ADVERTISEMENT

ಕೋರಿಕೆಗೆ ಇರಲಿ ವಿವೇಕದ ಬೇಲಿ

ಪಶ್ಚಿಮದ ಅರಿವು /ಹಾರಿತಾನಂದ
Published 19 ಏಪ್ರಿಲ್ 2019, 19:30 IST
Last Updated 19 ಏಪ್ರಿಲ್ 2019, 19:30 IST
ಕಲೆ: ವಿಜಯಶ್ರೀ ನಟರಾಜ್
ಕಲೆ: ವಿಜಯಶ್ರೀ ನಟರಾಜ್   

ಒಬ್ಬ ವೃದ್ಧ ಕಾಡಿನಲ್ಲಿ ಮರವನ್ನು ಕಡಿದು ಸೌದೆಯನ್ನು ಸಿದ್ಧಮಾಡುತ್ತಿದ್ದ. ನಿಃಶಕ್ತಿಯ ಕಾರಣದಿಂದಾಗಿಯೂ ವಯಸ್ಸಿನ ಕಾರಣದಿಂದಾಗಿಯೂ ತುಂಬ ದಣಿದುಹೋದ. ಅವನಿಂದ ಸೌದೆಯ ಹೊರೆಯನ್ನು ಎತ್ತುವುದಕ್ಕಿದರಲಿ, ಅದನ್ನು ಅಲುಗಾಡಿಸಲೂ ಆಗಲಿಲ್ಲ. ಹತಾಶೆಯಿಂದ ಅವನು ‘ಅಯ್ಯೋ! ಈ ವೃದ್ಧಾಪ್ಯದಿಂದ ದಣಿದುಹೋಗಿರುವೆ; ನನಗೆ ಸಾವಾದರೂ ಬರಬಾರದೆ’ ಎಂದು ಉದ್ಗರಿಸಿದ.

ಆಶ್ಚರ್ಯ! ಸಾವು ಅವನ ಮುಂದೆ ಪ್ರತ್ಯಕ್ಷವಾಯಿತು. ‘ಅಯ್ಯಾ! ನನ್ನನ್ನು ಕರೆದ ಉದ್ದೇಶವಾದರೂ ಏನು’ ಎಂದು ಅವನನ್ನು ಪ್ರಶ್ನಿಸಿದ.

ಆ ಮುದುಕ ತನ್ನ ಮುಂದೆ ನಿಂತಿರುವ ಸಾವನ್ನು ಕಂಡು ನಡುಗಿಹೋದ; ಒಂದು ಕ್ಷಣ ಏನು ಮಾಡಬೇಕೆಂದು ತೋಚಲಿಲ್ಲ. ನಿಧಾನಕ್ಕೆ ಸುಧಾರಿಸಿಕೊಂಡ ಅವನು ಸಾವನ್ನು ಕುರಿತು ‘ಅಪ್ಪಾ ಮಹಾನುಭಾವ! ಈ ಸೌದೆಯ ಹೊರೆಯನ್ನು ಎತ್ತಲು ನನಗೆ ಆಗುತ್ತಿಲ್ಲ. ದಯವಿಟ್ಟು ಈ ಹೊರೆಯನ್ನು ನನ್ನ ತಲೆಯ ಮೇಲೆ ಇರಿಸುವೆಯಾ’ ಎಂದು ವಿನಂತಿಸಿಕೊಂಡ.

ADVERTISEMENT

* * *

ಉದ್ವೇಗದಲ್ಲಿಯೋ ಹತಾಶೆಯಲ್ಲಿಯೋ ಉತ್ಸಾಹದಲ್ಲಿಯೋ – ಕೆಲವೊಮ್ಮೆ ನಾವು ಏನೇನನ್ನೋ ಬಯಸುತ್ತೇವೆ. ನಾವು ಬಯಸುತ್ತಿರುವುದು ನಿಜವಾಗಿಯೂ ನಮಗೆ ಬೇಕೋ ಬೇಡವೋ ಎನ್ನುವುದನ್ನೂ ನಾವು ಯೋಚಿಸಿರುವುದಿಲ್ಲ. ನಮ್ಮ ಬಯಕೆಯೇನಾದರೂ ಒಂದು ವೇಳೆ ಈಡೇರುವಂಥ ಸಂದರ್ಭ ಎದುರಾದರೆ ಅದನ್ನು ಸ್ವೀಕರಿಸಿಲು ನಾವು ಎಷ್ಟು ಸಿದ್ಧದಿದ್ದೇವೆ ಎಂದೂ ಯೋಚಿಸಿರುವುದಿಲ್ಲ. ದೊಡ್ಡ ಮನೆ ಇರಲಿ ಎಂದು ಬಯಸುತ್ತೇವೆ; ಅಂಥದೊಂದು ಬಂಗ್ಲೆಯನ್ನು ಕಟ್ಟಿಸಿದ ಮೇಲೆ ಅದನ್ನು ಸ್ವಚ್ಛಮಾಡುವುದೇ ಸಾಹಸವಾಗಿ ‘ಯಾಕಾದರೂ ಈ ಮನೆಗೆ ಬಂದೆನೋ’ ಎಂದು ಅಂದುಕೊಳ್ಳುತ್ತೇವೆ.

