ಮಂಗಳೂರಿನ ಕಲಾಶಾಲೆ ಹಾಗೂ ಸ್ವರಾಲಯ ಸಾಧನಾ ಪ್ರತಿಷ್ಠಾನ ಆಯೋಜಿಸಿದ್ದ ‘ಸ್ವರ ಸಂಕ್ರಾಂತಿ ಉತ್ಸವ’ದಲ್ಲಿ ಪ್ರಸ್ತುತಗೊಂಡ ‘ರಸ ಬೈ ರಾಗ’ದಲ್ಲಿ ತಲ್ಲೀನರಾಗಿರುವ ರಂಜನಿ ಮತ್ತು ಗಾಯತ್ರಿ
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್.
ಷಡಜ್ ನೆ ಪಾಯ ಯೇ ವರದಾನ್...ಕೋಯಿ ಭೀ ಸ್ವರ್ ಸ ತೆಹರಾ ಕರ್ ಗಾಲೊ ಚತುರ್ ಸುಜಾನ್... ಜೇಸುದಾಸ್ ಕಂಠದಲ್ಲಿ ಮಾಧುರ್ಯ ಪಡೆದ, ‘ತಾನ್‌ಸೇನ್’ ಚಿತ್ರದ ಈ ಹಾಡನ್ನು ಲಕ್ಷಣಗೀತೆಯೆಂದೇ ಪರಿಗಣಿಸುವುದುಂಟು. ಸಪ್ತಸ್ವರಗಳ ಆದಿ, ಷಡ್ಜದ ಸ್ಥಾನದಲ್ಲಿ ಬೇರೊಂದು ಸ್ವರವನ್ನು ಇರಿಸಿದರೆ ಸೃಷ್ಟಿಯಾಗುವ ರಾಗಗಳನ್ನು ಪರಿಚಯಿಸುವ ಈ ಹಾಡಿನಲ್ಲಿ ಬಿಲಾವಲ್, ಕಾಫಿ, ಭೈರವಿ, ಯಮನ್ ಕಲ್ಯಾಣ್, ಖಮಾಜ್, ಅಸಾವರಿ, ಬಹಾರ್ ಮತ್ತು ದರ್ಬಾರಿ ರಾಗಗಳ ಮಾಲಿಕೆ ಸೃಷ್ಟಿಯಾಗಿದೆ.
ಇದೇ ರೀತಿ ಷಡ್ಜದ ಕಥೆ ಹೇಳುತ್ತ ಶ್ರೋತೃಗಳು ರಸಗಡಲಲ್ಲಿ ಮುಳುಗೇಳುವಂತೆ ಮಾಡುತ್ತಿದ್ದಾರೆ ಚೆನ್ನೈನ ರಂಜನಿ ಮತ್ತು ಗಾಯತ್ರಿ ಸಹೋದರಿಯರು. ಕರ್ನಾಟಕ ಸಂಗೀತ ಗಾಯಕಿಯರೂ ವಯಲಿನ್ ವಾದಕಿಯರೂ ಅಗಿರುವ ಈ ಸಹೋದರಿಯರು ಹಿಂದುಸ್ತಾನಿ ಸಂಗೀತದ ಛಾಯೆಯನ್ನೂ ಸೂಸುವ ವಿಶಿಷ್ಟ ಸಂಯೋಜನೆಗಳ ಮೂಲಕ ಸಂಗೀತಪ್ರಿಯರ ಹೃದಯ ಗೆದ್ದಿದ್ದಾರೆ. ಇಂಥ ಪ್ರಯೋಗಗಳಲ್ಲಿ ಒಂದಾಗಿರುವ ‘ರಸ ಬೈ ರಾಗ’ದ ಏಳನೇ ಕಾರ್ಯಕ್ರಮ ಈ ಬಾರಿಯ ಸಂಕ್ರಾಂತಿಯಂದು ಮಂಗಳೂರಿನ ಸಹೃದಯರ ಮನಕ್ಕೆ ಲಗ್ಗೆ ಇರಿಸಿತು.
