
ಕೂಡಿದಷ್ಟೂ
ಕಳೆದುಕೊಳ್ಳುವ ಭಯ
ಒಮ್ಮೆ ಕಳೆದು ನೋಡಿ
ಕೂಡಿದಾಗ ಪುನಃ
ಏನೋ ಕೊರತೆ… ಬಹುಶಃ ಬಿಟ್ಟ ದಶಕ ಇರಬಹುದು
ಮುಗಿಲಿಗೆ ಮುಖಮಾಡಿದ ಕೊಂಬೆಯ
ತುದಿಯ ಹಣ್ಣೆಲೆ ಕಳಚಿದಾಗ
ಕೊಂಬೆ ಕಳೆದು
ಕೊಂಡಿದ್ದು ಒಂದಾದರೆ
ಮರದ ಬುಡ ಒಳಗೊಂಡು ಅಪ್ಪಿ
ಮಣ್ಣಲಿ ಮಣ್ಣಾಗಿ
ಕೂಡಿದ ಲೆಕ್ಕ ಮರವೂ ಇಟ್ಟಿಲ್ಲ ; ನಾವು ನೀವು ಏಕಿಡಬೇಕು?
ಸಿಕ್ಕವರ ಸುಖದ ಮುಂದೆ ಕಳೆದುಕೊಂಡವರ
ಸಂಕಟ ದೊಡ್ಡದು
ಬಳ್ಳಿಯೊಡಲಲ್ಲಿ ಅರಳದ ನೂರಾರು ಮೊಗ್ಗು
ಉಸಿರು ಚೆಲ್ಲಿದ
ಅಮ್ಮನ ಗರ್ಭದ ಚಿಗುರು
ಸಂಕಲನವೋ
ವ್ಯವಕಲನವೋ ಅಮ್ಮನ ಕಣ್ಣೀರಿಗೂ ಲೆಕ್ಕ ಬರಲ್ಲ
ಒಂದು ಒಂದು
ಎರಡಿರಬಹುದು ಗಣಿತದಲ್ಲಿ..
ಎರಡು ಒಂದಾಗದೇ
ಹೋದರೆ ಒಂದು- ಒಂದೇ ಎಂಬುದು
ಕೈಯ ಗೆರೆಯಷ್ಟೇ ಸತ್ಯ ಮತ್ತು
ಗಣಿತ ನಗಣ್ಯ ಆಗುವುದು ಒಲವ ಹಾದಿಯಲ್ಲಿ
ಬಂದವರು
ಇದ್ದವರು
ಹೋದವರು ಎಷ್ಟೋ ಜನ ಬದುಕಿನ ಅಂಗಳದಲ್ಲಿ
ರಂಗೋಲಿ ಆಗದೇ ಬರಿ ಚುಕ್ಕಿಯಾಗಿದ್ದು
ಸತ್ತ ಕವಿತೆಯ ಸಾಲು
ನಿಂತ ಮರಕ್ಕೆ ಹಕ್ಕಿಗಳು ಸಾವಿರ
ವಸಂತ ಇಡದ ಲೆಕ್ಕ
ಗಾನಲಹರಿಗೆ ಪುಟಗಳ ಎಣಿಕೆ
ಹನಿಗಳ ಕೂಡಿಡದ ಸಾಗರ
ದಡದ ಜೊತೆಗಿನ ಒಲವಲಿ ಮಗ್ನ
ಕೂಡಿ ಉಂಡ ಚಿಟ್ಟೆ ಹೂ ಆಟ ಬರೆದಿಡಲು
ಸೀಸದಕಡ್ಡಿಯ ತುದಿ ಮುರಿದಿದೆ
ಬದುಕು 'ಸೊನ್ನೆ' ಇರದ ಕ್ಯಾಲ್ಕುಲೇಟರ್
ನಾವೂ ಮತ್ತು ನೀವೂ....
ಕವಿತೆ ಬರೆದು
ಸಾಲು ಎಣಿಸಿದ ಕವಿಯೊಳಗೆ
ಭಾವ ಸಮಾಧಿ ಮಣ್ಣಾಗಿ ಕರಗಿ ಎಷ್ಟು ದಿನ;
ಅಮ್ಮನ ಬಿಕ್ಕು ಎಷ್ಟು ಹನಿಗಳ ಸಂಗ್ರಹ ಕೋಟೆ
ಮಸಿ ಬಿದ್ದ ಚಿತ್ರ ಅಷ್ಟೇ ಲೆಕ್ಕ
ಈ ಕ್ಷಣದ ಬದುಕು
ಬದುಕಿದರಾಯಿತು ಮಗ್ಗಿ ಪುಸ್ತಕ ಕೈಯಲ್ಲಿರಲಿ
ಹೃದಯದವರೆಗೆ ಬೇಡ
ಒಮ್ಮೊಮ್ಮೆ ಲೆಕ್ಕ ತಪ್ಪಿದರೂ ಖುಷಿ
ಕಾಲಕೆಳಗೆ ಗಿರಕಿ ನಮಗೂ ಮತ್ತು
ಜೊತೆಯಲ್ಲಿದ್ದವರಿಗೂ…
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.