ADVERTISEMENT

ಕನ್ನಡಿಯೂ ಕಾಟೇರಮ್ಮನೂ

ಡಾ.ಸಿ.ಎಂ.ಗೋವಿಂದರೆಡ್ಡಿ
Published 17 ನವೆಂಬರ್ 2018, 19:45 IST
Last Updated 17 ನವೆಂಬರ್ 2018, 19:45 IST
ಚಿತ್ರ: ವಿಜಯಕುಮಾರಿ ಆರ್.
ಚಿತ್ರ: ವಿಜಯಕುಮಾರಿ ಆರ್.   

ಆಂಟಿಯು ಮನೆಯಲಿ ಒಂಟಿಯಿರುವಾಗ
ಕೈಗನ್ನಡಿ ಕೆಳಜಾರಿತ್ತು
ಒಂಟಿಮನೆಯಲ್ಲಿ ಇಂಥ ಅಪಶಕುನ
ಕೇಡೆಂದವರಿಗೆ ತೋರಿತ್ತು

ಗಂಡನ ಸಂಗಡ ಆ್ಯಂಟಿಯು ಹೊರಟಳು
ಊರಿನ ಜ್ಯೋತಿಷಿ ಬಳಿಯಲ್ಲಿ
“ಉಂಡು ಉಟ್ಟು ಬೆಳೆಯುವ ಮನೆಯಲ್ಲಿ
ಅಶುಭವೇನು?” ಕೇಳಿದರಲ್ಲಿ!

ಜ್ಯೋತಿಷಿ ಹೇಳಿದ- “ವಾಸದಮನೆಯಲಿ
ಕನ್ನಡಿ ಒಡೆವುದಮಂಗಳವು
ಬೆಳ್ಳಿಯ ಕನ್ನಡಿ ಕಾಟೇರಮ್ಮನ
ಗುಡಿಗೆ ನೀಡಿದರೆ ಮಂಗಳವು!”

ADVERTISEMENT

ಪುಟ್ಟನು ಶಾಲೆಯ ಮಾಸ್ತರ ಕೇಳಿದ-
“ಗುರುಗಳೆ, ಒಡೆದರೆ ಕನ್ನಡಿಯು
ಕಾಟೇರಮ್ಮನ ಗುಡಿಗೆ ಕನ್ನಡಿಯ
ಕೊಡಬೇಕೇತಕೆ ಈ ಪರಿಯು?”

ಗುರುಗಳು ನುಡಿದರು- “ಪುಟ್ಟಾ ಆಲಿಸು
ಹೋದರೆ ವೈದ್ಯರ ಬಳಿಯಲ್ಲಿ
ಮಾತ್ರೆಯ ತಪ್ಪದೆ ಕೊಟ್ಟೇಕೊಡುವರು
ರೋಗವು ಇರಲಿ, ಇರದಿರಲಿ!

ಹಾಗೆಯೆ ಜ್ಯೋತಿಷಿ ಬಳಿಯಲಿ ಹೋದರೆ
ಹೇಳದೆ ಇರುವರೆ ಪರಿಹಾರ?
ರೋಗವು ಮನಸಿಗೆ ಎಂದರಿತಿರುವರು
ಅವರಿಗೆ ವೃತ್ತಿಯ ವ್ಯವಹಾರ!

ಮೂಡನಂಬಿಕೆಯು ಇರುವವರೆವಿಗೂ
ಕಾಡುತಲಿರುವರು ಮೂಢರನು
ಮೌಢ್ಯವನ್ನು ಹೊರದೂಡಿದ್ದಾದರೆ
ಕಂಡುಕೊಳಬಹುದು ಸತ್ಯವನು”

ಪುಟ್ಟನು ಮನದಲಿ ವಿಚಾರ ಮಾಡಿ
ಮೌಢ್ಯವನ್ನು ಹೊರದೂಡಿದನು
ಮೂಢನಂಬಿಕೆಯ ಮೂಲೆಗೆ ತಳ್ಳಿ
ಸತ್ಯದ ದರುಶನ ಮಾಡಿದನು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.