ADVERTISEMENT

ಪ್ರತಿಭಾ ನಂದಕುಮಾರ್ ಅವರ ಕವನ: ಬೆಂಕಿ ಬಿದ್ದಿದೆ ಮನೆಗೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 23:30 IST
Last Updated 18 ಅಕ್ಟೋಬರ್ 2025, 23:30 IST
   

ಶತ್ರು ಒಳಗೇ ನುಸುಳಿಬಿಟ್ಟಿದ್ದಾನೆ.
ಬಡಿದೋಡಿಸುವವರಿಲ್ಲದೇ ಮಣೆ ಹಾಕಿ ಕೂರಿಸಿ
ಮೃಷ್ಟಾನ್ನ ಬಡಿಸುತ್ತಿದ್ದಾರೆ ಹಿರಿಯರು.
ಅನ್ನವಿಟ್ಟ ಕೈಗಳಿಗೆ ಕೋಳ ಹಾಕುವ ಜನರಿಗೆ
ಗಂಧ ಪೂಸಿ ಹಾರ ಹಾಕಿ ಕಳಿಸಿಕೊಡುತ್ತಿದ್ದಾರೆ.
ರಸ್ತೆಯ ತುಂಬ ರೇಪಾದ ಹೆಣ್ಣುಗಳ ಯೋನಿ ರಕ್ತ
ದ ಹಾಸಿನ ಮೇಲೆ ನಡೆದು ತಾಲಿಬಾನಿಗಳು ಟಾಟಾ ಹೇಳಿ
ವಿಮಾನ ಹತ್ತಿದ್ದಾರೆ ಮೇಲಿಂದ ಹೂ ಚೆಲ್ಲಿದ್ದಾರೆ
ವಾರೆ ಮೇರೇ ಶೇರ್ ವಾರೆ ಮೇರೇ ಸನಾತನಿ

ಮರೆತುಹೋಯಿತೇ ನೀವು ಸದಾ ಜಪಿಸುವ ಮನುವಾಣಿ
ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:
ಎಲ್ಲಿ ಹೋದರು ನಿಮ್ಮ ದೇವತೆಗಳು?
ಅರ್ಥವಾಗಿಲ್ಲ ಅನರ್ಹರಿಗೆ
ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ:
ಎಲ್ಲಿ ಸ್ತ್ರೀಯರ ಅಪಮಾನವೋ
ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ.

ಇದು ವಿಷಮ ಕಾಲ
ಹಜಾರದಲ್ಲಿ ಮನೆಯ ಯಜಮಾನ ವಿಷಮಯ ಜನರ
ಕಾಲು ತೊಳೆದು ತೀರ್ಥ ಪ್ರೋಕ್ಷಣೆ ಮಾಡಿಕೊಂಡು
ಇತ್ತ ಹಿತ್ತಲಿಗೆ ಬಂದು ಮನೆಯ ಮಹಾಲಕ್ಷ್ಮಿಯರ
ಬಡಿದು ಬಾವಿಗೆ ತಳ್ಳುವ ಕ್ರೂರ ಜಾಲ
ಮಗಳನ್ನೇ ಬಲಿಕೊಡುವ ತಾಲಿಬಾನಿಗಳಿಗೆ ಆರತಿ ಎತ್ತಿ
ದ ಮೇಲೆ ಇನ್ನು ಯಾವ ಬಾಯಲ್ಲಿ ನುಡಿಯುತ್ತೀರಿ
ಹೆಣ್ಣುಮಕ್ಕಳ ಮಾನ ರಕ್ಷಣೆ ಸನಾತನ ಸಂಸ್ಕೃತಿ?

ADVERTISEMENT

ಇದು ತೀರ್ಮಾನದ ಕಾಲ
ನಿಮ್ಮ ಸ್ತ್ರೀಯರು ದೇವತೆಗಳೋ ಬಹಿಷ್ಕೃತರೋ?
ಪುರಸ್ಕೃತರೋ ಅಪಮಾನಿತರೋ?
ಬೇಟಿಯರನ್ನು ಬೇಟೆ ಮಾಡುವವರ ಮೆರವಣಿಗೆಯಲ್ಲಿ
ಡೋಲು ನುಡಿಸುತ್ತ ಕುಣಿಯುತ್ತ ಉನ್ಮತ್ತ
ನಿಮಗೆ ಕಾದಿದೆ ಮಹಾದೇವಿಯ ಶಾಪ
ತುಂಬಿಬಂದಿದೆ ನಿಮ್ಮ ಪಾಪ ಕೂಪ

ಬೆಂಕಿ ಬಿದ್ದಿದೆ ಮನೆಗೆ
ಈಗಲೂ ಬಾವಿ ತೋಡುವ ಸಂಕಲ್ಪವಿಲ್ಲ ನಿಮಗೆ
ಎದೆಯಲ್ಲಿ ಆದ್ರತೆಯಿಲ್ಲದೇ ತೋಡಿದರೂ ಅಲ್ಲಿ ನೀರಿಲ್ಲ
ಕಲ್ಲು ಕರಗುವ ಕಾಲದಲ್ಲೂ ಸ್ಪಂದನವಿಲ್ಲ
ಬುದ್ದಿಯ ಅಧಃಪತನ ವಿಪರೀತ ವಿನಾಶಕ್ಕೆ ಕ್ಷಮೆಯಿಲ್ಲ
ನೆನಪಿರಲಿ, ದೇವಿ ಇಲ್ಲದಿದ್ದರೆ ನೀವು ಪ್ರೇತಗಳೇ ಸರಿ
ನಚೇ ದೇವಂ ದೇವೋನ ಖಲು ಕುಶಲ ಸ್ಪಂದಿತುಮಪಿ.