ADVERTISEMENT

ಚಂದ್ರಶೇಖರ ತಾಳ್ಯ ಅವರ ಕವಿತೆ: ಗಂಗೆ ಮಲೆತು...

ಚಂದ್ರಶೇಖರ ತಾಳ್ಯ
Published 17 ಮೇ 2025, 23:30 IST
Last Updated 17 ಮೇ 2025, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಯಾರ ಮಗಳೋ ಏನೋ
ಬಿದ್ದಿದಾಳೆ
ಮಹಾನಗರದ ರಾಜಬೀದಿಯ
ಪಕ್ಕದಲ್ಲೇ
ಹಾಸಿ ಬಿದ್ದಿರುವ ಕಾಲು ದಾರಿಯಲ್ಲೇ.

ಬ್ರಮರ ಭ್ರಮಿಸಿ ಭ್ರಮಿಸಿ
ಪಕಳೆ ಪಕಳೆ ವಿರಮಿಸಿ
ಕುಸುಮ ಕೋಮಲೆ
ಮಾಗಿ ಚಳಿಗೂ ನಡುಗದೆ
ಮಲಗಿದ್ದಾಳೆ
ಯಾರಿಗೂ ಅಂಜದಲೆ.

ADVERTISEMENT

ಆಕಾಶ ಗಂಗೆ, ಬೆಳಕ ಕುಡಿದು
ಬೆಳಕಾದವಳು, ರಕ್ಕಸ ನಗೆಗೆ
ಬೆಚ್ಚಿಬಿದ್ದವಳು
ಉಗುರು ಬಿಡಿಸಿದ ವಕ್ರ ಚಿತ್ತಾರಕ್ಕೆ
ನಲುಗಿ ನಲುಗಿ
ಬೆಳಕ ನಂದಿಸಿದ ಕಗ್ಗತ್ತಲಿನ ಬಿಗಿ ಹಿಡಿತದಲ್ಲಿ
ಕತ್ತಲಾದವಳು.

ತೆರೆದ ಮೈ ನಜ್ಜುಗುಜ್ಜು
ರೆಪ್ಪೆಯಲುಗದ ನಕ್ಷತ್ರ ಕಣ್ಣು
ಗೀಚು ಗಾಯಗಳ ಬೇವರ್ಸಿ
ರಂಗು ರಂಗಿನ ಕನಸು ಜಜ್ಜಿ
ಚರಂಡಿಗೆ ಚಲ್ಲಿ
ಹೆಪ್ಪುಗಟ್ಟಿದ ನೆತ್ತರು
ಬಿಟ್ಟ ಕಣ್ಣು ಬಿಟ್ಟಂತೆ
ಆಕಾಶದ ತುಂಬ ಹರವಿದ್ದಾಳೆ
ನಿಸ್ತೇಜ ನೋಟ.

ಗಂಗೆ ಮಲೆತು ನಾತ ಹಬ್ಬಿತು
ಗಲ್ಲಿ ಗಲ್ಲಿಗಳ ಹೊಕ್ಕು ರಾಜ ಬೀದಿಗೂ ಇಣುಕಿತು
ಅಲ್ಲಿ ಆಹಾ ದಿವ್ಯಾಂಬರಿ ಸುಂದರಿಯರು
ತಮ್ಮದೇ ಪ್ರತಿಕೃತಿಗೆ, ಬಿದ್ದ ವಿಕಾರಾಕೃತಿಗೆ
ದಿವ್ಯ ನಿರ್ಲಕ್ಷಿತರು, ನಡೆದಿರುವರು
ಮಹಾಬೀದಿಯ ರಾಜ ಕಳೆಯಲ್ಲಿ
ತೇಲುಗಣ್ಣಿನ ಗಗನ ಗಮನೆಯರು.

ತತ್ತರಿಸಲಿಲ್ಲ ಹಿಮಾಲಯ
ಕಂಪಿಸಲಿಲ್ಲ ನೆಲ ತಾಯಿ
ಉಕ್ಕೇರಿ ಉಕ್ಕರಿಸಲಿಲ್ಲ ಕಡಲು
ಕಗ್ಗತ್ತಲ ಮೂಲೆಯಲ್ಲಿ
ಎಲ್ಲವೂ ನಿಶ್ಯಬ್ದ
ರಾಜಬೀದಿಯಲ್ಲಿ ಶಬ್ದವೋ ಶಬ್ದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.