ADVERTISEMENT

ರಮೇಶ ಅರೋಲಿ ಬರೆದ ಕವಿತೆ: ದೇವರು ರಜೆಯಲಿರುವಾಗ...

ರಮೇಶ ಅರೋಲಿ
Published 15 ಮೇ 2021, 19:30 IST
Last Updated 15 ಮೇ 2021, 19:30 IST
ಕಲೆ: ನಾಮದೇವ ಕಾಗದಗಾರ
ಕಲೆ: ನಾಮದೇವ ಕಾಗದಗಾರ   

ಊರು ಕೇರಿಗಳು ಉರಿದು ಹೋಗುತಾವ

ಹುತ್ತದ ಹಾವು ಗುಳೆ ಹೋಗುತಾವ

ನದಿ ನೀರಾಗ ಹೆಣ ತೇಲುತಾವ

ನಡುಬೀದಿಯಲಿ ಕಣಿ ಕೇಳುತಾವ

ಎಲ್ಲಿದ್ದೋ ದೇವ ನೀನೇನಾದೋ ದೇವ

ಅಂಗಳಯೆಲ್ಲ ಅಂಗಲಾಚುತಾವ

ತಿಂಗಳು ಬಸುರಿಯ ನೋವು ತಿನ್ನುತಾವ

ಕೇಳಿದ ಕಿವಿಗಳು ಕಿಟಕಿ ಮುಚ್ಚಿದವು

ನೋಡಿದ ಕಣ್ಣು ರೆಪ್ಪೆ ಮುಚ್ಚಿದವು

ಎಲ್ಲಿದ್ದೋ ದೇವ ನೀನೇನಾದೋ ದೇವ

ದ್ವಾಮೆ ಕೊಲ್ಲಲು ದೇಣಿಗೆ ಕೊಟ್ಟೀವಿ

ಹಸಿದ ಕೂಸಿಗೆ ಹಾಲನು ಇಟ್ಟೀವಿ

ಹರಹರ ಎಂದವ ಬರಿ ಮಾತಾಡಲು

ಆರಿಸಿ ತಂದವ ಅರಮನೆ ಸೇರಲು

ಎಲ್ಲಿದ್ದೋ ದೇವ ನೀನೇನಾದೋ ದೇವ

ದುಂಡಗಿರುವ ಈ ಭೂ-ಚೆಂಡೊಳಗ

ಗಂಡೆಂಬವನ ಗಡ್ಡದ ಕೆಳಗ

ತುಂಡು ನೆಲವನು ಬಿತ್ತಲಾಗದವ

ಸಾವಿನ ಬೀಜ ಉಗಿದು ಕುಂತವ

ಎಲ್ಲಿದ್ದೋ ದೇವ ನೀನೇನಾದೋ ದೇವ

ನೀರಿಗಿಲ್ಲಿ ಒಂದು ದಾಣೆಯುವುಂಟು

ಗಾಳಿಗಿಲ್ಲಿ ಗನ ಬೇಡಿಕೆಯುಂಟು

ಹಳ್ಳದ ಸೆಲುಮೆ ಹೊಗೆ ಉಗಿದಾವ

ಮರದಟೊಂಗೆಯು ಜೀವ ತೆಗದಾವ

ಎಲ್ಲಿದ್ದೋ ದೇವ ನೀನೇನಾದೋ ದೇವ

ಅರೆಸುಟ್ಟ ಈ ಹೆಣದ ಬಣಿವೆಗೆ

ಅತರ್ ಗಂಧ ಹಚ್ಚುವ ಘಳಿಗೆ

ಮತ ಹಾಕೋನು ಮಸಣವಾಸಿಯು

ಪಡೆದು ಬಂದವನೊ ಗದ್ದುಗೆವಾಸಿಯು

ಎಲ್ಲಿದ್ದೋ ದೇವ ನೀನೇನಾದೋ ದೇವ

ಖಾಲಿ ಹೊಟ್ಟೆಯಲಿ ಪೂಜೆಗೆ ಬಂದೆ

ಥರ ಥರ ಹೂವು ಆರಿಸಿ ತಂದೆ

ಹಾಡಿ ಹೊಗಳಿ ನಿನ್ನ ಬೇಡಿದ ಪರಿಗೆ

ಅನಾಥ ಹೆಣಗಳು ಹಗಲಿನ ತೆರಿಗೆ

ಎಲ್ಲಿದ್ದೋ ದೇವ ನೀನೇನಾದೋ ದೇವ

ಗುಡಿ ಗುಂಡಾರಕೆ ಇಲಿ ಗುದ್ದಲಿ ಪೆಟ್ಟು

ದವಾಖಾನೆಯಲಿ ಸಾವಿನ ಹುಟ್ಟು

ಢಣಢಣ ಅಂದಿದ್ದು ಯಾವ ಸದ್ದದು

ದಾರಿಯ ಗುಂಟ ಬಾರಿಸಿ ಹೋದದ್ದು

ಎಲ್ಲಿದ್ದೋ ದೇವ ನೀನೇನಾದೋ ದೇವ

ಸಿರಿವಂತರ ಓ ಚಿನ್ನದ ಮೂರುತಿ

ಬಡವರ ಪಾಲಿನ ಕಾಗದ ಮಾರುತಿ

ಬದುಕಿರುವಾಗ ಬವಣೆಗೆ ಆಗದೆ

ಸತ್ತು ಬಿದ್ದಿರಲು ಮಣ್ಣಿಗು ಬಾರದೆ

ಎಲ್ಲಿದ್ದೋ ದೇವ ನೀನೇನಾದೋ ದೇವ

ಸಾವಿನ ಡೇರೆಗೆ ಟೆಂಡರು ಕರೆದರು

ಮೊಳೆಯ ಮೇಲೆ ನಿನ್ನ ಹೆಸರನು ಬರೆದರು

ಲಕೋಟೆಗೆ ಹಚ್ಚಿದ ಕುಂಕುಮ ಅರಿಶಿನ

ಲಘು ಅಂದವನಿಗೆ ಮರಣವೆ ಶಾಸನ

ಎಲ್ಲಿದ್ದೋ ದೇವ ನೀನೇನಾದೋ ದೇವ

ಸುಳ್ಳನು ಇಲ್ಲಿ ಸುಳ್ಳೆಂದವರ

ತುಟಿಯ ಹೊಲೆಯಲು ಸೂಜಿದಾರ

ದೇವರಾಣೆಗಿದು ಖರೆ ಅಂದವರ

ಸಮಾಧಿ ಮ್ಯಾಲೆ ಹೂವಿನ ಹಾರ

ಎಲ್ಲಿದ್ದೋ ದೇವ ನೀನೇನಾದೋ ದೇವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.