ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ | ಮಹಿಳಾ ಕವಿಗೋಷ್ಠಿಯ ಭಿನ್ನ ಭಾವಬಿತ್ತಿ

ಜಯಸಿಂಹ ಆರ್.
Published 21 ಡಿಸೆಂಬರ್ 2024, 4:19 IST
Last Updated 21 ಡಿಸೆಂಬರ್ 2024, 4:19 IST
<div class="paragraphs"><p>ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ</p></div>

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

   

ಪ್ರಜಾವಾಣಿ ಚಿತ್ರ; ಅನೂಪ್‌ ಟಿ ರಾಘ 

‘ಮಹಿಳೆಯರು ಬರೆದ ಕಾವ್ಯ ಯಾರ ಕುರಿತದ್ದಾಗಿರುತ್ತದೆ? ಅದು ವೈಯಕ್ತಿಕವೇ ಆಗಿರುತ್ತದೆ. ಅವರು ಸಾಮಾಜಿಕ ನೆಲೆಯಲ್ಲಿ ನಿಂತು ಸಮಾಜಕ್ಕೆ ಸ್ಪಂದಿಸಬೇಕು...’ ಎಂದು ಸಾಹಿತ್ಯ ಸಮ್ಮೇಳನದ ಮಹಿಳಾ ಕವಿಗೋಷ್ಠಿಯ ಆಶಯವನ್ನು ತೆರೆದಿಟ್ಟ ಕವಯತ್ರಿ ಕೆ.ಎನ್‌.ಲಾವಣ್ಯಪ್ರಭಾ ಅವರ ನುಡಿಗಳನ್ನು ನಿವಾಳಿಸಿ ಎಸೆದ ಕವಯತ್ರಿಯರು, ಈ ನೆಲದಲ್ಲಿ ನಿಂತು ಜಗವನ್ನೆಲ್ಲವನ್ನೂ ಕವನವಾಗಿಸಿದರು.

ADVERTISEMENT

‘ಮಹಿಳೆಯರು ತಮ್ಮ ನೋವು–ನಲಿವುಗಳನ್ನೇ ಬರೆಯುತ್ತಾರೆ. ಅವರು ಸಮಾಜಕೇಂದ್ರಿತವಾಗಿ ಬರೆಯುವಂತಾಗಬೇಕು. ಸಮಾಜದ ಕೆಡಕುಗಳಿಗೆ ಎದುರಾಗಿ, ಎಚ್ಚರಿಕೆ ಗಂಟೆಯಾಗಬೇಕು’ ಎಂದು ಲಾವಣ್ಯಪ್ರಭಾ ಕರೆಕೊಟ್ಟರು. 

ಅವರ ಆಶಯ ನುಡಿಗಳಿಗೆ ಕವಯತ್ರಿಯರು ಸವಾಲೆಸೆದಂತೆ ನಿಂತರು. ಕರಾವಳಿ, ಬಯಲುಸೀಮೆ, ಗಡಿಯಾಚೆ, ಕಾಂಕ್ರೀಟ್‌ ಕಾಡುಗಳಿಂದ ತಮ್ಮ ಅನುಭವ ಮೂಟೆ ಹೊತ್ತು ತಂದ ಕವಯತ್ರಿಯರು, ಅಮ್ಮ ಕುದಿಸಿದ ಎಸರಿನ ಘಮದಿಂದ ಯುದ್ಧ ಚೆಲ್ಲಿದ ರಕ್ತದ ಕಟುವಾಸನೆಯನ್ನೂ ಕಾವ್ಯಕ್ಕಿಳಿಸಿದರು.

