್.ಎಂ. ಭಟ್ ಕಟ್ಟಿಗೆ ಅವರನ್ನು ಗೋಕರ್ಣದಿಂದ ಕರೆಸಿಕೊಂಡು ಸಂಗೀತಾಭ್ಯಾಸಕ್ಕೆ ಶುರುವಿಟ್ಟುಕೊಂಡೆ. ಮುಂದೆ ಪಂಡಿತ ಚಂದ್ರಶೇಖರ್ ಪುರಾಣಿಕಮಠ ಅವರ ಬಳಿ ಕಲಿಯಲಾರಂಭಿಸಿದೆ. ಅವರು ತಬಲಾ, ಹಾರ್ಮೋನಿಯಂ ಸಾಥಿಯೊಂದಿಗೇ ಸಂಗೀತಾಭ್ಯಾಸ ಮಾಡಿಸೋರು. ಶಾಸ್ತ್ರೀಯ ಸಂಗೀತದ ಬಗ್ಗೆ ಹಳ್ಳಿಯ ಜನರಲ್ಲಿ ಅಷ್ಟಾಗಿ ಜ್ಞಾನ ಇಲ್ಲದ ಕಾಲವದು. ನಾನು ತಂಬೂರಿ ಹಿಡಿದುಕೊಂಡು ಅಭ್ಯಾಸ ಮಾಡಲಾರಂಭಿಸಿದರೆ ಜನ ‘ಇದೇನೋ ಭೀಮನ ಗದೆ ಹಿಡ್ಕೊಂಡು ಹಾಡ್ತಿಯಲ್ಲೋ..’ ಎನ್ನೋರು. ಬಸ್‌ನಲ್ಲಿ ತಂಬೂರಿ ತೆಗೆದುಕೊಂಡು ಹೋಗುವಾಗ ‘ಹುಷಾರು, ಯಾರದಾದ್ರೂ ತಲೆಗಿಲೆ ಒಡೆದು ಬಿಟ್ಟೀಯ’ ಅಂತ ತಮಾಷೆ ಮಾಡೋರು. ಮುಂದೆ ನಾನು ಧಾರವಾಡಕ್ಕೆ ಬಿ.ಕಾಂ ಪದವಿ ಕಲಿಯಲು ಹೋಗಬೇಕಾಯ್ತು. ನನ್ನ ಅದೃಷ್ಟಕ್ಕೆ ಪುರಾಣಿಕಮಠ ಅವರಿಗೆ ಧಾರವಾಡ ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿ ಕೆಲಸ ಸಿಕ್ತು. ಹೀಗಾಗಿ ಅವರ ಮನೆಗೇ ಹೋಗಿ ಸಂಗೀತ ಕಲಿಯುತ್ತಿದ್ದೆ. ಒಮ್ಮೆ ಅವರು ಹಿಂದೂಸ್ತಾನಿ ಸಂಗೀತ ದಿಗ್ಗಜ ಪಂಡಿತ ಬಸವರಾಜ ರಾಜಗುರು ಅವರನ್ನು ಪರಿಚಯಿಸಿ, ‘ಈ ಹುಡುಗ ಅಗ್ದಿ ಚೊಲೊ ಹಾಡ್ತಾನ, ಇವ್ನಿಗೆ ಇನ್ಮುಂದೆ ನೀವು ಕಲಿಸ್ರಿ’ ಎಂದರು. ಅಲ್ಲಿಂದ ನನ್ನ ಸಂಗೀತ ಬದುಕಿಗೆ ಹೊಸ ತಿರುವು ಸಿಕ್ಕಿದ ಹಾಗಾಯ್ತು.
ಪಂಡಿತ ಬಸವರಾಜ ರಾಜಗುರು ಅವರ ಗರಡಿಯಲ್ಲಿ ಪಳಗಿದ ನಿಮಗೆ ಅವರ ಆದರ್ಶಗಳು ಪ್ರಭಾವಿಸಿದ ಪರಿ ಹೇಗೆ?
