ADVERTISEMENT

ಹಿಮಗಿರಿಯ ಕಂದರ

ಸೋಮಶೇಖರ ಸಿ.
Published 30 ನವೆಂಬರ್ 2019, 19:30 IST
Last Updated 30 ನವೆಂಬರ್ 2019, 19:30 IST
ಕಲೆ: ಸಂಜೀವ್‌ ಕಾಳೆ
ಕಲೆ: ಸಂಜೀವ್‌ ಕಾಳೆ   

ದರ ದರ ದರ ಅಂತ
ಇನ್ನೇನು ಹೊರಟೆ ಬಿಟ್ಟಿದ್ದ ರೈಲನ್ನು
ಓಡಿ ಹತ್ತಿಯೇ ಬಿಟ್ಟೆ

ಇಡೀ ಬೋಗಿಯ ತುಂಬಾ ನನ್ನಂತೆಯೇ ಜನ
ಬೆವರ ವಾಸನೆ ತುಂಬಿದ ಜನ
ಯಾವುದೊ ದಿನಪತ್ರಿಕೆಯ ಹಾಸಿ ಸೀಟಿನ ಕೆಳಗೆ
ಮಲಗಿದ್ದವ ನನ್ನ ನೋಡಿ ಕೀಸುಗಟ್ಟಿದ ಹಲ್ಲ ಜಳಪಿಸಿ ಒಳಗೆ ಹೋದ

ಅವನ ಕಣ್ಣ ನೋಡಿ ಏನೋ ಕೇಳಬೇಕೆನಿಸಿದವನು ಬ್ಯಾಗು ತಬ್ಬಿಕೊಂಡು ಅಲ್ಲೆ ಕುಳಿತೆ
ಮೆಲ್ಲಗೆ ಕೇಳಿದೆ ಇದು ‘ಹಿಮಗಿರಿಯ ಕಂದರಕ್ಕೆ ಹೋಗುವ ಟ್ರೈನೇ.....’
ಇಡೀ ಬೋಗಿ ಒಮ್ಮೆಲೆ ‘ಹೌದು’ ಎಂದಿತು
ಅದೇ ಕೀಸುಗಟ್ಟಿದ ಹಲ್ಲಿನ ಕೈಯೊಂದು ಮುದುರಿದ ಪೇಪರ್ ಮುಂದೆ ಚಾಚಿತು

ADVERTISEMENT

ಎಲ್ಲರ ತಲೆ ತುಳಿದುಕೊಂಡೆ ಬಂದನೊಬ್ಬ
ಗರಂ ಗರಂ ಚಾಯ್ ಎಂದ, ಬಿಸಿ ಬಿಸಿ ಮದ್ದೂರ್ ವಡೆ ಬೇಕೆ ಎಂದ. ಕುಂಟ ಬಂದ
ತಾರಕ್ಕ ಬಿಂದಿಗೆ ನಾ ನೀರಿಗೋಗುವೆ ಅಂತ ಕುರುಡ ಹಾಡುತ್ತಾ ಬಂದ
ನನ್ನ ತಲೆಯ ಮೇಲಿಂದಲೇ ಕಿಟಕಿಯ ಕಡೆ ಕೇಸರಿಯ ಪಿಚಕಾರಿ ಹಾರಿಸಿದ
ಅದು ಎಲ್ಲಿದ್ದವೊ ಮಕ್ಕಳು ಒಮ್ಮೆಲೆ ಹತ್ತಾರು ಮಕ್ಕಳು ಸೀಟಿನಡಿಯಿಂದ ಎದ್ದು ಬಂದರು

ಕಚಪಿಚ ತುಳಿದು ಹಾಕಿದರು, ಅತ್ತರು, ರಚ್ಚೆ ಹಿಡಿದರು
ಆದರೆ, ಒಬ್ಬನಂತೂ ನನ್ನನೇ ನೋಡುತ್ತಾ ಹತ್ತಿರ ಬಂದ
ತೊಡೆಯ ಮೇಲೆ ಕುಳಿತ ನಿಧಾನಕ್ಕೆ ತೊಡೆ ನೆನೆದಂತಾಯಿತು

ಅರೆ! ನನ್ನವೇ ಕಣ್ಣು ಯಾರು ನಿಮ್ಮ ಅಮ್ಮ ಅಂದೆ
ಮೇಲೆ ಎನ್ನುವಂತೆ ಹುಬ್ಬು ಹಾರಿಸಿದ
ಅವಳ ಬೆನ್ನು ಕಾಣಿಸಿತು ನುಣುಪಾದ ಬೆನ್ನು ಕಾಣಿಸಿತು

ಆ ಹುಡುಗನ ಕಣ್ಣು ಎಲ್ಲೋ ನೋಡಿದಂತಿತ್ತು
ಯಾರೋ ನೀನು? ಅಂದೆ ಚಿಕ್ಕ ಹುಡುಗ! ಅಂದ
ಎಲ್ಲೋ ನೋಡಿರುವೆನಲ್ಲ ಎಂದೆ?
ಅದೇ ಅಪ್ಪ ಚರಂಡಿಯಲ್ಲಿ ಸತ್ತಾಗ ಅವನ ಬಗ್ಗೆ ಬರೆದಿದ್ದು ನೀವೆ ಅಲ್ಲವ
ಮತ್ತೊಮ್ಮೆ ಇಡೀ ಬೋಗಿ ‘ಹೌದು’ ಎಂದಿತು ಅದು ಹಿಂದಿಗಿಂತ ಜೋರಾಗಿ

ಇನ್ನೊಂದು ಮಗು ಪಿಸುಗುಟ್ಟಿತು ಫುಟ್‌ಪಾತಿನಲ್ಲಿ ಕಾರು ಹತ್ತಿ ಸತ್ತವನ ಮಗ ಎಂದಿತು
ಸೇತುವೆ ಮುರಿದು ಸತ್ತವನ ಮಗಳು ನಾನು
ಕೂಲಿ ಕೇಳಿದಕ್ಕೆ ಕೊಚ್ಚಿಸಿಕೊಂಡವನ ಕಮ್ಮಾರನ ಕೂಲಿಕಾರನ ನೇಕಾರನ ಮಕ್ಕಳು ನಾವೆಲ್ಲ

ಬೋಗಿ ‘ಹೂ’ಗುಟ್ಟುವ ಮೊದಲೆ ನಾನೇ ಹೌದು ಎಂದೆ
ಹಲ್ಕಿರಿದೆ ಅದಾಗಲೇ ನನ್ನ ಹಲ್ಲುಗಳು ಕೀಸುಗಟ್ಟಲು ಪ್ರಾರಂಭಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.