ದೂರದ ಕೊಪ್ಪಳದಿಂದ ಬಂದಿದ್ದ ಸಾವಿತ್ರಿ ಮಜುಂದಾರ್, ‘ಮಗ್ಗವೇಳುತ್ತದೆ ಕೇಸರಿ ಶಾಲು, ಹಸಿರು ಚಾದರ, ಬಿಳಿಯ ನಿಲುವಂಗಿ ನೇಯ್ದ ನೂಲು ನನ್ನದೆಂದು. ಮರ ಹೇಳುತ್ತದೆ ಶವಪೆಟ್ಟಿಗೆಗೆ, ಉತ್ಸವದ ಪಲ್ಲಕ್ಕಿಗೆ, ತಾಯಿ ಒಲೆಗೆ ಇಟ್ಟ ಕಟ್ಟಿಗೇ ನನ್ನದೇ ಎಂದು. ನೆಲ ಹೇಳತ್ತದೆ ಮಂದಿರ ಮಸೀದಿ ಚರ್ಚು ಎಲ್ಲವೂ ನನ್ನದೆಂದು’ ತಮ್ಮ ‘ಭಾವೈಕ್ಯತೆ’ ಕವನವನ್ನು ತೆರೆದಿಟ್ಟರು. ಅವರ ವಾಚನಕ್ಕೆ ವೇದಿಕೆ ಮೇಲಿದ್ದವರು, ಕೆಳಗಿದ್ದವರೂ ತಲೆದೂಗಿ ಉತ್ತೇಜಿಸಿದರು.

‘ಮತ್ತೆ ಯುದ್ಧವಾರಂಭ ಮೇಲೆ’ ಎಂದು ವಾಚಿಸಿದ ಲಲಿತಾ ಕೆ.ಹೊಸಪ್ಯಾಟಿ, ‘ಸುತ್ತಿದ ಹಾಸಿಗೆ ಕೆಳಗೆ ಕಪ್ಪನೆ ಹೆಪ್ಪುಗಟ್ಟಿದೆ ರಕ್ತದ ಕಲೆ, ಸುಕ್ಕುಗಟ್ಟಿದ ಕೆನ್ನೆಯ ಮೇಲೆ ಅವನಿಟ್ಟ ಒಡೆಯದ ಮುತ್ತುಗಳಿವೆ, ಕ್ರಾಪು ಕೂರಿಸಿದ ಕನ್ನಡಿಯ ಮೇಲೆ ಒಡೆದ ಗಾಜಿನ ದೂಳುಗಳಿವೆ, ದಿಬ್ಬಣಕ್ಕೆ ಹೊಲೆಸಿಟ್ಟ ನಿಲುವಂಗಿ ಕೆಳಗೆ, ಔತಣಕ್ಕೆ ಕಾದುಕೂತ ರಣಹದ್ದುಗಳಿವೆ’ ಎಂದು ಯುದ್ಧದ ಭೀಕರತೆಯನ್ನು ಬಿಚ್ಚಿಟ್ಟರು.

‘ಬೀಸುತ್ತಿದ್ದ ಗಾಳಿಗೆ ಹಸಿಕೂದಲ ಕೆದರಿ, ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡಿ ಬೆಂದಿದ್ದು ಬೇಡವೆನಿಸಿತೇನೋ... ಸುಟ್ಟವಾಸನೆ ವ್ಯಾಪಿಸಿದೆ ಬಾನಗಲ. ಬಾನಗಲ ವ್ಯಾಪಿಸಿದೆ ಕಿರುಚುವ, ಕಂಪಿಸುವ ದ್ರೌಪದಿಗಳ ಆರ್ಥಸ್ವರ’ ಎಂದು ಸಿ.ಸುಮಾರಾಣಿ ಶಂಭು ‘ದ್ರೌಪದಿಯ ನೆನಪು’ ಚಿತ್ರಿಸಿದರು.

‘ಹಳ್ಳಿಯಲ್ಲಿನ ವಿಶಾಲ ಮನೆಗಳು ಒಂಟಿಯಾಗಿ ನಿಟ್ಟುಸಿರಿಡುತ್ತಿವೆ. ಒಳಮನೆಯಲ್ಲಿನ ಕಿಟಕಿ ಬಾಗಿಲುಗಳು ಪರಸ್ಪರ ಸಂಭಾಷಿಸುತ್ತಿವೆ. ತಮ್ಮೊಳಗೆ ನೂರಾರು ಕತೆ ಅಡಗಿಸಿಕೊಂಡ ಗೋಡೆಗಳು ವೃದ್ಧರ ಕೈಹಿಡಿದು ನಡೆಸುತ್ತಿವೆ’ ಎಂದು ಮಲೆನಾಡಿನ ಮಾನವ ಬರಡುತನವನ್ನು ಗೀತಾ ಮಕ್ಕಿಮನೆ ಕಟ್ಟಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.