ಮಳೆಯನ್ನು
ಹಾಡುವುದು ಎಂದರೆ
ಕೊನೆ - ಮೊದಲಿರದ
ಒಂದು ಹರಿವನ್ನು
ನುಡಿಸುವುದು ಎಂದರ್ಥ
ಮಳೆಯನ್ನು
ನುಡಿಸುವುದು ಎಂದರೆ
ಕತ್ತರಿಸಿಹೋದ ಬೆರಳುಗಳಿಂದ
ಆಕಾಶದ ವೀಣೆಯನ್ನು
ನೇವರಿಸುವುದು ಎಂದರ್ಥ
ಮಳೆಯನ್ನು
ನೇವರಿಸುವುದು ಎಂದರೆ
ಅವಳು ಅವಳೊಂದಿಗೆ
ಸಿಡಿದೇಳುವ ಹೃದಯವನ್ನು
ಬಿಡಿಸುವುದು ಎಂದರ್ಥ
ಮಳೆಯನ್ನು
ಬಿಡಿಸುವುದು ಎಂದರೆ
ಕಂಬನಿ ತೊಟ್ಟಿಕ್ಕಿ ಹರಡಿದ
ತುಟಿಗಳಿಂದ ಅಕ್ಷರಗಳನ್ನು
ನೆನಪಿಸಿಕೊಳ್ಳುವುದು ಎಂದರ್ಥ
ಮಳೆಯನ್ನು
ನೆನಪಿಸಿಕೊಳ್ಳುವುದು ಎಂದರೆ
ಒಂದು ಕೊಡೆಯಿಂದ
ನಿಲ್ಲಿಸಲು ಸಾಧ್ಯವಾಗುವವರೆಗೆ
ತಡೆದು ಮಣಿಸುವುದು ಎಂದರ್ಥ
ಮಳೆಯನ್ನು
ತಡೆಯುವುದು ಎಂದರೆ
ಇಷ್ಟವಿರುವಾತನನ್ನು
ಹಠಾತ್ತನೆ ಕಂಡಾಗ ಹಿಡಿತಕ್ಕೆ
ಸಿಗದಂತಿರುವುದು ಎಂದರ್ಥ
ಮಳೆಯನ್ನು
ಕಾಣುವುದು ಎಂದರೆ
ತನ್ನದೇ ಸಮಾಧಿ ಈಕ್ಷಿಸುವ
ಪರೇತಾತ್ಮನ ಹಾಗೆ
ಮೂಕ, ಕಣ್ಣು ಮುಚ್ಚಿದ
ನೆಂದ ಶಬ್ದ ಸಾಲು ಎಂದರ್ಥ !
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.