ಕಲಾಶಾಲೆ ಮತ್ತು ಸ್ವರಾಲಯ ಸಾಧನ ಪ್ರತಿಷ್ಠಾನದ ಸ್ವರ ಸಂಕ್ರಾಂತಿ ಉತ್ಸವದ ಈ ಕಛೇರಿ ಶಾಸ್ತ್ರೀಯ, ಜನಪದ ಮತ್ತು ಜನಪ್ರಿಯ ಸಂಗೀತವನ್ನು ಪ್ರಯೋಗಕ್ಕೆ ಒಡ್ಡಿದ ಪರಿ ಬೆರಗು ಮೂಡಿಸಿತು. ಸಂಪ್ರದಾಯದ ಚೌಕಟ್ಟಿನಲ್ಲೇ ಮುದ ನೀಡುತ್ತ ಸ್ವರಗಳು ಮತ್ತು ರಾಗಗಳ ವೈಭವವನ್ನೂ ಸಾರಿದ ಕಾರ್ಯಕ್ರಮದಲ್ಲಿ ಶ್ರೋತೃಗಳು ಗಳಿಸಿದ ಅನುಭವ ವಿಭಿನ್ನ.
ರಾಗವೊಂದರ ಸುತ್ತ ಷಡ್ಜದ ವಿಲಾಸ, ಭಿನ್ನ ರಾಗಗಳ ಪ್ರಸ್ತುತಿಗೆ ನೆರವಲ್, ತನಿಯಾವರ್ತನಂ, ಕೊನ್ನಕೋಲ್ ಮುಂತಾದವುಗಳ ಅಲಂಕಾರ, ರಾಗಗಳ ಆಳ–ವೈವಿಧ್ಯವನ್ನು ಪರಿಚಯಿಸುವುದು ‘ರಸ ಬೈ ರಾಗ’ದ ಪ್ರಮುಖ ಅಂಗ. ಇಂಥ ಪ್ರಯೋಗಗಳು ಕಛೇರಿಯುದ್ದಕ್ಕೂ ‘ಮೆಡ್ಲೆ’ ರೂಪದಲ್ಲಿ ಸಾಗುವಾಗ ಶ್ರೋತೃಗಳು ರೋಮಾಂಚನ ಅನುಭವಿಸುತ್ತಾರೆ.
ಮನಸ್ಸನ್ನು ಉಲ್ಲಾಸಗೊಳಿಸುವ ಗಂಭೀರ ನಾಟ ರಾಗದ ‘ಜ್ಞಾನ ವಿನಾಯಕನೇ ಶರಣಂ’ ತಮಿಳು ಕೃತಿಯ ಮೂಲಕ ಗಾಯನಕ್ಕೆ ಗಾಯತ್ರಿ ನಾಂದಿ ಹಾಡಿದರು. ಸಂಸ್ಕೃತದ ‘ಶ್ರೀ ವಿಘ್ನ ರಾಜಂ ಭಜೇ’ ಮೂಲಕ ರಂಜನಿ ಸೇರಿಕೊಳ್ಳುವುದರೊಂದಿಗೆ ಕಛೇರಿ ಕಳೆಕಟ್ಟಿತು. ಎರಡೂ ಕೃತಿಗಳ ‘ನಡೆ’ ಭಿನ್ನ. ಆದರೆ ದಕ್ಕುವ ಅನುಭವ ಒಂದೇ. ವಯಲಿನ್‌ನಲ್ಲಿ ವಿಠ್ಠಲ್ ರಂಗನ್, ಮೃದಂಗದಲ್ಲಿ ಸಾಯಿ ಗಿರಿಧರ್ ಮತ್ತು ಘಟಂನಲ್ಲಿ ಎಸ್.ಕೃಷ್ಣ ಆರಂಭದಲ್ಲೇ ಲಾಸ್ಯ ತುಂಬಿದರು.