ಹಿಂದೂಸ್ತಾನಿ ಸಂಗೀತ ಕಿರಾಣ, ಪಟಿಯಾಲ ಹಾಗೂ ಗ್ವಾಲಿಯರ್ ಘರಾಣೆಯಲ್ಲಿ ಹಾಡುತ್ತಿದ್ದ ಪಂಡಿತ ಬಸವರಾಜ ರಾಜಗುರು ಎಂದರೆ ಅವರು ಸಾಧನೆಯ ಶಿಖರ. ಬಹಳ ಕಟ್ಟುನಿಟ್ಟಿನ ವ್ಯಕ್ತಿ, ಅವರ ಶಿಷ್ಯತ್ವ ನನಗೆ ಸಿಕ್ಕಿದ್ದು ನಿಜವಾಗಿಯೂ ಅದೃಷ್ಟವೆಂದೇ ಹೇಳಬೇಕು. ಅವರ ಕಲಿಸುವಿಕೆ ಹೇಗೆ ಎಂದರೆ ಸಂಗೀತ ಕಲಿಸಿದ್ದು ಹಾಡಲು ಬರದೇ ಇದ್ದರೆ ಅವರು ಬಿಡುವವರೇ ಅಲ್ಲ. ಕಾಂಪ್ರೊಮೈಸ್ ಅನ್ನೋದು ಇಲ್ಲವೇ ಇಲ್ಲ. ಅವರದೇ ಘರಾಣೆಯಲ್ಲಿ ನಾನೂ ಹಾಡುವುದು, ಅವರ ಎಷ್ಟೋ ಕಛೇರಿಗಳಿಗೆ ನಾನು ತಂಬೂರ ನುಡಿಸಿದ್ದೀನಿ, ಸಹಗಾಯನ ಮಾಡಿದ್ದೀನಿ. ಅವರೊಂದಿಗೆ ಕಛೇರಿಯಲ್ಲಿ ಕೂರೋದೇ ಒಂದು ಪಾಠ ಅಂತ ಅನಿಸುತ್ತಿತ್ತು. ಅವರು ಬೆಳಿಗ್ಗೆ ರಿಯಾಜ್ ಮಾಡುವಾಗ ನಾನು ತಪ್ಪದೇ ಹೋಗಿ ತಂಬೂರ ನುಡಿಸುತ್ತಿದ್ದೆ. ಆಗ ತಬಲಾ ವಾದಕರನ್ನೂ ಕರೆಸುತ್ತಿದ್ದರು, ಬೆಳಿಗ್ಗೆ 6ರಿಂದ 8.30ರವರೆಗೂ ರಿಯಾಜ್ ಇರ್ತಿತ್ತು. ಅದು ಒಂದು ರೀತಿಯ ಲೈವ್ ಪ್ರೋಗ್ರಾಂ ತರನೇ ಆಗ್ತಿತ್ತು. ಸಂಗೀತಗಾರರನ್ನು ತಯಾರು ಮಾಡುವ ಪರಂಪರೆ ಅಂದರೆ ಹೀಗೆ. ಶಿಷ್ಯರಲ್ಲಿ ಟ್ಯಾಲೆಂಟ್–ಕಮಿಟ್‌ಮೆಂಟ್ ಇದ್ದರೆ ಮಾತ್ರ ಅವರ ಬಳಿ ಅವಕಾಶ.
ಗುರುಗಳೊಂದಿಗೆ ಒಡನಾಟ ಶಿಷ್ಯಂದಿರಿಗೆ ಎಂದಿಗೂ ಪುಳಕವೇ. ನಿಮ್ಮ–ಗುರುಗಳ ಅನ್ಯೋನ್ಯತೆ ಹೇಗಿತ್ತು?
