
ಕವಿತೆ
ಮಗಳಿಗೆ
ಗೊಂಬೆಯೊಂದಿಗೆನೇ ಸೂರ್ಯೋದಯ
ಅದು
ಕೈಯೊಳಗಿದ್ದರೆ ಸಾಕು
ಬೇರೆಯ ಜಗತ್ತೇ ಬೇಡ
ಅದಕ್ಕೆ
ಸ್ನಾನ ಮಾಡಿಸುವುದು
ತಲೆ ಬಾಚುವುದು
ರಿಬ್ಬನ್ ಕಟ್ಟುವುದು
ಪೌಡರ್ ಬಳಿಯುವುದು
ಟಿಕಳಿ ಹಚ್ಚುವುದು
ಕಾಡಿಗೆ ಮೆತ್ತುವುದು
ಉಣಿಸುವುದು
ತಿನಿಸುವುದು
ದೃಷ್ಟಿ ತೆಗೆಯುವುದು
ಮೆತ್ತಗೆ ಹಾಸಿ ಮಲಗಿಸುವುದು
ನಿತ್ಯಕಾಯಕ ಅವಳಿಗೆ
ಅದರಲ್ಲೇ ಕಳೆಯುವಳು
ದಿನದ
ಮೂರೂ ಹೊತ್ತಿನ ಘಳಿಗೆ
ತಾಯಾಗಿ
ಮಡಿಲಲಿ ಮಲಗಿಸಿಕೊಂಡೋ
ಹೆಗಲಲಿ ಹೊತ್ತುಕೊಂಡೋ
ಬಗಲಲಿ ಅಪ್ಪಿಕೊಂಡೋ
ತೊಟ್ಟಿಲಲಿ ತೂಗಿ
ಜೋಗುಳ ಹಾಡಿಕೊಂಡೋ
ಅಕ್ಕರೆಮಳೆಗರೆಯುವಳು
ಹಠ ಹಿಡಿದರೆ
ಅಪ್ಪಾ ಬೈತಾನೆ ಸುಮ್ಕಿರು ಅಂತ
ಮೆಲ್ಲನೆ
ಪಿಸುಮಾತ ಉಸುರುವಳು
ಆಗಲೂ ಕೇಳದಿದ್ದಾಗ
ಅಕ್ಕ ಮಲಗಿದ್ದಾಳೆ ಎಂದು
ಕಣ್ತಿರುವಿ
ಹಲ್ಕಡಿದು
ಗದರಿಸಿ ರಮಿಸುವಳು
ಒಮ್ಮೊಮ್ಮೆ
ತಾಯಿ-ತಂದೆ
ಅಜ್ಜ-ಅಜ್ಜಿ
ಅಕ್ಕ-ತಂಗಿ
ಎಲ್ಲಾ ತಾನೇತಾನಾಗಿ
ಏಕಪಾತ್ರದಲ್ಲೇ
ಬಹುಪಾತ್ರವನು
ಅಚ್ಚುಕಟ್ಟಾಗಿ ನಿಭಾಯಿಸುವಳು
ರಾತ್ರಿ
ಮಲಗುವಾಗಲೂ ಅಷ್ಟೆ!
ಮಗ್ಗಲಲ್ಲಿ ಮಲಗಿಸಿಕೊಂಡು
ಹಾಲುಣಿಸಿದಂತೆ ನಟಿಸಿ
ಚೈಚೈ ಬಡಿದು
ಲಾಲಿ ಹಾಡಿಹಾಡಿ
ನಿದಿರೆಗೆ ಜಾರುವಳು
ಕಂಗಳು ತೇಲಾಡಿ
ನಮ್ಮ ವರ್ತನೆಗಳೇ
ಅವಳಿಗೆ ನಿತ್ಯಪಾಠ
ಯಕ್ಷಗಾನ ಬಯಲಾಟ
ಮುದ್ದುತನ ಪೆದ್ದುತನ
ಎಲ್ಲವೂ ಅನುಕರುಣೆಯಾಗಿ
ಕನಸ ಕನವರಿಕೆಯಂತೆ
ಕಣ್ಣೆದುರೇ ಬಹಿರಂಗ!
ಮೈಮನಸಿನೊಳು
ಕೊಳೆಯ ಮೈಲಿಗೆಗಳಿದ್ದಲ್ಲಿ
ಬಿಗುಮಾನ ಬಿಟ್ಟು
ಕಳೆದುಕೊಳ್ಳಲೇಬೇಕು
ನಮ್ಮಯ ಹುಳುಕು!
ಇಲ್ಲವಾದರೆ
ಜಗಜ್ಜಾಹೀರು
ಅಂತರಂಗದ ಕೊಳಕು,
ಒಪ್ಪಿಕೊಳ್ಳಲೇಬೇಕು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.