ಮುಸ್ಸಂಜೆಯ ಸೊಬಗಿಗೆ ಸಂಗೀತದ ಸಾಥಿ ಎಂದಿಗೂ ಆಪ್ಯಾಯಮಾನವೇ. ಪ್ರಜಾವಾಣಿ ಆಯೋಜಿಸಿದ ದಸರಾ ಸಂಗೀತ ಮಹೋತ್ಸವದಲ್ಲಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮೂರೂ ದಿನಗಳೂ ವೈವಿಧ್ಯಮಯ ಸಂಗೀತ ಕಛೇರಿಗಳು ನಡೆದು ನಾದ ಭಾಷ್ಯ ಬರೆಯಿತು. ಹಫೀಜ್ ಬಾಲೇಖಾನ್ ಅವರ ದಾಸವಾಣಿ, ಶರಣವಾಣಿ, ಆನೂರು ಅನಂತಕೃಷ್ಣ ಶರ್ಮ ತಂಡದವರ ಲಯಲಹರಿ, ಪ್ರೊ. ಕೆ.ಇ.ರಾಧಾಕೃಷ್ಣ ನೇತೃತ್ವದ ತಾಳಮದ್ದಳೆ ತಂಡ ಹಾಗೂ ಪಂ. ಪರಮೇಶ್ವರ ಹೆಗಡೆ ಅವರ ಹಿಂದೂಸ್ತಾನಿ ಗಾಯನ ವಿಶಿಷ್ಟ ಅನುಭೂತಿ ಸೃಷ್ಟಿಸಿತ್ತು.
ದಾಸವಾಣಿ, ಶರಣವಾಣಿ
ಧಾರವಾಡದ ಸಂಗೀತ ಪರಂಪರೆಯ ಗಾಯಕ, ಕಿರಾಣಾ ಘರಾಣೆಯಲ್ಲಿ ಹಾಡುವ ಉಸ್ತಾದ್ ಹಫೀಜ್ ಬಾಲೇಖಾನ್ ಅವರು ಶರಣವಾಣಿ, ದಾಸವಾಣಿ ಮೂಲಕ ಕೇಳುಗರನ್ನು ಭಕ್ತಿರಸದಲ್ಲಿ ತೇಲುವಂತೆ ಮಾಡಿದರು.ಕಛೇರಿಯ ಆರಂಭದಲ್ಲಿ ಪುರಂದರದಾಸರ ‘ತೇಲಿಸೋ ಇಲ್ಲ ಮುಳುಗಿಸೋ’ ಕೃತಿ ಅಲೆಅಲೆಯಾಗಿ ತೇಲಿಬಂತು. ಪಂ. ಶ್ರೀನಿವಾಸ ಜೋಶಿ ಸಂಗೀತ ಸಂಯೋಜಿಸಿದ ಈ ಕೃತಿಯಲ್ಲಿ ಸಂಪೂರ್ಣ ಸಮರ್ಪಣಾ ಭಾವವೇ ಅಡಗಿದೆ. ಮುಂದೆ ಅಲ್ಲಮಪ್ರಭು ಅವರ ‘ಅರಿಯದ ಕಾರಣ....’ ಪುರಂದರ ದಾಸರ ದೇವರನಾಮ ‘ನೀನೆ ಗತಿ, ನೀನೇ ಮತಿ ...’ ರಚನೆಯನ್ನು ತಾಳ ದಾದ್ರಾದೊಂದಿಗೆ ಹಾಡಿದರು. ಇವರು ಹಾಡಿದ ಎಲ್ಲ ವಚನ, ದೇವರನಾಮಗಳು ಕೊರೊನಾ ಸಂಕಷ್ಟವನ್ನು ಮರೆಸುವಂತಿತ್ತು.ತಬಲಾದಲ್ಲಿ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಬಸವರಾಜ ಹಿರೇಮಠ, ತಾಳದಲ್ಲಿ ಸುಧೀಂದ್ರ ಆಚಾರ್ಯ ಸಹಕರಿಸಿದರು. ಮಾಯಾ ರಾಮನ್ ನಿರೂಪಣೆಯ ಜವಾಬ್ದಾರಿ ವಹಿಸಿದ್ದರು.
