ADVERTISEMENT

ಆಶಾ ಜಗದೀಶ್ ಅವರ ಕವಿತೆ: ನಾವು ಯಾಕಾದರೂ ಹೀಗೆ..

ಆಶಾ ಜಗದೀಶ್
Published 16 ಅಕ್ಟೋಬರ್ 2022, 0:00 IST
Last Updated 16 ಅಕ್ಟೋಬರ್ 2022, 0:00 IST
ಆಶಾ ಜಗದೀಶ್ ಅವರ ಕವಿತೆ: ನಾವು ಯಾಕಾದರೂ ಹೀಗೆ..
ಆಶಾ ಜಗದೀಶ್ ಅವರ ಕವಿತೆ: ನಾವು ಯಾಕಾದರೂ ಹೀಗೆ..   

ನೀನಲ್ಲಿ ಹಸಿದು ಕೂತಿದ್ದೆ
ನಾನಿಲ್ಲಿ ಉಂಡು ತಾಂಬೂಲ ಮೆಲ್ಲುತ್ತಿದ್ದೆ
ನಾನು ಎಲೆ ತುಂಬ ಬಡಿಸಿಟ್ಟು ಕಾಯುತ್ತಿರುವಾಗ
ನೀನು ಮತ್ತಲ್ಲೋ ಉಂಡು ಮಲಗಿದ್ದೆ

ನಾವು ಯಾಕಾದರೂ ಹೀಗೆ
ಹೊಂದದ ಕೀಲಿಯೊಳಗಿನ ಕೀಲಿಕೈಗಳಂತೆ
ಯಾರು ಹೀಗೆ ನಮ್ಮನ್ನು ಬೆಸೆದದ್ದು
ಒಂದಾಗದ ನದಿಗಳ ಸೇರಿಸುವ
ಹಟ ತೊಟ್ಟವರಂತೆ

ನೀನಲ್ಲಿ ಸುಮ್ಮನೇ ನೆನೆದರೆ
ನಾನಿಲ್ಲಿ ಆಕಳಿಸುತ್ತೇನೆ
ನೀನಲ್ಲಿ ಹಾಳದವಳು ಎಂದು ಬೈದರೆ
ನಾನಿಲ್ಲಿ ಬಿಕ್ಕಳಿಸುತ್ತೇನೆ
ನೀ ಸಣ್ಣಗೆ ನೊಂದರೂ
ನಾನಿಲ್ಲಿ ಕಣ್ಣ ಹನಿಗಳ ಮಳೆಯಲ್ಲಿ
ತೊಯ್ಯುತ್ತೇನೆ

ADVERTISEMENT

ನಾವು ಯಾಕಾದರೂ ಹೀಗೆ
ಉತ್ತರಗಳೇ ಇಲ್ಲದ ಪ್ರಶ್ನೆಗಳ ಮೂಟೆಯನ್ನು
ಹೊತ್ತುಬಂದಿದ್ದೇವೆ
ಲೇಖನ ಚಿಹ್ನೆಗಳ ವಿವರಿಸ ಹೊರಟು
ಅಂದಾಜು ತಪ್ಪಿದ್ದೇವೆ

ಸುಮ್ಮನೇ ನಿನ್ನ ನೆನೆಯುತ್ತ ಕೂತರೆ ಅಲ್ಪವಿರಾಮ
ನೆನೆಯುತ್ತ ಅರ್ಧಕ್ಕೆ ನೆನಪುಗಳ ಗಂಟು ಕಟ್ಟಿ
ಎಸೆದು ಹೊರಟರೆ ಅರ್ಧ ವಿರಾಮ
ನೆನಪುಗಳ ಸುಳಿಯಲ್ಲಿ ಸಿಲುಕಿಬಿಟ್ಟರೆ
ತಿಳಿದುಕೋ ಪೂರ್ಣವಿರಾಮವೇ...
ನಮ್ಮ ವಿವರಣೆ ಗುರಿ ತಲುಪುವುದಿಲ್ಲ

ನಾವು ಯಾಕಾದರೂ ಹೀಗೆ
ಬಾರಬಾರದ ಪತ್ರ ಪೋಸ್ಟಾದಂತೆ
ಬ್ರಹ್ಮ ಗಂಟಿನ ತಪ್ಪು ಲೆಕ್ಕದಲ್ಲಿ
ಬಂಧಿಯಾದವರಂತೆ
ಒಂದಾಗಿದ್ದೇವೆ ಇಲ್ಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.