
ಕವಿತೆ
ಅಪ್ಪ ಮತ್ತು ಖಾಲಿ ಜೇಬು
ಹಬ್ಬ, ಜಾತ್ರೆ, ಲಗ್ನ–ಮಹೂರ್ತಕ್ಕೆ
ಮನೆಮಂದಿ ಸಂಭ್ರಮ ತೊಟ್ಟು,
ಸಂತೋಷ ಹರಡಿ, ಹಲ್ಲು ಕಿರಿದು
ಓಡಾಡುತ್ತಿದ್ದಾಗ—
ಅಪ್ಪ ಮಾತ್ರ
ಸಂತೋಷವನ್ನೇ ಸಾಲಕ್ಕೆ ತಂದು ನಗುತ್ತಿದ್ದ.
ಮಕ್ಕಳು ಕಾಡಿ, ಬೇಡಿ, ಹಠ ಹಿಡಿದಾಗ
ಕರಗುತ್ತಿದ್ದ ಅಪ್ಪ;
ತನ್ನ ಮೂರ್ನಾಲ್ಕು ಜೇಬಿಗೆ
ಕೈ ತುರುಕಿ,
ಖಾಲಿ ಜೇಬಿನ ದರ್ಶನ ಪಡೆದು
ಒಳಗೊಳಗೆ ಮರುಗಿ,
ಸೋತ ಹೆಜ್ಜೆಯೊಂದಿಗೆ ಹೊರನೆಡೆಯುತ್ತಿದ್ದ.
ಹಗಲೆಲ್ಲ ಮಣ್ಣಿಗೆ ಮೈ ಒಡ್ಡಿದರೂ
ಅಪ್ಪ ಚಿಗುರಲಿಲ್ಲ;
ಮಳೆ-ಬೆಳೆ ಚೆಂದವಾಗಿ ನಕ್ಕಾಗಲೂ
ಬೆಲೆ ಮಾತ್ರ ಅಪ್ಪನನ್ನು ಅಣಕಿಸುತ್ತಿತ್ತು.
ಹಸಿವು ಉಟ್ಟು, ಬಡತನ ತೊಟ್ಟು,
ಸಾಲದ ಶೂಲಕ್ಕೆ ಸಿಕ್ಕ ಅಪ್ಪ—
ಖಾಲಿ ಜೇಬಿಗೆ ಕಾಯಂ ಅತಿಥಿಯಾದ.
ಹಬ್ಬ-ಹರಿದಿನಗಳು
ಅಪ್ಪನಿಗೆ ಅನಿವಾರ್ಯ;
ಖಾಲಿ ಜೇಬು ಮಾತ್ರ
ಕೇಕೆ ಹಾಕಿ ನಗುತ್ತಿದ್ದಿತು.
ಅಪ್ಪ—
ಖುಷಿಯನ್ನು ಕಡತಂದು ಹಂಚುವವನು;
ಬದುಕಿದ್ದು ಕಡಿಮೆ ತನಗಾಗಿ,
ಬರೀ ತನ್ನವರಿಗಾಗಿ.
ಬಸವನ ಜೊತೆಗೂಡಿ
ಭೂಮತಾಯಿ ಮಡಿಲಲ್ಲಿ ಆಡಿ,
ಲೋಕದ ಹಸಿವು ನೀಗಿಸಿ,
ಸಾಗಿಬಿಟ್ಟ—
ಬರಿಗೈ ಫಕೀರನಾಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.