ಆಕರ್ಷಕ ಲಯ ಲಹರಿ
ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅದರಲ್ಲೂ ಲಯವಾದ್ಯದಲ್ಲಿ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮೇರು ಶಿಖರ. ಇವರು ಶನಿವಾರ ಸಂಜೆ ನಡೆಸಿಕೊಟ್ಟ ‘ತಾಳವಾದ್ಯ’ ಕಛೇರಿ ಹಬ್ಬದ ಸಂಭ್ರಮವನ್ನು ಲಯ ಲಾಸ್ಯದ ಮೂಲಕ ವಿಜೃಂಭಿಸಿತು.
ಕಛೇರಿಗೆ ಅಠಾಣ ರಾಗ, ಆದಿತಾಳದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಕೃತಿ ‘ಶ್ರೀ ಮಹಾಗಣಪತಿಂ ಭಜೇ ಹಂ...’ ಉತ್ತಮ ಮುನ್ನುಡಿ ಬರೆಯಿತು. ಫಣೀಂದ್ರ ಶರ್ಮ ಅವರ ಗಾಯನಕ್ಕೆ ಮೃದಂಗ, ಪಿಟೀಲು, ಖಂಜೀರ, ಡ್ರಮ್ಸ್.. ಇವೇ ಮುಂತಾದ ವಾದ್ಯಗಳು ಅತ್ಯದ್ಭುತವಾಗಿ ಮೇಳೈಸಿದವು. ಅದಾಗಿ ‘ವಸಂತ ಭೈರವಿ’ ರಾಗ ಆದಿತಾಳದಲ್ಲಿ ತ್ರಿಪುರ ಸುಂದರಿ ಗಾನಗಂಗೆಯ ಮೂಲಕ ಲೀಲಾಜಾಲವಾಗಿ ವಿಹರಿಸಿದಳು. ಮುಂದೆ ಮುತ್ತುಸ್ವಾಮಿ ದೀಕ್ಷಿತರ ಕಲ್ಯಾಣಿ ರಾಗ ಆದಿತಾಳದ ಕೃತಿ ರಾಗ, ಕೀರ್ತನೆ, ಕಲ್ಪನಾಸ್ವರ, ತನಿಯಾವರ್ತನ ಮೂಲಕ ಅತ್ಯಂತ ವಿಭಿನ್ನವಾಗಿ ಮೂಡಿಬಂದಿದ್ದು, ತಾಳವಾದ್ಯದ ಸವಿಯೂಟವನ್ನೇ ಬಡಿಸಿತು. ದಾಸರ ಪದ ‘ಹರಿಕುಣಿದಾ ನಮ್ಮ ಹರಿಕುಣಿದಾ...’ ತಿಲ್ಲಾನದ ಸ್ಪರ್ಶ ಪಡೆದು ನವೋಲ್ಲಾಸ ತುಂಬುವಂತೆ ಮಾಡಿತು. ಪಿಟೀಲಿನಲ್ಲಿ ವಿದ್ವಾನ್ ಎಸ್. ಯಶಸ್ವಿ, ಮೃದಂಗದಲ್ಲಿ ಆನೂರು ವಿನೋದ್ ಶ್ಯಾಮ್, ಸುನಾದ ಆನೂರು ಖಂಜೀರದಲ್ಲಿ, ಪ್ರಣವ್ ದತ್ ಡ್ರಮ್ಸ್‌ನಲ್ಲಿ ಸಹಕರಿಸಿದರು.
ರಂಜನೆಯ ‘ರಾವಣ ಮೋಕ್ಷ’
ತಾಳಮದ್ದಳೆ ಕೇಳಲು ಕರಾವಳಿ ಭಾಗಕ್ಕೇ ಹೋಗಬೇಕು ಎಂಬ ಮಾತನ್ನು ಹುಸಿಯಾಗಿಸಿದ್ದು ಭಾನುವಾರ ಸಂಜೆ ‘ಪ್ರಜಾವಾಣಿ’ ನವರಾತ್ರಿ ಸಂಗೀತೋತ್ಸವದಲ್ಲಿ ತಾಳಮದ್ದಳೆಯ ಪ್ರಸಂಗ ‘ರಾವಣ ಮೋಕ್ಷ’. ಮನವನ್ನು ಧೀಂಗಣಗೊಳಿಸಿದ ತಾಳಮದ್ದಳೆ, ರಂಗಸ್ಥಳವಿಲ್ಲದಿದ್ದರೂ ಯಕ್ಷಗಾನದ ಮತ್ತೊಂದು ಸ್ವರೂಪವನ್ನು ಮನೆಯಲ್ಲಿಯೇ ಕುಳಿತು ಆಸ್ವಾದಿಸುವಂತಾಯಿತು.