ಹಳ್ಳಿಯನ್ನು ಬಿಟ್ಟು ನಗರಕ್ಕೆ ಬಂದರೆ ಜೀವನ ಸುಖಕರವಾಗಿರುತ್ತದೆ ಎಂದು ಬಯಸುತ್ತೇವೆ; ನಗರಕ್ಕೆ ಬಂದ ಮೇಲೆ ಅಲ್ಲಿಯ ಸಂಕಷ್ಟಗಳಿಗೆ ಸೊರಗಿ ನೆಮ್ಮದಿಯನ್ನೇ ಕಳೆದುಕೊಳ್ಳುತ್ತೇವೆ. ಹಣ ಇದ್ದರೆ ಸಾಕು, ಸಂತೋಷ ತಾನೇ ತಾನಾಗಿ ಸಿಗುತ್ತದೆ – ಎಂದು ಅನ್ನ–ನೀರು ಬಿಟ್ಟು ದುಡ್ಡನ್ನು ಹೇರಳವಾಗಿ ಸಂಪಾದಿಸುತ್ತೇವೆ; ಆದರೆ ದುಡ್ಡು ಸೇರುತ್ತದೆಯೇ ವಿನಾ ಸಂತೋಷ ಎನ್ನುವುದು ಹತ್ತಿರವೂ ಸುಳಿಯುವುದಿಲ್ಲ. ಈ ಪಟ್ಟಿಯನ್ನು ಇನ್ನೂ ಬೆಳೆಸಬಹುದೆನ್ನಿ!

ದೇಹಕ್ಕೆ ಮುಪ್ಪು ಬಂದಾಗ ಶಕ್ತಿ ಕುಂದುತ್ತದೆ. ಇಡುವ ಒಂದೊಂದು ಹೆಜ್ಜೆಯೂ ಭಾರವಾಗುತ್ತದೆ. ಜೀವನ ಸಾಕು ಎನಿಸುತ್ತದೆ. ಆದರೆ ಇದು ಆ ಕ್ಷಣಕ್ಕೆ ಮಾತ್ರವೇ. ಮನುಷ್ಯನಿಗೆ ಆಸ್ತಿ–ಅಂತಸ್ತು–ಆಯುಸ್ಸು – ಇವನ್ನು ಇಷ್ಟೇ ಸಾಕು ಎಂದು ಹೇಳಲಾರ; ಎಷ್ಟಿದ್ದರೂ ಕಡಿಮೆಯೇ. ಆದರೆ ಮೈ ಸೋತು ಸುಸ್ತಾಗಿದ್ದ ಆ ಮುದುಕ ಸಾವನ್ನು ಆ ಕ್ಷಣವೇನೋ ಕೋರಿಕೊಂಡ; ನಾವೆಲ್ಲರೂ ಆಗಾಗ ಏನೇನನ್ನೋ ಗೊಣಗಿಕೊಳ್ಳುವಂತೆ! ಸಾವು ಎದುರಿಗೆ ಬಂದು ನಿಂತಾಗ ಮಾತ್ರ ಅವನಿಗೆ ಗಾಬರಿಯಾಯಿತು.

ಅವನದ್ದು ಆ ಕ್ಷಣದ ಹತಾಶೆಯೇ ಹೊರತು ಅದು ಅವನ ದಿಟವಾದ ಬಯಕೆ ಆಗಿರಲ್ಲವಷ್ಟೆ. ಅಂತೆಯೇ ನಾವು ಕೂಡ ನಮ್ಮ ಆಸೆಗಳನ್ನು ಪರಾಮರ್ಶೆಗೆ ಒಡ್ಡಬೇಕು. ಅವುಗಳ ದಿಟವಾದ ಗೊತ್ತು–ಗುರಿಗಳನ್ನು ಅರಿಯಬೇಕು. ಆಗ ಮಾತ್ರವೇ ನಮ್ಮ ಬಯಕೆಗೂ ಅರ್ಥ ಬರುವುದು; ಬಯಕೆಯನ್ನು ಪೂರೈಸುವ ವಸ್ತುಗಳು ಸಿಕ್ಕರೂ ಅವನ್ನು ಸ್ವೀಕರಿಸುವ ಮನೋಧರ್ಮವೂ ಸಿದ್ಧವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.