ADVERTISEMENT

ನಿಂಗಪ್ಪ ಮುದೇನೂರು ಅವರ ಕವನ: ಕ್ಯೂಆರ್ ಕೋಡ್ ಕವಿತೆ

ನಿಂಗಪ್ಪ ಮುದೇನೂರು
Published 10 ಮೇ 2025, 23:30 IST
Last Updated 10 ಮೇ 2025, 23:30 IST
   

ಅದೇನೋ ಚೌಕದ ಮನೆ
ಯಾರಿಗೂ ತಿಳಿಯಲಾರದ ಗೆರೆ ಗೆರೆಯ ನಡುವೆ
ಗಾಢ ಮೌನ!
ಕವಿತೆ ಅದೃಶ್ಯ,ಕವಿಯ ಭಾವವೂ ಅದೃಶ್ಯ
ನುಡಿ ನುಡಿಗೂ ಇರುವ ಶಬ್ಧದ ಸೇತುವೆಯ
ದಾಟಿಬರುವ ತವಕ

ಹಲುಬುತ್ತಿದೆ ಮನಸ್ಸು ಹಳೆಯ ಸಂಪ್ರದಾಯವ ನೆನೆದು
ಛಂದಸ್ಸು, ಪ್ರಾಸ, ಯತಿ, ವಡಿ
ನನ್ನುಸಿರ ನಿಲ್ದಾಣವೆಲ್ಲೋ...!?
ಕವಿಯೇ, ನಿಲ್ಲು ಎಂದರೆ ನಿಲ್ಲಬೇಕು, ಕೂಡು ಎಂದರೆ ಕೂಡಬೇಕು
ಸಹೃದಯರ ಲೆಕ್ಕವೂ ಒಂದಿದೆಯೆಲ್ಲಾ

ಆದರೂ ಇದು ಕ್ಯೂ-
ಆರ್-ಕೋಡು!
ದಂಡಿ-ಬಾಮಹರಿಗೂ ನಿಲುಕಲಾರದ ಜೀವಮೀಮಾಂಸೆಯ ಪೋಡು!

ADVERTISEMENT


ಕವಿಗೆ ಕೋಡು ಮೂಡುವಂತಹದ್ದೇನಿದೆ ಇಲ್ಲಿ?
ಒಂದು ಚೌಕದ ಮನೆಯಲ್ಲಿ ಕುಳಿತು ಚಾವಿಯಾಡಿದರೆ
ಮುಗಿಯಿತು
ಕಾಣುವ, ಪರಸ್ಪರ ಕೈಕುಲುಕುವ, ಮಾತಾಡುವ, ಹಂಚುಣ್ಣುವ
ಸುಖ-ದುಃಖದ ಮಮತೆಯೂ ಇಲ್ಲುಂಟು
ಬೇಂದ್ರೆ ಕಾಳಿದಾಸರು ಬದುಕಿದ್ದರೆ
ಸಾಂಖ್ಯ ಯೋಗಕ್ಕೂ ಬೆಲೆಯುಂಟು!
ಅವರ ಔದುಂಬರಗಾಥೆ, ಮೇಘದೂತ,
ಶಾಕುಂತಲಗಳನ್ನೆಲ್ಲ ನಾವು ಇಲ್ಲಿಯೇ ದಕ್ಕಿಸಿಕೊಳ್ಳಬಹುದು.

ನಮ್ಮ ಮನೆಯಜಾಡು, ಲೋಕದಜಾಡು
ಮನಮನದ ‘ಜಾಡ'ತೊಳೆದ ಆಧುನಿಕ ಜಾಡಗಾರರೂ
ನಾವಾಗಬಹುದು

ನಾವು ಏನೇ ಆದರೂ ಏನಂತೆ?
ಮನುಷ್ಯರಾಗಿದ್ದರೆ ಸಾಕು
ಒಂದು ಸಣ್ಣ ಚಿಪ್ಪಿನಲ್ಲಿ ಅವಿತು ಕುಳಿತು
ಲೋಕಕ್ಕೆ ಬೆಳಕಾಗುವ
ಒಂದು ನುಡಿ ಮುತ್ತಾದರೂ ಸಾಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.