ಹಿಮ್ಮೇಳದಲ್ಲಿ ವಿಷ್ಣುಪ್ರಸಾದ ಕಲ್ಲೂರಾಯರ ಭಾಗವತಿಕೆ ತಲೆದೂಗುವಂತಿದ್ದರೆ, ಅಮೋಘ ಕುಂಟಿನಿ ಅವರ ಮದ್ದಳೆ ಹಾಗೂ ಅವಿನಾಶ್ ಬೈಪಡಿತ್ತಾಯ ಅವರ ಚೆಂಡೆ ಸಾಥಿ ಲಯಲಾಸ್ಯವಾಡಿದವು. ಮುಮ್ಮೇಳದಲ್ಲಿ ರಾಮ–ರಾವಣರ ಯುದ್ಧದ ಸನ್ನಿವೇಶದ ಸಂಭಾಷಣೆ ಹಾಗೂ ಕೊನೆಯಲ್ಲಿ ರಾವಣ ರಾಮನಿಗೆ ಶರಣಾಗಿ ಮೋಕ್ಷ ಪಡೆಯುವ ಪರಿ ಅರ್ಥಧಾರಿಗಳಾದ ಪ್ರೊ.ಕೆ.ಇ. ರಾಧಾಕೃಷ್ಣ, ಸುಧನ್ವ ದೇರಾಜೆ, ಡಾ. ಬಾಲಕೃಷ್ಣ ಶೆಟ್ಟಿ, ಶಶಾಂಕ ಅರ್ನಾಡಿ ಅವರಿಂದ ಅಮೋಘವಾಗಿ ಮೂಡಿಬಂತು.
ಗಮನಸೆಳೆದ ಗಾಯನ
ಪಂ. ಪರಮೇಶ್ವರ ಹೆಗಡೆ ಅವರು ಹೊನ್ನಾವರದ ಕಲಬಾಗ್‌ನಲ್ಲಿ ಕುಳಿತು ಹಾಡಿದ ಹಿಂದೂಸ್ತಾನಿ ಗಾಯನ ಮುಸ್ಸಂಜೆಗೆ ಮುದ ನೀಡಿತು. ಮೊದಲಿಗೆ ರಾಗ ‘ದುರ್ಗಾ’ವನ್ನು ಆಲಾಪದೊಂದಿಗೆ ಪ್ರಸ್ತುತಪಡಿಸಿ ಆಕರ್ಷಕ ಸ್ವರತಾನ್‌ಗಳನ್ನೂ ಸೇರಿಸಿದರು.
‘ನಾದ ಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲಯ್ಯ... ಬಸವಣ್ಣನವರ ವಚನ ಸುಶ್ರಾವ್ಯವಾಗಿ ಮೂಡಿಬಂತು. ಮುಂದೆ ಮುಪ್ಪಿನ ಷಡಕ್ಷರಿ ಅವರ ರಚನೆ ‘ಸಕಲಕ್ಕೆಲ್ಲಕ ನೀನೆ ಅಕಳಂಕ ಗುರುವೆಂದು..’, ‘ಹಾಡುವೆನಲ್ಲದೆ ಬೇಡುವೆನಲ್ಲ...’ ಎಂಬ ಹಾಡುಗಳೂ ಸೊಗಸಾದ ಅನುಭವ ನೀಡಿದವು. ‘ಸ್ವಾಮಿ ನೀನು ಶಾಶ್ವತ ನೀನು...’ ಬಸವಣ್ಣನವರ ವಚನವನ್ನು ಭಾವಪೂರ್ಣವಾಗಿ ಹಾಡಿದರು. ಗುರುಪ್ರಸಾದ ಹೆಗಡೆ ತಬಲಾ, ಗೌರೀಶ ಯಾಜಿ ಸಂವಾದಿನಿಯಲ್ಲಿ ಉತ್ತಮ ಸಾಥ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.