ರಾಗಾಲಾಪದಿಂದ ಕೊನ್ನಕೋಲ್ ವರೆಗೆ
ರಾಗ (ರಂಜನಿ–ಗಾಯತ್ರಿ) ಜೋಡಿ ಕಚೇರಿಯ ಮುಖ್ಯ ಭಾಗವನ್ನು ನಾಲ್ಕು ಪ್ರಸ್ತುತಿಯ ನಂತರ ಮುಂದಿಟ್ಟರು. ರಾಗಾಲಾಪನ, ನೆರವಲ್, ಕಲ್ಪನಾ ಸ್ವರ, ಚಿಟ್ಟಸ್ವರ, ತನಿಯಾವರ್ತನಂ ಮತ್ತು ಕೊನ್ನಕೋಲ್ ಒಳಗೊಂಡ ಈ ಭಾಗ ನಾಲ್ಕು ಹಂತಗಳಲ್ಲಿ ರಂಜನೀಯವಾಗಿಸಿತು.
ಬಹುಧಾರಿ ರಾಗದಲ್ಲಿ ‘ಭ್ರೋವ ಬಾರಮ..’ಕ್ಕೆ ಪ್ರವೇಶಿಸುವ ಮೊದಲು ಸುದೀರ್ಘ ಆಲಾಪ. ಸರಸ್ವತಿ ಮನೋಹರಿ ರಾಗದ ‘ಎಂತವೇದುಕೋ..’ದಲ್ಲಿ ನೆರವಲ್‌ನ ಆಮೋದ ನೀಡುತ್ತ ಖಮಾಜ್ ರಾಗದತ್ತ ವಾಲಿದ ಸಹೋದರಿಯರು ಕಲ್ಪನಾಸ್ವರವನ್ನು ಸ್ಪರ್ಶಿಸಿದಾಗ ಲಯದ ಗತಿ ಹೆಚ್ಚಿಸಿಕೊಂಡರು. ಚಿಟ್ಟಸ್ವರಗಳು ಇನ್ನಷ್ಟು ತ್ವರಿತವಾಗಿ ಪ್ರಸ್ತುತಗೊಂಡವು. ಹರಿಕಾಂಭೋಜಿಯ ಜನ್ಯರಾಗಗಳು, ತ್ಯಾಗರಾಜರ ಕೃತಿಗಳು ಮತ್ತು ದೇಶಾದಿ ತಾಳವನ್ನೇ ಬಳಸಿಕೊಂಡಿರುವುದು ಈ ಭಾಗದ ವೈಶಿಷ್ಟ್ಯ.
‘ರಸ ಬೈ ರಾಗ’ಕ್ಕೆ ಜನಪದದ ಸ್ಪರ್ಶವೂ ಇತ್ತು. ಮುತ್ತುಮಾರಿಯಮ್ಮನ ಹಾಡು ಅರಂಭವಾಗುತ್ತಿದ್ದಂತೆ ವಾದ್ಯಗಳ ಶೈಲಿಯೂ ಬದಲಾಗಿ ಜನಪದ ಸಂಗೀತದ ಛಾಯೆ ಮೂಡಿತು. ಮಾದಪ್ಪನ ಹೊಗಳುವ ‘ಸೋಜುಗದ ಸೂಜುಮಲ್ಲಿಗೆ..’ ಮತ್ತು ‘ರಾಮ್ ರತನ್ ಮನ್...’ ಮುಂತಾದ ಹಾಡುಗಳು ಕರ್ನಾಟಕ ಸಂಗೀತದ ಹೊಸ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿದವು.