ಶಿಸ್ತಿನಿಂದ ಅಭ್ಯಾಸ ಮಾಡುವ ಶಿಷ್ಯಂದಿರನ್ನು ಗುರುಗಳು ಬಹಳ ಪ್ರೀತಿಸೋರು. ಒಮ್ಮೆ ಅವರಿಗೆ ದೆಹಲಿಯಲ್ಲಿ ಸಂಗೀತ ಕಛೇರಿ ಇತ್ತು. ನನ್ನನ್ನೂ ಕರ್ಕೊಂಡ್ ಹೋಗಿದ್ರು. ಸಂಜೆ ಕಛೇರಿ ಮುಗಿಸಿಕೊಂಡು ರೂಂಗೆ ಬಂದೆವು. ಆಗಲೇ ಅವರು ಮರುದಿನ ‘ದೆಹಲಿ ದರ್ಶನ’ ಮಾಡಿಸುವ ಬಸ್ ಟಿಕೆಟ್ ತಂದು ಕೊಟ್ರು. ‘ನಾಳೆ ನೀನು ಇಡೀ ಡೆಲ್ಲಿ ನೋಡ್ಕೊಂಡು ಬರ್ಬೇಕು. ಇಗೋ ಇಲ್ಲಿದೆ ಟಿಕೆಟ್, ತಗೊ’ ಅಂದ್ರು. ಆಗ ನಾನು ‘ಗುರುಗಳೇ, ನನಗೆ ಪರೀಕ್ಷೆ ಇದೆ, ನಾನು ನಾಳೆ ಧಾರವಾಡಕ್ಕೆ ಹೋಗಬೇಕು ಅಂದೆ. ಆಗ ‘ಯಾವ ಪರೀಕ್ಷೆ?’ ಅಂತ ಕೇಳಿದ್ರು. ‘ಬಿ.ಕಾಂ ಪರೀಕ್ಷೆ’ ಅಂದೆ. ‘ಬಿ.ಕಾಂ ರಗಡ್ ಮಂದಿ ಮಾಡ್ತಾರ, ಸಂಗೀತ ಕಲಿಯೋರು ಕಡಿಮೆ, ನೀನು ಡೆಲ್ಲಿ ಸುತ್ತಿ ನೋಡಿಕೊಂಡೇ ಹೋಗಬೇಕು’ ಅಂದ್ರು. ಅಷ್ಟು ಅಭಿಮಾನ, ಪ್ರೀತಿ ಅವರಿಗೆ ನನ್ನ ಮೇಲೆ.
ಮುಂಡಗೋಡದಲ್ಲಿ ಸರ್ಕಾರಿ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿದ್ದ ನೀವು, ಬೆಂಗಳೂರಿಗೆ ಬಂದು ಸಂಗೀತದಲ್ಲಿ ಭದ್ರವಾಗಿ ನೆಲೆಯೂರಿದ್ದು ಹೇಗೆ?
ಇದು ಸುಮಾರು 70ರ ದಶಕ. ಆಗ ನಾನು ಉತ್ತರ ಕನ್ನಡ ಜಿಲ್ಲೆ ಮುಂಡಗೋಡದಲ್ಲಿದ್ದೆ. ಕಲಿಕೆ ಮುಗಿದ ಬಳಿಕ ಅಲ್ಲೇ ಸರ್ಕಾರಿ ಕಾಲೇಜಿನಲ್ಲಿ ಸಂಗೀತ ಶಿಕ್ಷಕನಾಗಿದ್ದೆ. ಧಾರವಾಡದಲ್ಲಿ ನನ್ನ ಗುರುಗಳ ಬಳಿ ಸಂಗೀತ ಕಲಿಕೆಯನ್ನು ಅವರ ನಿಧನದ ವರ್ಷ (1991)ದವರೆಗೂ ಕಲಿತೆ. ಅದಾಗಿ ಒಮ್ಮೆ ನನ್ನ ಸಂಗೀತ ಕಛೇರಿಗೆ ಆಗಿನ ಮುಖ್ಯಮಂತ್ರಿಗಳಾಗಿದ್ದ ಎಸ್. ಬಂಗಾರಪ್ಪ ಅವರು ಬಂದಿದ್ರು. ಕಛೇರಿ ಬಳಿಕ ನನ್ನನ್ನು ಮಾತಾಡಿಸಿ, ‘ನೀವು ಬೆಂಗಳೂರಿಗೆ ಯಾಕೆ ಬರಬಾರದು?’ ಅಂದ್ರು. ‘ನೀವು ಕರೆಸಿಕೊಳ್ಳೋದಾದರೆ ಬರುವೆ’ ಎಂದೆ. ಹೀಗೆ ಬಂಗಾರಪ್ಪ ಅವರಿಂದಲೇ ನಾನು 1992ರಲ್ಲಿ ಬೆಂಗಳೂರಿಗೆ ಬರುವಂತಾಯಿತು. ಇಲ್ಲೇ ಸಂಗೀತ ಅಕಾಡೆಮಿ ಶುರು ಮಾಡಿದೆ. ಕಛೇರಿ, ಕ್ಲಾಸ್‌ಗಳಲ್ಲಿ ತೊಡಗಿಕೊಂಡೆ. ಬಂಗಾರಪ್ಪ ಅವರಿಗೆ ಶಾಸ್ತ್ರೀಯ ಸಂಗೀತ ಅಂದ್ರೆ ಭಾಳ ಪ್ರೀತಿ. ರಾತೋ ರಾತ್ರಿ ವಿಮಾನ ಹತ್ತಿ ಪುಣೆಯ ಸವಾಯ್ ಗಂಧರ್ವ ಉತ್ಸವಕ್ಕೆ ಹೋಗಿ ಸಂಗೀತ ಕೇಳೋರು.
