ADVERTISEMENT

K.N. ಲಾವಣ್ಯ ಪ್ರಭಾ ಅವರ ಕವಿತೆ: ಒಂದು ಪ್ರೇಮ...

ಕೆ.ಎನ್.ಲಾವಣ್ಯಪ್ರಭಾ
Published 16 ಆಗಸ್ಟ್ 2025, 23:34 IST
Last Updated 16 ಆಗಸ್ಟ್ 2025, 23:34 IST
   

ಈ ಹೊತ್ತಿನಲ್ಲಿ
ನೀನದೆಷ್ಟು ಧಾವಂತದಲ್ಲಿರಬಹುದು
ಅಥವಾ ವಿರಮಿಸುತ್ತಿರಬಹುದು...
ಇಂತಹ ಉರಿವ ಬಿರುಬಿಸಿಲ ಧಗೆಗೆ
ಅದೆಷ್ಟು ಬೆಂದು ಬಸವಳಿದಿರಬಹುದು
ಅಥವಾ ತಣ್ಣನೆಯ ನೆರಳ ಗುಟುಕರಿಸಿ
ತಂಪಾಗುತ್ತಿರಬಹುದು...
ಬೆಳಗೋ ರಾತ್ರಿಯೋ ಸಂಜೆಯೋ
ಇಷ್ಟವೋ ಕಷ್ಟವೋ
ಆನಂದವೋ ಆತಂಕವೋ
ಕೆಲಸದಲ್ಲೋ...ಮನೆಯ ಕಣ್ಗಾವಲಿನಲ್ಲೋ
ಹೇಗೆಲ್ಲಾ ನಿಭಾಯಿಸುತ್ತಿರಬಹುದು
ನಿನ್ನೊಳಗಿರುವ ನಿನ್ನನ್ನು ನೀನು?!

ನಿರಾತಂಕವೋ ಅಸ್ಪಷ್ಟ ಭಯವೋ
ಪ್ರೇಮದ ಹಂಬಲವೋ , ನಿರ್ಲಕ್ಷ್ಯವೋ
ಮನೆಯಂಗಳದಲ್ಲೋ ಬಯಲುದಾರಿಯಲ್ಲೋ
ಹೇಗೆಲ್ಲಾ ಸಾವರಿಸುತ್ತಿರಬಹುದು
ಸುಖಾಸುಮ್ಮನೆ ನಗುವ ಮುಖವಾಡ ತೊಟ್ಟು
ನಿನ್ನೆದೆಯ ಎಣೆಯಿಲ್ಲದ ತುಮುಲಗಳನ್ನು?

ಹೀಗೆ...
ಪ್ರತಿಕ್ಷಣ ಯೋಚಿಸುತ್ತಿರುತ್ತೇನೆ
ನಿನ್ನನ್ನು ಕುರಿತೇ...
ಯೋಚಿಸುತ್ತಲೇ ಹನಿಗಣ್ಣಾಗುತ್ತೇನೆ
ಆ ಕೂಡಲೇ ನಿನ್ನುಸಿರ ಅನುರಾಗ
ನನ್ನ ಕದಪುಗಳ ಸ್ಪರ್ಶಿಸಿದಂತೆ ಮೆಲ್ಲ...
ಬೆಚ್ಚಗಾಗುತ್ತಾ
ತುಟಿಗಳು ಸಣ್ಣಗೆ ಕಂಪಿಸುತ್ತಿರುವಾಗಲೇ
" pause " ಉಲಿಯುತ್ತೇನೆ.

ADVERTISEMENT

ನೋಡೀಗ...
ನೀನಲ್ಲೆಲ್ಲೋ ಇದ್ದಲ್ಲೇ ಅಚಲ ನಿಂತಿದ್ದೀಯೆ
ಮತ್ತು ನಾನಿಲ್ಲಿ
ಘಳಿಗೆಗಳೂ ನಮ್ಮೊಡನೆ ನಮ್ಮದಾಗಿ ನಿಂತಿವೆ
ಇದ್ದೆಡೆಯೇ  ಏಕಕಾಲಕ್ಕೆ ನಾವಿಬ್ಬರೂ
" pause" ನಲ್ಲಿದ್ದೇವೆ
ಕೇವಲ...ನಾವಿಬ್ಬರು ಮಾತ್ರ...

ನಾನೀಗ ನಿನ್ನೆದೆ ಬಡಿತ ಆಲಿಸುತ್ತಿದ್ದೇನೆ
ಮತ್ತು ನೀನು ನನ್ನದನ್ನೂ.

***            
                

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.