ADVERTISEMENT

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ: ಕೊಡಲಿಗೆ ಕಾದ ಒಣ ಮರ

ಸಂತೆಬೆನ್ನೂರು ಫೈಜ್ನಟ್ರಾಜ್
Published 25 ಜನವರಿ 2025, 23:30 IST
Last Updated 25 ಜನವರಿ 2025, 23:30 IST
   

ಹಲವು ವಸಂತಗಳ ಕಂಡ
ಜೀವ, ಬೆತ್ತಲು ದೇಹ
ಆಕಾಶ ನೋಡುತ್ತಾ ನಿಂತಿದೆ
ಗೆದ್ದಲಹುಳಕ್ಕಂತೂ ಜನ್ಮಾಂತರದ ಹಸಿವು

ಹೊಟ್ಟೆ ತುಂಬಾ ಉಂಡ ಹಕ್ಕಿ
ಹಿಕ್ಕೆ ಎಲ್ಲಿ ಹಾಕಿದೆಯೋ
ಹೊಸ ಸಸಿ ಅಮ್ಮನ ಕಾಣದೆ ಕಂಗಾಲು;
ಎದೆಯಲ್ಲಿ ಬಿತ್ತಿದ ಹಾಡು
ಕಾಡ ತುಂಬಾ

ಮೈ ತುಂಬಾ ಗೂಡು
ಗೂಡಲ್ಲಿ ತುತ್ತಿನ ಧ್ಯಾನ 
ರೆಕ್ಕೆ ಫಡಫಡಿಸುವ ಉಸಿರಭಾವ
ಋತುಗಳ ಸಂಕಲನ ವ್ಯವಕಲನ ದ ನಡುವೆ
ಮೈ ಬಟಾ ಬಯಲು; ನಿಟ್ಟುಸಿರ ಕೊಡುಕೊಳುವಿಕೆ
ಕೊನೆಗಾಲದಿ ಜಾರಿಯಲ್ಲಿದೆ

ADVERTISEMENT

ಐದಾರು ಮಕ್ಕಳ ಎತ್ತರಕ್ಕೇರಿಸಿದ ಅಜ್ಜಿ
ದಾರಿಯುದ್ದಕ್ಕೂ ಸಾಸಿವೆ ಚೆಲ್ಲಿದ್ದಾಳೆ
ಗುರುತು ಹಿಡಿದು ಯಮ ಮನೆ ಬಾಗಿಲು
ತಟ್ಟಲಿ ಎಂದು
ನಡು ಹಾದಿಗೇ... ಹೋದ ಅಜ್ಜ , ಕಾಡು ಸಲಹುವ ಕೆಲಸ
ನೀಡಿದ್ದು...ಈಗ ಅಜ್ಜಿ ಒಂಟಿ ಮರ

ಪುಣ್ಯಪಾದ ಕಾಣೋ
ಹಂಬಲದ  ಶಬರಿ  ನನ್ನ ಅಜ್ಜಿ 
ಮುದ್ದೆ ಚಟ್ನಿಯ  ಯಾನದ ಬದುಕ
ತಿಲಾಂಜಲಿಗೆ ರಾಮ ಬರಬೇಕು

ಒಣ ಮರವಿದು
ನೆಲಕುರುಳಲು ಮರಹೊಕ್ಕ ಕೊಡಲಿಯೇ ಬೇಕು
ಎ‌ನಿಸು ಕಾಲ ನಿಂತರೇನು
ಒಮ್ಮೆ ಒಂದೇ ಗಳಿಗೆ ನಿಂತರೂ ಉಸಿರು ನಶ್ವರದ ಅನುಭೂತಿ
ಕಾಡು ಕಾದ ಜೀವ ಒಂಟಿ ;
ಎಲ್ಲಾ ಇದ್ದೂ ಏಕಾಂಗಿ ಬದುಕಿನ ಪೂರ್ಣ ವಿರಾಮಕ್ಕೆ ಮೋಕ್ಷದ
ಕೊಡಲಿ ಎಲ್ಲಿದೆಯೋ  ಸ್ವಾಮಿ
ಹಸಿರು ಮರಗಳ ಮಧ್ಯ ಒಣ ಮರ ಇರಬಾರದು!

ಮುಗಿಲ ನೋಡುವ ಒಣ ಮರ ಮತ್ತು ಅಜ್ಜಿಯ ನಂತರ
ನನ್ನ ಸರದಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.