ADVERTISEMENT

ಚನ್ನಪ್ಪ ಅಂಗಡಿ ಬರೆದ ಕವನ: ಗಜಲ್‌ಗಳು

ಚನ್ನಪ್ಪ ಅಂಗಡಿ
Published 18 ಫೆಬ್ರುವರಿ 2023, 19:30 IST
Last Updated 18 ಫೆಬ್ರುವರಿ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

(1)
ಗೋಳವಂಗೈಯಲಿ ಹಿಡಿದು ಬಾಳು ಸವೆಸಬಹುದು ಈ ತಾಣದಲ್ಲಿ
ಮೊದಲ ಮಾತು ಕೊನೆ ಗುಕ್ಕು ಎರಡೂ ಆಗಬಹುದು ಈ ತಾಣದಲ್ಲಿ

ಜಗದ ಮೂಲೆಮೂಲೆಗೂ ಹರಡಿ ಸರ್ವಾಂತರ್ಯಾಮಿಯಾಗಿದೆ
ಸೂರ್ಯ ನೋಡದಜಾಗೆಯಲ್ಲಿಕೈಯಾಡಿಸಬಹುದು ಈ ತಾಣದಲ್ಲಿ

ಇದಿರು ಬಂದವರನು ನೋಡದೇ ಕಿವಿಯಲಾಡಿದ ಮಾತಿನಿತೂ ಕೇಳದೆ
ಕಂಡುಕೇಳದ ಸಂಗತಿಗಳನು ಕಂಡುಂಡಂತೆ ನಟಿಸಬಹುದು ಈ ತಾಣದಲ್ಲಿ

ADVERTISEMENT

ಜನ್ಮಾಪಿ ಜೀವಾಚ್ಛವವಾದ ಕಣ್ಣು ಕಿವಿ ಬಾಯಿಗಳನ್ನು ಅಲುಗಾಡಿಸಿ
ನೆಗಡಿಯಾದ ಮೂಗನ್ನು ಎಲ್ಲೆಂದರಲ್ಲಿ ತೂರಿಸಬಹುದು ಈ ತಾಣದಲ್ಲಿ

ಸಹಜ ಬದುಕೆಂಬುದೊಂದಿದೆ ಎಂಬ ಮಾತೆಂದೋ ಮರೆತಾಗಿದೆ
ಶಬ್ದವಿಲ್ಲದೆ ಅಂಕಿಸಂಖ್ಯೆ ಸಂಜ್ಞೆಗಳು ಮಾತಾಡಬಹುದು ಈ ತಾಣದಲ್ಲಿ

ರಚ್ಚೆ ಹಿಡಿದ ಮಗು ಮೊಬೈಲ್ ಹಿಡಿದ ತರುವಾಯ ಶಾಂತಿದೂತ
ಸತ್ತ ಹೆತ್ತವ್ವನಿಗೂಇಮೋಜಿಮೋಕ್ಷತೋರಬಹುದು ಈ ತಾಣದಲ್ಲಿ

ಆಬಾಲವೃದ್ಧರಾದಿ ದ್ವಿಪಾದಿ ಸಂಕುಲಕೆಲ್ಲ ಇರುವುದೊಂದೇ ನಾದ
ಫೇಸ್‌ಬುಕ್ ಪರಿಚಯ ಪ್ರೇಮಕೆ ತಿರುಗಬಹುದು ಈ ತಾಣದಲ್ಲಿ

ಹೊಟ್ಟೆ ಹೊರೆಯಲಿಂದು ರಟ್ಟೆ ಮುರಿದುದುಡಿಯಬೇಕಾಗಿಲ್ಲ
ನಿಮಗಾಗದವರಿಗೆ ಬೇಜಾನ್‌ಕೆಸರೆರಚಬಹುದು ಈ ತಾಣದಲ್ಲಿ

ಮದುವೆಮುಂಜಿ ಕಾರ್ಯಕಟ್ಟಳೆ ಅನುವು ಆಪತ್ತು ಹಳೆಪಳೆಯ ಕಥೆಗಳು
ನೋಡದೆ ಮುಟ್ಟದೆ ಬಸಿರಾದರೆಂದು ಸುದ್ದಿಯಾಗಬಹುದು ಈ ತಾಣದಲ್ಲಿ

ಕಾಲ ಕೆಟ್ಟಿತು ಮೌಲ್ಯ ಕುಸಿಯಿತು ಎಂದೆಲ್ಲ ಗೊಣಗದಿರೆ ‘ಚೆನ್ನ’
ತನ್ನತನ ಕಾಯ್ದು ಮನುಷ್ಯನಾಗಿ ಉಳಿಯಬಹುದು ಈ ತಾಣದಲ್ಲಿ

(2)
ಕಷ್ಟ ದಿನಗಳ ಮರೆತು ಕೂಡಿಯಾಡುವ ಕಾಲ ಬಂದಿತು
ಕಹಿ ನೆನಪುಗಳ ಕಳೆದು ಹಾಡಿ ನಲಿಯುವ ಕಾಲ ಬಂದಿತು

ಹಸಿವು ಹಸಿದವನ ತಿಂದು ತೇಗುವ ಶೋಷಣೆ ಸಾಕು
ಕಸಿದು ಕೂಡಿಟ್ಟ ಕಾಳುಕಡಿಯನು ಹಂಚುವ ಕಾಲ ಬಂದಿತು

ಸುತ್ತಲೂ ಮುತ್ತಿರುವ ಕಣ್ಣಿನ ಕತ್ತಲೆಯನು ಕಳೆದು
ಕಂದೀಲು ಬೆಳ್ಳಿಚುಕ್ಕಿಯಾಗಿ ಮಿಂಚುವ ಕಾಲ ಬಂದಿತು

ಪಿತ್ತ ಪ್ರಕೋಪಕೆ ಅಂಟು ಜಾಡ್ಯಕೆ, ಪಟಪಟ ಮೈಕೊಡವಿ
ತಣ್ಣನೆಣ್ಣೆ ನೀವಿ ಬಿಸಿನೀರ ಬುಗ್ಗೆಯಲಿ ಮೀಯುವ ಕಾಲ ಬಂದಿತು

ಮಲತಾಯಿ ಮಲಮಗಳು ಅತ್ತೆ ಸೊಸೆಯರ ಮೇಲಾಟ
ಕುಲದ ನೆಲೆಯನು ಮರೆತುಒಂದಾಗಿ ನಿಲ್ಲುವ ಕಾಲ ಬಂದಿತು

ಲಿಂಗ ರಾಜಕಾರಣ ಮೀರಿ ಬೆಳೆಯಲು ನಿಲ್ಲದ ಹೋರಾಟ
ಸಂಘ ಸಾಧನೆಯಲಿ ಪಾಲುದಾರಿಕೆ ಕೇಳುವ ಕಾಲ ಬಂದಿತು

ಭೇದದಾಕೃತಿ ಹಸಿಯಲಿ ಹರಗಿಅಭೇದ ಸಂಸ್ಕೃತಿಯ ಬಿತ್ತಿ
ಒಳಗೆ ಸುಳಿವಾತ್ಮನು ‘ಚೆನ್ನ’ ಒಂದುಗೂಡಿ ಬಾಳುವ ಕಾಲ ಬಂದಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.