ಸಾಂದರ್ಭಿಕ ಚಿತ್ರ
ಇದ್ದಕ್ಕಿದ್ದಂತೆ ತೀರಿದ ಅಲ್ಲಾಹನ ಸೇವಕ
ನನ್ನಪ್ಪ ಕಣ್ಣ ಮುಂದೆ ನಿಲ್ಲುತ್ತಾನೆ
ಗ್ರಹಣದ ಕಾಲದ ರವಿಯಂತೆ
ವಾರಕ್ಕೊಂದು ಬಾರಿ ನಶೆಯಾಗಿ
ಕಿಂಗ್ ಸಿಗರೇಟ್ ಸೇದುವಾಗ
ಜೀವಂತದಲ್ಲೂ ಕಾಡಿದ, ಈಗಲೂ ಸಹ
ಇದು ಸೃಷ್ಟಿಪೂರ್ವದ ಸುಳಿ
ತಲೆದಂಡ ತೆತ್ತ ಮಳೆಗೆ ಹಾಕಿದ
ಫೋಟೋದಲ್ಲೂ ಜಾಹೀರಾತಿನಂತೆ
ರೋಧಿಸುತ್ತಾನೆ
ಅಲ್ಲಮನ ಭಕ್ತೆ ನನ್ನವ್ವ
ಆತನ ಕಣ್ಣೀರು ಒರೆಸಿ
ವಿಭೂತಿ ಕುಂಕುಮ ಹಚ್ಚಿ
ಎರಡು ಗಂಗಾ ಊದುಬತ್ತಿ ಬೆಳಗುತ್ತಾಳೆ
ಅವಳಿಗೂ ತನುಮನದ ವಿರಹ
ನುಂಗಿದ್ದು , ಉಗುಳದ್ದು..!
ಅನಂತಾನಂತ
ರಾಮ ಸೇತುವೆಯಂತೆ ದಾಟಿದ
ಅವಳ ಸೀರೆಯ ನೆರಿಗೆಗಳು
ತೆಪ್ಪಗೆ ಬಿದ್ದಿರುತ್ತವೆ ಕಾಲಡಿ
ಅವ್ವ ಯಾರನ್ನೂ ಪರರೆಂದುಕೊಂಡಿಲ್ಲ
ಮನದ ತೆರೆ ಸರಿದರೆ
ಬಾನಿನ ಅಂತಃಕರಣ ಬಾಗುತ್ತದೆ
ಭುವಿಯ ಒಡಲು ಚಿಗುರುತ್ತದೆ
ಇಸ್ ಈಕ್ವಲ್ ಟೂ ತಾಯಿಯಾಗಿದ್ದಾಳೆ
ನನ್ನಪ್ಪನಿಗೆ ಮಾತ್ರ ಕಾಮಧೇನು
ಅಪ್ಪನ ಡೆಡ್ ಟ್ಯಾಗ್ ಲೈನ್ ನಿಯಮ
ಸಂಖ್ಯಾತರೆಂದರೆ ಗಣಿತಶಾಸ್ತ್ರಜ್ಞರಲ್ಲ
ಅಲ್ಪಸಂಖ್ಯಾತರೆಂದರೆ
ಕೂಡುವ ಲೆಕ್ಕ ಬರುವುದಿಲ್ಲವೆಂದಲ್ಲ
ಅಲ್ಲಲ್ಲಿ ಕತ್ತಲಿಗೂ ಕಾಂತಿಗೂ ಸೆಣಸಾಟ
ಅಲ್ಲಾ ಅಲ್ಲಮನಿಗೂ ವ್ಯತ್ಯಾಸದ
ಸಂಖ್ಯೆಗಳನ್ನು ಪೋಣಿಸಿವುದಾದರೆ
ಅಲ್ಲಾ ಚಂದಿರನಿಗೆ ಅಲ್ಲಮ ಬೆಳಕಿಗೆ ನಿರಂತರ
ಧರ್ಮ ಬೆಳಕಿಗೂ
ಕರ್ಮದ ಸಂಖ್ಯೆಗೂ ಅಂತರವಿಟ್ಟದ್ದು
ಅಂತರಾತ್ಮಕ್ಕೂ ತಿಳಿಯುತ್ತದೆ
ಬಳ್ಳಿಯ ಹೂ ತೊದಲಿದಂತೆ
ಯುದ್ಧದಿಂದ ಮರಳಿ ಬಂದ ನನ್ನಂತೆ
ಯೋಧರಲ್ಲಿ ಒಬ್ಬನಾಗಿ
ಗರಿಗೆದರಿದ ಯುದ್ಧದಲ್ಲಿ ಮಡಿದೆ
ದೇವರ ಮುಂದೆ ಮಂಡಿಯೂರಿ ಹಠ ಹಿಡಿದೆ
ತಾಯಿ ಮಡದಿ ಮಗಳನ್ನು ನೋಡಬೇಕೆಂದು
ಅವರಿಗಾ ಉಳಿಯಾಗಿದ್ದಾರೆ
ನೀನು ಕಲ್ಲಾಗು ಎಂದ
ಅವರ ಪ್ರತಿ ಪೆಟ್ಟನ್ನು ಎಣಿಸಿಕೊಂಡೆ
ಅಲ್ಪನೋ ಬಹುಸಂಖ್ಯಾತನೋ ತಿಳಿಯಲಿಲ್ಲ
ಆಗ ಅಲ್ಲಾಹನನ್ನು ಕೂಗಿದೆ
ನೋವು ತಾಳದೆ
ಅಲ್ಲಮನನ್ನು ಕರೆದೆ
ಅವರಿಬ್ಬರೂ ಬೆಳಕಿನಲ್ಲಿ ಪಗಡೆಯಾಡುತ್ತಿದ್ದರು
ಕೆಳಗೆ ನೋಡಿದೆ
ಈಗ
ನನ್ನಪ್ಪ ನಾನು
ಗೋಡೆಯ ಪಟದಲ್ಲೂ ಗೆಳೆಯರು
ನಾಳಿನ ಕನಸಿಗೆ
ವರ್ಷದ ತಿಥಿಯಲ್ಲೂ ಮೊಮ್ಮಕ್ಕಳು
ಸ್ನೇಹಿತರಾಗಬಹುದಷ್ಟೇ....!
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.