ADVERTISEMENT

ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವಾದನ ಮೋಡಿ; ಪಾಶ್ಚಾತ್ಯ, ಶಾಸ್ತ್ರೀಯ ಸಂಗೀತ ರಸಾಯನ!

ಮೋಹನ್ ಕುಮಾರ ಸಿ.
Published 23 ಡಿಸೆಂಬರ್ 2024, 5:44 IST
Last Updated 23 ಡಿಸೆಂಬರ್ 2024, 5:44 IST
ಮಂಡ್ಯದಲ್ಲಿ ಭಾನುವಾರ ಮೈಸೂರಿನ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವಾದನದೊಂದಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆಬಿತ್ತು –ಪ್ರಜಾವಾಣಿ ಚಿತ್ರ: ಅನೂಪ್‌ ರಾಘ. ಟಿ
ಮಂಡ್ಯದಲ್ಲಿ ಭಾನುವಾರ ಮೈಸೂರಿನ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವಾದನದೊಂದಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆಬಿತ್ತು –ಪ್ರಜಾವಾಣಿ ಚಿತ್ರ: ಅನೂಪ್‌ ರಾಘ. ಟಿ   

ಸಮ್ಮೇಳನದ ಕೊನೆಯ ದಿನ ‘ಕರ್ನಾಟಕ ಪೊಲೀಸ್‌ ಬ್ಯಾಂಡ್‌’ನ ಪಾಶ್ಚಾತ್ಯ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತದ ಮಾಧುರ್ಯದಲೆಯಲಿ ಸಂಗೀತ ಪ್ರಿಯರು ತೇಲಿದರು. ‘ಸಿಂಫೋನಿ’ಯ ಸ್ವರ ವಿಸ್ತಾರ, ‘ಫ್ಯೂಷನ್‌’ ಜಾದೂಗೆ ತಲೆದೂಗಿದರು.  

ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಧಾನ ವೇದಿಕೆಯಲ್ಲಿ ಬ್ಯಾಂಡ್‌ ಮಾಯಾಲೋಕ ಸೃಷ್ಟಿಸಿತು. ಮೂರು ದಿನ ವಿಚಾರಗೋಷ್ಠಿಗಳಲ್ಲಿ ಕಾವ್ಯ, ವಿಚಾರ ಕೇಳಿದವರಿಗೆ, ಸಂಗೀತವು ವಿಶಿಷ್ಟ ಅನುಭೂತಿ ನೀಡಿತು.

ಭಕ್ತಿ ಭಾವ, ಕನ್ನಡ ಅಭಿಮಾನವು ಪ್ರತಿ ಸಂಯೋಜನೆ ಕೇಳಿದಾಗಲೂ ಮೂಡಿತ್ತು. ಮೈಸೂರು ಸಂಸ್ಥಾನ ಗೀತೆ ‘ಕಾಯೌ ಶ್ರೀ ಗೌರಿ ಕರುಣಾ ಲಹರಿ’ ನುಡಿಸುವಾಗ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು.

ADVERTISEMENT

ನಂತರ ಸಮೂಹ ವಾದ್ಯಮೇಳವು ಹಂಸಧ್ವನಿ ರಾಗದ ಕನಕದಾಸರ ಕೃತಿ ‘ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ’ ನುಡಿಸಿತು. ಭಕ್ತಿ ರಸವು ಎಲ್ಲರ ಮೊಗದಲ್ಲಿ ಮೂಡಿತು. ಕನ್ನಡದೇವಿ ಭುವನೇಶ್ವರಿ ‘ಶಾರದೆ’ಯಾಗಿ ನಾದದಲೆಯಲ್ಲಿ ಕಂಗೊಳಿಸಿದಳು. 