ಒಮ್ಮೆ ಸೊರಬದಲ್ಲಿ ಸಂಗೀತ ಕಛೇರಿ ಇತ್ತು. ಅಲ್ಲಿಗೆ ಬಂಗಾರಪ್ಪ ಅವರು ಸಂಗೀತ ಕೇಳೋದಕ್ಕೆ ಅಂತ ಬಂದಿದ್ರು. ವೇದಿಕೆಯ ಮುಂಭಾಗದಲ್ಲಿ ನನ್ನ ಪಕ್ಕ ಬಂದು ಕುಳಿತ್ರು. ಅಷ್ಟೊತ್ತಿಗೆ ಸಂಘಟಕರು ಒಂದು ಸಿಂಹಾಸನದಂತಿರುವ ದೊಡ್ಡ ಕುರ್ಚಿಯನ್ನು ತಂದು ಬಂಗಾರಪ್ಪ ಅವರನ್ನು ಕುಳಿತುಕೊಳ್ಳುವಂತೆ ವಿನಂತಿಸಿದ್ರು. ಆಗ ಅವರು, ‘ಕೊಂಡೋಗಿ ಇದನ್ನ ಆಚೆ, ನನಗೆ ಸಿಂಹಾಸನ ಬೇಡ’ ಅಂದ್ರು. ಆಮೇಲೆ ಇವರಿಗೆ ತಿನ್ನಲು ಹಣ್ಣುಹಂಪಲು ತಂದು ಕೊಟ್ಟಾಗಲೂ ‘ನನಗೀಗ ಏನೂ ಬೇಡ, ನಾನು ಸಂಗೀತ ಕೇಳಬೇಕು’ ಅಂತ ಹೇಳಿದ್ರು. ಇದು ಅವರ ಸಂಗೀತದ ಪ್ರೀತಿಯನ್ನು ತೋರಿಸುತ್ತೆ. ಸಂಗೀತವನ್ನು ಇಷ್ಟೊಂದು ಇಷ್ಟಪಡುತ್ತಿದ್ದ ರಾಜಕಾರಣಿಯನ್ನು ನಾನು ಜೀವಮಾನದಲ್ಲಿ ನೋಡಿದ್ದು ಇವರನ್ನು ಮಾತ್ರ.
ನಿಮ್ಮ ಗುರುಗಳ ಹೆಸರಿನಲ್ಲಿ ‘ರಾಜಗುರು ಸ್ಮೃತಿ’ ಸಂಗೀತೋತ್ಸವ ಪ್ರತಿವರ್ಷ ಏರ್ಪಡಿಸುತ್ತಾ ಬಂದಿರುವ ನಿಮ್ಮ ಸಂಗೀತದ ಇನ್ನಿತರ ಚಟುವಟಿಕೆಗಳೇನು?