ಗೃಹಭೇದದಲ್ಲಿ ಷಡ್ಜದ ನೋಟ
‘ರಸ ಬೈ ರಾಗ’ದ ಇನ್ನೊಂದು ಪ್ರಮುಖ ಘಟ್ಟ ಗೃಹಭೇದಂ. ‘ರಾಗ’ ಜೋಡಿ ಇದನ್ನು ಕಚೇರಿಯ ಮೊದಲೆರಡು ಕೃತಿಗಳ ನಂತರ ಪ್ರಸ್ತುತಪಡಿಸಿದರು. ಇದು ಕೂಡ ಅಧ್ಯಯನದ ಮೂಲಕ ಮೂಡಿಬಂದದ್ದು. ಒಂದು ಸ್ವರದ ಸ್ಥಾನದಲ್ಲಿ ಬೇರೊಂದು ಸ್ವರವನ್ನು ಇರಿಸಿ ರಾಗವನ್ನು ಬದಲಿಸುವ ಗೃಹಭೇದಂ ತಂತ್ರದಲ್ಲಿಈ ಜೋಡಿ ಷಡ್ಜದ ಸುತ್ತ ಹಲವು ರಾಗಗಳನ್ನು ಪರಿಚಯಿಸಿದರು.
ಪೂರ್ವಿ ಅಥವಾ ಹಂಸಾನಂದಿ ರಾಗದಲ್ಲಿ ವೈದ್ಯನಾಥ ಭಾಗವತರ ತಿಲ್ಲಾನ ಆರಂಭಿಸಿದ ಜೋಡಿ ಷಡ್ಜದ ಸ್ಥಾನದಲ್ಲಿ ಋಷಭವಿರಿಸಿ ಹಿಂದೋಳಕ್ಕೆ ತಲುಪಿದರು. ಸುಪರಿಚಿತ ಕೃತಿ ‘ಸಾಮಜ ವರಗಮನ’ ಮನಮುದಗೊಳಿಸಿತು. ಶುದ್ಧಸಾವೇರಿ ಅಥವಾ ದುರ್ಗಾದಲ್ಲಿ ‘ಜಯ ಜಯ ದುರ್ಗೆ...’ ಬಂದಿಶ್, ಶುದ್ಧ ಧನ್ಯಾಸಿಯಲ್ಲಿ ‘ಸುಬ್ರಹ್ಮಣ್ಯೇನ ರಕ್ಷಿತೋಹಂ..’, ಮೋಹನದಲ್ಲಿ ಊತ್ತ್‌ಕಾಡ್ ವೆಂಕಟಸುಬ್ಬಯ್ಯರ್ ಅವರ ‘ಸ್ವಾಗತಂ ಕೃಷ್ಣ...’, ಮಧ್ಯಮಾವತಿಯಲ್ಲಿ ಪುರಂದರದಾಸರ ‘ಭಾಗ್ಯದ ಲಕ್ಷ್ಮಿ ಬಾರಮ್ಮ...’ ಪ್ರಸ್ತುಗೊಂಡಿತು. ರಾಗಗಳೊಂದಿಗೆ ಬದಲಾಗುತ್ತಿದ್ದ ಶ್ರುತಿಯನ್ನು ಹೊಂದಿಸಿಕೊಳ್ಳಲು ಸಾಯಿ ಗಿರಿಧರ್ ಮತ್ತು ಎಸ್.ಕೃಷ್ಣ ಜಲತರಂಗದ ವಾದ್ಯಗಳಂತೆ ಲಯವಾದ್ಯಗಳ ಪುಂಜವನ್ನೇ ಸನ್ನದ್ಧಗೊಳಿಸಿದ್ದರು.
ಸಿನಿಮಾ ಹಾಡುಗಳ ಮೆಡ್ಲೆಯ ನಂತರ ತುಕಾರಾಂ ಅವರ ‘ಫಂಡರಿಚ ಭೂತ ಮೋಟೆ..’ ಅಭಂಗ್ ಚಂದ್ರಕೌನ್ಸ್ ರಾಗದಲ್ಲಿ ಮೂಡಿದಾಗ ಹಿಂದುಸ್ತಾನಿ ಕಛೇರಿಯೆಂದೇ ಭಾಸವಾಯಿತು. ಈ ನಿಂದಾಸ್ತುತಿ ಕಾರ್ಯಕ್ರಮದ ಮಂಗಳ ಹಾಡು ಕೂಡ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.