ADVERTISEMENT

ಕನ್ನಡ ಭಾಷೆ ಬಡವಾಗಿಲ್ಲ: ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 15:56 IST
Last Updated 6 ಜನವರಿ 2019, 15:56 IST
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.– ಪ್ರಜಾವಾಣಿ ಚಿತ್ರ/ ಬಿ.ಎಂ.ಕೇದಾರನಾಥ
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.– ಪ್ರಜಾವಾಣಿ ಚಿತ್ರ/ ಬಿ.ಎಂ.ಕೇದಾರನಾಥ   

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ‘ಕನ್ನಡ ಭಾಷೆ ನಾವು ಊಹಿಸುವಷ್ಟು ಬಡವಾಗಿಲ್ಲ. ಅದನ್ನು ಇನ್ನಷ್ಟು ಶ್ರೀಮಂತಗೊಳಿಸುವ ಕೆಲಸ ಆಗಬೇಕಷ್ಟೆ’ ಎಂದು 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ಈಗ ಪ್ರತಿ ವರ್ಷ ರಾಜ್ಯದ ಹೊರಗಿನ ಸರಾಸರಿ ಹತ್ತು ವಿಶ್ವವಿದ್ಯಾಲಯಗಳಲ್ಲಿ ನಮ್ಮ ವಚನ ಸಾಹಿತ್ಯ ಪಠ್ಯವಾಗುತ್ತಿದೆ. ವಿದೇಶಗಳಲ್ಲಿ ಬೇರೆ ಭಾಷೆಗಳಲ್ಲಿ ವಚನ ಸಾಹಿತ್ಯಕ್ಕೆ ಸಂಗೀತ ಸಂಯೋಜಿಸಿ, ಕೇಳುತ್ತಿದ್ದಾರೆ. ಈಗ ಕನ್ನಡ ಸಾಹಿತ್ಯ ಅನುಕರಣೆಗೆ ಸೀಮಿತವಾಗಿಲ್ಲ. ಸಾಹಿತಿಗಳ ಆಲೋಚನಾ ಕ್ರಮವೂ ಬದಲಾಗಿದೆ’ ಎಂದರು.

ಸರ್ಕಾರ ಬದಲಾದ ತಕ್ಷಣವೇ ಶಿಕ್ಷಣ ನೀತಿ ಬದಲಾಗುವುದು ತಪ್ಪಬೇಕು. ಇದಕ್ಕಾಗಿ ಶಿಕ್ಷಣದ ರಾಷ್ಟ್ರೀಕರಣ ಆಗಬೇಕು. ಕನ್ನಡಿಗರ ಪಾಲಿಗೆ ಮುತ್ಸದಿ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಈ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

‘ಮೂರು ದಿನಗಳ ಸಾಹಿತ್ಯ ಸಮ್ಮೇಳನ ನನಗೆ ವಿಶಿಷ್ಟವಾದ ಅನುಭವಗಳನ್ನು ನೀಡಿದೆ. ಕಂಡು, ಕೇಳರಿಯದ ರೀತಿಯಲ್ಲಿ ಸಮ್ಮೇಳನ ನಡೆದಿದೆ. ನಾಡು, ನುಡಿ ಕಟ್ಟಲು ಜನರು ಒಂದಾದ ರೀತಿ ನನ್ನಲ್ಲಿ ಬೆರಗು ಹುಟ್ಟಿಸಿದೆ. ನನ್ನ ಭಾವನೆಗಳ ಆಳದಲ್ಲಿ ಬಹಳ ಬದಲಾವಣೆಗಳೂ ಆಗಿವೆ’ ಎಂದು ಕಂಬಾರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.