ಮಂಡ್ಯ: ‘ಸ್ತ್ರೀ ಎಂದರೆ ಇಂತಿಂಥ ಗುಣಗಳಿರಬೇಕು ಎಂದು ಪುರುಷರು ಆದರ್ಶಗಳನ್ನು ಹೇರುತ್ತಾರೆ. ಭ್ರೂಣ ಪತ್ತೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಬಯಸಿದ ಹೆಣ್ಣು ಸಿಗದಿದ್ದಾಗ ಆ್ಯಸಿಡ್ ದಾಳಿ ನಡೆಸುತ್ತಾರೆ. ಶೀಲದ ಅಸ್ತ್ರ ಹೂಡಿ ಬೆದರಿಸುತ್ತಾರೆ. ದೆಹಲಿಯಲ್ಲಿ ವೈದ್ಯೆ ಮೇಲೆ ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಮಣಿಪುರದಲ್ಲಿ ನಡುರಸ್ತೆಯಲ್ಲಿ ಹೆಣ್ಣನ್ನು ಬೆತ್ತಲಾಗಿಸಿ, ಅವಮಾನ ಮಾಡಿದ್ದಕ್ಕೆ ಇಡೀ ನಾಗರಿಕ ಸಮಾಜ ತಲೆತಗ್ಗಿಸಬೇಕು..’
ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಭಾನುವಾರ ನಡೆದ ‘ಸ್ತ್ರೀ ಅಂದರೆ ಅಷ್ಟೆ ಸಾಕೇ?’ ಗೋಷ್ಠಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಕಂಡುಕೊಳ್ಳಬೇಕಾದ ಪರಿಹಾರಗಳು ಅನಾವರಣಗೊಂಡವು.
‘ಪುರುಷ ಪ್ರಧಾನ ಸಮಾಜ ಹೊರಿಸಿರುವ ಆದರ್ಶಗಳ ಭಾರಕ್ಕೆ ಹೆಣ್ಣು ನಲುಗಿ ಹೋಗಿದ್ದಾಳೆ. ಎಲ್ಲ ರಂಗಗಳಲ್ಲೂ ಹೆಣ್ಣಿನ ಮೇಲೆ ದಬ್ಬಾಳಿಕೆ, ಶೋಷಣೆ ನಡೆಯುತ್ತಲೇ ಇದೆ. ಸ್ತ್ರೀ ತಲ್ಲಣಗಳಿಗೆ ನೂರೆಂಟು ಆಯಾಮಗಳಿವೆ’ ಎಂದು ಕವಯತ್ರಿ ಶುಭಶ್ರೀ ಪ್ರಸಾದ್ ಹೇಳಿದರು.
ಹತ್ಯೆ ಮಾಡುವ ಅಧಿಕಾರ: ಲೇಖಕಿ ತಾರಿಣಿ ಶುಭದಾಯಿಣಿ ಮಾತನಾಡಿ, ‘ತಪ್ಪು ಮಾಡಿದ ಹೆಣ್ಣಿಗೆ ಶಿಕ್ಷೆ ನೀಡುವ ಅಧಿಕಾರವನ್ನು ಪುರುಷ ಪ್ರಧಾನ ಸಮಾಜ ಸೃಷ್ಟಿಸಿಕೊಂಡಿದೆ. ನ್ಯಾಯದ ಹೆಸರಿನಲ್ಲಿ ‘ಪಂಚಾಯಿತಿ’ ನಡೆಸುವವರೆಲ್ಲರೂ ಗಂಡಸರೇ ಆಗಿದ್ದಾರೆ. ರೂಢಿಗತ ಮೌಲ್ಯ ಮೀರುವ ಹೆಣ್ಣನ್ನು ‘ಶುದ್ಧೀಕರಣ’ ಹೆಸರಿನಲ್ಲಿ ಹತ್ಯೆ ಮಾಡಲಾಗುತ್ತಿದೆ. ಮರ್ಯಾದೆ ಹತ್ಯೆ ಹೆಸರಿನಲ್ಲಿ ನಡೆಯುವ ಈ ಕೃತ್ಯಗಳನ್ನು ತಡೆಗಟ್ಟಬೇಕು’ ಎಂದರು.
ದೇಶದಲ್ಲಿ 6 ಕೋಟಿ ಹೆಣ್ಣು ಭ್ರೂಣ ಹತ್ಯೆಗಳಾಗಿರುವುದು ಕಳವಳಕಾರಿ ಸಂಗತಿ. ಕಿರುಕುಳವಾದಾಗ ಹೆಣ್ಣುಮಕ್ಕಳು ಅಂಜದೆ ಪೊಲೀಸರಿಗೆ ದೂರು ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿನಾಗಲಕ್ಷ್ಮಿ ಚೌಧರಿ ರಾಜ್ಯ ಮಹಿಳಾ ಆಯೋಗ
ಗಂಡು ಆಳ್ವಿಕೆ ವ್ಯವಸ್ಥೆಯಲ್ಲಿ ಲೈಂಗಿಕ ದೌರ್ಜನಕ್ಕೆ ಒಳಗಾದ ಹೆಣ್ಣು ಅನ್ಯಾಯವನ್ನು ಹೇಳಿಕೊಳ್ಳಲು ಬಾಯಿ ಇಲ್ಲದಂತಾಗಿದೆ.ಹೇಮಾ ಪಟ್ಟಣಶೆಟ್ಟಿ ಕವಯತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.