ಗುರುಗಳ ಹೆಸರಿನಲ್ಲಿ ಬೆಳಗಿನ ರಾಗಗಳನ್ನು ಕೇಳುವ ಸಲುವಾಗಿ ‘ರಾಜಗುರು ಸ್ಮೃತಿ’ ಕಛೇರಿಗಳನ್ನು ಆಯೋಜಿಸುತ್ತಾ ಬಂದೆ. ‘ಸುರ್ ಪ್ರಭಾತ್’ ಎಂಬ ವಾರ್ಷಿಕ ಸಂಗೀತ ಸಮಾರೋಹ ಹಾಗೂ ‘ಪರಂಪರಾ’ ಎಂಬ ಮತ್ತೊಂದು ಕಾರ್ಯಕ್ರಮ... ಒಟ್ಟು ಮೂರು ವೈವಿಧ್ಯಮಯ ಕಛೇರಿಗಳನ್ನು ಆಯೋಜಿಸುತ್ತೇನೆ. ಸತತವಾಗಿ ಬೈಠಕ್ ಮಾಡ್ತೀನಿ. ಮಕ್ಕಳಿಗೆ ಮುಂದಿನ ಪೀಳಿಗೆಗಾಗಿ ‘ರಾಗ–ಅನುರಾಗ’ ಎಂಬ ಆಲ್ಬಂ ಅನ್ನು ಮೂರು ಆವೃತ್ತಿಯಲ್ಲಿ ಹೊರತಂದಿದ್ದೇನೆ.
ಸಂಗೀತದಲ್ಲಿ ಗುರು–ಶಿಷ್ಯ ಪರಂಪರೆ ಎಂದರೆ ಅದಕ್ಕೆ ವಿಶೇಷ ಆದ್ಯತೆ. ‘ಗುರು–ಶಿಷ್ಯ’ ಪರಂಪರೆಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?
ಸಂಗೀತದಲ್ಲಿ ಹಿಂದಿನ ಗುರು– ಶಿಷ್ಯ ಪರಂಪರೆಯನ್ನು ಈಗಿನ ವಿದ್ಯಮಾನಕ್ಕೆ ಹೋಲಿಸುವ ಹಾಗೆಯೇ ಇಲ್ಲ. ಹಿಂದೆ ಸಂಗೀತವನ್ನು ಗಂಭೀರವಾಗಿ ಅಭ್ಯಾಸ ಮಾಡೋರು. ಈಗ ಶಾಸ್ತ್ರೀಯ ಸಂಗೀತವನ್ನು ಸೀರಿಯಸ್ ಆಗಿ ಕಲಿಯುವವರು 50ರಲ್ಲಿ ಕೇವಲ ನಾಲ್ಕೇ ನಾಲ್ಕು ಜನ. ನಾನಂತೂ ‘ಪರಮೇಶ್ವರ ಹೆಗಡೆ ಸಂಗೀತ ಅಕಾಡೆಮಿ’ ಸ್ಥಾಪಿಸಿ ಹಳೆಯ ಸಂಪ್ರದಾಯದ ಕಲಿಕೆ ಕಲಿಸುವಿಕೆಯನ್ನು ಮುಂದುವರಿಸಿದ್ದೀನಿ. ಹಿಂದೆ ಸಂಗೀತ ಕಲಿಯುವಾಗ ಗುರುಗಳ ಕೈಲಿ ಚೆನ್ನಾಗಿ ಬೈಸಿಕೊಳ್ತಾ ಇದ್ವಿ. ಈಗಿನವರಿಗೆ ಬೈದರೆ ಸಿಟ್ಟು ಬರುತ್ತೆ. ಮತ್ತೆ ಕ್ಲಾಸಿಗೇ ಬರಲ್ಲ. ಆದರೆ ನಾನು ಮಾತ್ರ ಶಿಷ್ಯ ಸರಿಯಾಗಿ ಕಲಿಯದೇ ಹೋದ್ರೆ ಬೈಯುವವನೇ. ಹೀಗಾಗಿ ಈಗ ಸಂಗೀತದಲ್ಲಿ ‘ಗಟ್ಟಿಕಾಳು’ ಸಿಗೋದು ಬಾರೀ ಅಪರೂಪವಾಗಿ ಬಿಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.