ಲಿಂಗರಾಜ ಸೊಟ್ಟಪ್ಪನವರ
ತಲೆ ತಗ್ಗಿಸಿ ನಡೆಯುವಾಗ
ಜಗತ್ತು ನನ್ನನ್ನು ಹೀಗೆ ನೋಡುತ್ತಿರಬಹುದೆಂದು ಯೋಚಿಸಿಯೇ ಇರಲಿಲ್ಲ
ಅಥವಾ ಜಗತ್ತು ಹೀಗೆ ನೋಡಬಾರದೆಂದು ಬಯಸಿ
ಹಾಗೆ ನಡೆಯುತ್ತಿದ್ದೆನೋ ಹೇಗೋ
ಕೆಲವರ ದೃಷ್ಟಿ
ಸೂರ್ಯ ರಶ್ಮಿಯಿಂದ ತೊಳೆದಂತಹ ನನ್ನ ಕೆನ್ನೆ ತುಟಿಗಳ ಮೇಲೆ
ಇನ್ನು ಕೆಲವರದು ಚಿಗುರುತ್ತಿರುವ ಎದೆಯ ಮೇಲೆ
ಹೂವಿನಂತಹ ಹೊಕ್ಕುಳ
ತುಸುವೆ ಕೊಬ್ಬು ಹೊತ್ತು ಉಬ್ಬುತ್ತಿರುವ ಕಿಬ್ಬೊಟ್ಟೆ
ಹಬ್ಬುತ್ತಿರುವ ಸೊಂಟದ ಬದಿ
ಪೊದೆಯನ್ನು ಹೋಳು ಮಾಡಿ ಮೊಲ ಹುಡುಕುತ್ತಿರುವ ಬೇಟೆಗಾರರಂತೆ
ನಾನು ಧರಿಸಿದ್ದನ್ನು ಸರಿಸಿ
ತೊಟ್ಟಿದ್ದೆಲ್ಲವನು ಮುಟ್ಟಿ ಮುಕ್ಕುವಂತೆ ದಿಟ್ಟಿಸುತ್ತ
ಗಿರಕಿ ಹಾಕುವರು ಹೊಕ್ಕುಳ ಸುತ್ತ
ಅವರು ತಗ್ಗುಗಳಲಿ ಮುಳುಗಿ ಉಬ್ಬುಗಳಲಿ ಉದಯಿಸಬಯಸುತ್ತಾರೆ
ನಿತ್ಯ ಸೂರ್ಯನಂತೆ
ಅವನು ಅಷ್ಟೇ
ಬೀದಿ ಬಸವನಂತೆ ಮೈ ಏರಿ ಬರುತ್ತಾನೆ
ಎಲ್ಲ ತೆರೆದು ತೋರುವಂತೆ ಬೆಳಕು ತೂರುತ್ತಾನೆ
ಇವರ ಬಯಕೆಗೆ ನಾನು ಹೀಚಿ ಹಿಗ್ಗಬೇಕು ಕುಗ್ಗಿ ಬಾಗಬೇಕು
ಅವರು ಬೆನ್ನೆರಿಯೋ
ಹೆದೆಯೆರಿಯೋ ಸವಾರಿ ಮಾಡಬಯಸುತ್ತಾರೆ
ಅವರ ಈ ಬಯಕೆಯ ಬಲು ಭಾರಗಳನು
ಸಂಭಾಳಿಸುತ್ತ ನಾನು ಸಾಗಬೇಕು
ಎಡವಿ ಬಿದ್ದೇನೆಂಬ ಜೋಕೆ
ತುಸು ಹಿಂಭಾರ ತುಸು ಮುಂಭಾರ
ಈ ನಾಜೂಕಿನ ನಡುಗೆ ಸಾಕು ಸಾಕಾಗಿದೆ
ಮತ್ತೆ ಕೆಲವರು
ಕಿರು ಬೆರಳಿನಿಂದಲೋ ಪಾದದಿಂದಲೋ ಶುರು ಮಾಡುವ ಪರಮ ಭಕ್ತರಂತೆ ಕಾಣುತ್ತಾರೆ
ಹದಿ ಬದಿಗಳನ್ನೆಲ್ಲ ಸವರಿ ಗೀರಿ ತರಾತುರಿಯಲಿ ಗಮ್ಯವನು
ಮೆರೆಯುವ ಅವರ ಉಮೇದರಿ
ಒಳತೊಡೆಯಲಿ ಜರಿ ಹರಿದಂತೆ
ಉರಿ ಉರಿ
ಉಳಿಸಿ ಹೋದ ಯಾರ ನೆನಪುಗಳೂ
ಇಲ್ಲಿ ಧಗ ಧಗ
ಈ ದಾರಿ
ಚರಿತ್ರೆಯ ಕತೆ ನೆನಪಿಸುತ್ತದೆ
ಕೆನ್ನೆ ತುಟಿ ಮೊಲೆ ನಿತಂಬ
ತೊಡೆ ಯೋನಿ ಹೊಕ್ಕುಳು
ಈ ಎಲ್ಲ ಭಾರಗಳನು
ಎಲ್ಲ ತೊಡರುಗಳನ್ನು ಒಂದೊಂದೇ ಕಿತ್ತೆಸೆಯಬೇಕೆನಿಸುತ್ತದೆ
ಈ ಬೀದಿಯ ಕಣ್ಣು ಬಾಯಿಗೆ
ಆದರೆ
ಇವರು ಬೀದಿ ನಾಯಿಗಳಲ್ಲ ಮನುಷ್ಯರು
ನನ್ನೆಲ್ಲ ಭಾರಗಳನು ಮತ್ತೆ ನನಗೆ ಹೊದಿಸಿ
ಹೊನ್ನ ಗೊಂಬೆಯಾಗಿಸಿ
ಒಬ್ಬೊಬ್ಬರೇ ಮುಕ್ಕಲು ಒಟ್ಟಾಗಿ ಸಾಲುಗಟ್ಟುತ್ತಾರೆ
ಇವರು ಮನುಷ್ಯರು
ಲಿಂಗರಾಜ ಸೊಟ್ಟಪ್ಪನವರ
ಹಾವೇರಿ ಜಿಲ್ಲೆಯ ಹಿರೇಮರಳಿಹಳ್ಳಿಯವರು. ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ. ಇವರ ಅನೇಕ ಕಥೆ, ಕವಿತೆಗಳು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ. ಕಣವಿ ಕಾವ್ಯ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ದೊರೆತಿವೆ. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ 2020ರಲ್ಲಿ ಇವರ ‘ಕೊನಡೆ’ ಮೆಚ್ಚುಗೆ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.