ಸುಶ್ರಾವ್ಯವಾಗಿ ಕ್ಲಾರಿಯೊನೇಟ್‌, ಟ್ರಂಪೆಟ್‌, ಸ್ಯಾಕ್ಸೋ ಫೋನ್‌, ಟ್ರಂಬೋನ್, ಹಾರ್ನ್, ಟುಬಾ, ಕೊಳಲು, ಡ್ರಮ್ಸ್ ಸೇರಿದಂತೆ ವಾದ್ಯಗಳೊಂದಿಗೆ ಶಾಸ್ತ್ರೀಯ ವಾದ್ಯಗಳಾದ ತಬಲಾ, ಮೃದಂಗ, ವಯಲಿನ್, ಮ್ಯಾಂಡಲೀನ್, ವೀಣೆಗಳು ಮಿಳಿತಗೊಂಡವು. ಪಾಶ್ಚಾತ್ಯ– ಭಾರತೀಯ ಶಾಸ್ತ್ರೀಯ ಸಂಗೀತ ರಸಾಯನ ಪಾಕವನ್ನು ಸವಿದರು. 

ಚನ್ನವೀರ ಕಣವಿ ಅವರ ‘ವಿಶ್ವ ವಿನೂತನ ವಿದ್ಯಾ ಚೇತನ‌. ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ’ ನುಡಿಸಿದ ನಂತರ, ಶಾಸ್ತ್ರೀಯ ವೃಂದವು ‘ಪ್ರೀಣ ಯಾಮೋ ವಾಸುದೇವಂ’ ಕೃತಿಯನ್ನು ‘ಮೋಹನ’ ರಾಗದಲ್ಲಿ ನುಡಿಸಿದರು. ‘ವಿಜಯನಗರ ವೀರಪುತ್ರ’ ಚಿತ್ರದ ಎಂ.ಎಸ್‌.ವಿಶ್ವನಾಥನ್ ಸಂಗೀತ ನಿರ್ದೇಶನದ ‘ಅಪಾರ ಕೀರ್ತಿಗಳಿಸಿ ಮೆರೆದ ಭವ್ಯ ನಾಡಿದು’ ಪ್ರಸ್ತುತಪಡಿಸಿದರು. ನಂತರ ‘ಗಣನಾಯಕಾಯ, ಗಣದೈವತಾಯ ಗಣಾಧ್ಯಕ್ಷಾಯ ಧೀಮಹಿ’ ಗೀತೆಯು ಭಕ್ತಿಭಾವ ಮೂಡಿಸಿತು.  

ಬೆಳಗಿದ ‘ಕೈ’ ಬೆಳಕು:

ಡಿ.ಎಸ್‌.ಕರ್ಕಿ ಅವರ ‘ಹಚ್ಚೇವು ಕನ್ನಡ ದೀಪ’ ನುಡಿಸುವಾಗ ಎಲ್ಲರೂ ಮೊಬೈಲ್ ಬೆಳಕನ್ನು ಬೀರಿದರು. ಸ್ವರ್ಗಸದೃಶ ವಾತಾವರಣ ನಿರ್ಮಾಣವಾಗಿತ್ತು. ‘ಭುವನೇಶ್ವರಿಗೆ ಜೈ’ ಎಂಬ ಜಯಕಾರಗಳು ಮೊಳಗಿದವು. ಆಕಸ್ಮಿಕ ಚಲನಚಿತ್ರದ ಹಂಸಲೇಖಾ ಸಂಗೀತ ನಿರ್ದೇಶನದ ರಾಜ್‌ಕುಮಾರ್ ಹಾಡಿರುವ ಗೀತೆ ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಗೀತೆಯನ್ನು ನುಡಿಸುವಾಗ ‘ಕನ್ನಡ ಕನ್ನಡ’ ಘೋಷಣೆಗಳು ಮೊಳಗಿದವು. 

ಪೊಲೀಸ್‌ ಬ್ಯಾಂಡ್‌ ವಾದನದೊಂದಿಗೆ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೈಭವದ ತೆರೆಬಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.